வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
90ನೇ ಅಧ್ಯಾಯ
1 : ಪ್ರಭೂ, ತಲತಲಾಂತರಕ್ಕೆ I ಶ್ರೀನಿವಾಸ ನೀನೆಮಗೆ II
2 : ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ I ಭೂದೇಶಗಳು ಆಗುವುದಕೆ ಮೊದಲಿಂದ I ನೀನೆಮಗೆ ದೇವರು ಯುಗಯುಗಗಳಿಂದ II
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ I ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ II
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ I ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ II
5 : ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II
6 : ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II
7 : ಇಲ್ಲವಾಗುವೆವು ನಿನ್ನ ಕೋಪದಿಂದ I ತಲ್ಲಣಗೊಳ್ವೆವು ನಿನ್ನ ರೌದ್ರದಿಂದ II
8 : ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ ಪಾಪದೋಷಗಳು I ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ ಗುಪ್ತಾಪರಾಧಗಳು II
9 : ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು I ನಿಟ್ಟುಸಿರಿನಂತೆ ಮುಗಿವುದೆಮ್ಮ ಬದುಕುಬಾಳು II
10 : ನಮ್ಮ ಆಯುಷ್ಕಾಲ ಎಪ್ಪತ್ತು ವರುಷ I ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ II
11 : ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II
12 : ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು I ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು II
13 : ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ? I ನಿನ್ನೀ ಸೇವಕರ ಮೇಲಿರಲಿ ಮರುಕ II
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ I ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ II
15 : ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ I ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷಕಾಲ II
16 : ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ I ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ II
17 : ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ I ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ I ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ II