P. O. C ബൈബിള്
ಹಳೆಯ ಒಡಂಬಡಿಕೆ
ವಿಮೋಚನಕಾಂಡ
20ನೇ ಅಧ್ಯಾಯ
- Verse 1: ದೇವರು ಕೊಟ್ಟ ಆಜ್ಞೆಗಳು ಇವು:
- Verse 2: “ನಾನೇ ನಿನ್ನ ದೇವರಾದ ಸರ್ವೇಶ್ವರ; ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು.
- Verse 3: ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು.
- Verse 4: ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ, ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ.
- Verse 5: ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬರಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ.
- Verse 6: ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ.
- Verse 7: ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆಂದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗ ಪಡಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
- Verse 8: ಸಬ್ಬತ್ ದಿನವನ್ನು ದೇವರ ದಿನವೆಂದು ತಿಳಿದು ಪವಿತ್ರವಾಗಿ ಆಚರಿಸು.
- Verse 9: ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು.
- Verse 10: ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ಮೀಸಲಾದ ವಿಶ್ರಾಂತಿ ದಿನ. ಅಂದು ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡು ಹೆಣ್ಣು ಮಕ್ಕಳು, ನಿನ್ನ ಗಂಡು ಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು.
- Verse 11: ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡೆನು. ಆದುದರಿಂದ ಅದನ್ನು ಸರ್ವೇಶ್ವರನ ವಿಶ್ರಾಂತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು.
- Verse 12: ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ.
- Verse 13: ಕೊಲೆಮಾಡಬೇಡ.
- Verse 14: ವ್ಯಭಿಚಾರಮಾಡಬೇಡ.
- Verse 15: ಕದಿಯಬೇಡ.
- Verse 16: ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ.
- Verse 17: ನೆರೆಯವನ ಮನೆಯನ್ನು ಬಯಸಬೇಡ; ಅವನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ.
- Verse 18: ಆ ಗುಡುಗು ಮಿಂಚನ್ನು, ತುತೂರಿ ಧ್ವನಿಯನ್ನು ಹಾಗು ಬೆಟ್ಟದಿಂದ ಹೊರಡುತ್ತಿದ್ದ ಹೊಗೆಯನ್ನು ಜನರೆಲ್ಲರು ನೋಡಿದರು. ನೋಡಿ ನಡುಗುತ್ತಾ ದೂರದಲ್ಲೇ ನಿಂತುಕೊಂಡರು.
- Verse 19: ಅವರು ಮೋಶೆಗೆ, “ನೀನೇ ನಮ್ಮೊಡನೆ ಮಾತಾಡು, ನಾವು ಕೇಳುತ್ತೇವೆ. ದೇವರು ನಮ್ಮೊಡನೆ ಮಾತಾಡಿದರೆ ನಾವು ಸತ್ತು ಹೋಗುತ್ತೇವೆ,” ಎಂದು ಹೇಳಿದರು.
- Verse 20: ಅದಕ್ಕೆ ಮೋಶೆ, “ಭಯಪಡಬೇಡಿ; ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಬಂದಿದ್ದಾರೆ; ಹೀಗೆ ದೈವಭೀತಿ ನಿಮ್ಮ ಕಣ್ಮುಂದಿದ್ದು ನೀವು ಪಾಪಮಾಡದೆ ಇರುವಿರಿ,” ಎಂದನು.
- Verse 21: ಮೋಶೆಯೊಬ್ಬನೇ ದೇವರಿದ್ದ ಕಾರ್ಮುಗಿಲನ್ನು ಸಮೀಪಿಸಿದ್ದನು. ಜನರು ದೂರದಲ್ಲೇ ನಿಂತಿದ್ದರು.
- Verse 22: ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆ ಹೇಳಿದರು: “ಇಸ್ರಯೇಲರಿಗೆ ಹೀಗೆಂದು ತಿಳಿಸು - ‘ನಾನು ಆಕಾಶದಿಂದ ನಿಮ್ಮೊಡನೆ ಮಾತಾಡಿದ್ದೇನೆಂದು ನಿಮಗೆ ಗೊತ್ತಿದೆ.
- Verse 23: ಆದ್ದರಿಂದ ನೀವು ನನಗೆ ಪ್ರತಿಯಾಗಿ ಬೆಳ್ಳಿಬಂಗಾರಗಳಿಂದ ದೇವರುಗಳನ್ನು ಮಾಡಿಕೊಳ್ಳಬಾರದು,
- Verse 24: ನನಗಾಗಿ ನೀವು ಮಣ್ಣಿನಿಂದ ಒಂದು ಬಲಿಪೀಠವನ್ನು ಮಾಡಬೇಕು. ಅದರ ಮೇಲೆ ನಿಮ್ಮ ದನಕುರಿಗಳನ್ನು ದಹನ ಬಲಿಯನ್ನಾಗಿಯೂ ಸಮಾಧಾನ ಬಲಿಯನ್ನಾಗಿಯೂ ಸಮರ್ಪಿಸಬೇಕು.
- Verse 25: ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
- Verse 26: ನೀವು ನನಗಾಗಿ ಕಲ್ಲಿನಿಂದ ಬಲಿಪೀಠವನ್ನು ಕಟ್ಟಬೇಕಾದರೆ ಕೆತ್ತಿರುವ ಕಲ್ಲುಗಳಿಂದ ಕಟ್ಟಕೂಡದು. ಏಕೆಂದರೆ ಉಳಿ ಮುಂತಾದುದನ್ನು ಉಪಯೋಗಿಸಿದರೆ ಅದು ಅಪವಿತ್ರವಾಗುವುದು.
- Verse 27: ಅದೂ ಅಲ್ಲದೆ ನಿಮ್ಮ ನಗ್ನತೆ ನನ್ನ ಪೀಠದ ಮೇಲೆ ಕಾಣಿಸಿಕೊಳ್ಳದಂತೆ ಮೆಟ್ಟಲುಗಳ ಮೂಲಕ ಅದರ ಮೇಲೆ ಹತ್ತಬೇಡಿ.