ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
30ನೇ ಅಧ್ಯಾಯ
- Verse 1: ಮೋಶೆ ಇಸ್ರಯೇಲರ ಕುಲನಾಯಕರಿಗೆ ಹೀಗೆಂದು ಹೇಳಿದನು: ಸರ್ವೇಶ್ವರ ಸ್ವಾಮಿಯ ಆಜ್ಞೆ ಇದು:
- Verse 2: “ನಿಮ್ಮಲ್ಲಿ ಯಾರಾದರು ಸರ್ವೇಶ್ವರನಿಗೆ ಹರಕೆ ಮಾಡಿದರೆ, ಇಲ್ಲವೆ ತಾನು ವಸ್ತುವೊಂದನ್ನು ಮುಟ್ಟುವುದಿಲ್ಲವೆಂದು ಆಣೆಯಿಟ್ಟು ಹೇಳಿದರೆ ಅಂಥವನು ತನ್ನ ಮಾತನ್ನು ಮೀರದೆ ನುಡಿದಂತೆ ನೆರವೇರಿಸಬೇಕು.
- Verse 3: “ಕನ್ಯೆಯೊಬ್ಬಳು ತನ್ನ ತಂದೆಯ ಮನೆಯಲ್ಲಿದ್ದು ಸರ್ವೇಶ್ವರನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವುದಾದರೊಂದನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆಮಾಡಿದಾಗ
- Verse 4: ಅವಳ ತಂದೆ ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವುದನ್ನು ಮುಟ್ಟುವುದಿಲ್ಲವೆಂದು ಹೇಳಿದ್ದಳೋ ಅದನ್ನು ಮುಟ್ಟಲೇಬಾರದು.
- Verse 5: ಆದರೆ ಅವಳ ತಂದೆ ಆ ಸಂಗತಿಯನ್ನು ತಿಳಿದು ಹಾಗೆ ಮಾಡಬಾರದೆಂದು ಆಜ್ಞೆ ಮಾಡಿದರೆ ಅವಳು ಮಾಡಿದ ಹರಕೆ ಹಾಗೂ ಪ್ರತಿಜ್ಞೆಗಳು ವ್ಯರ್ಥವಾಗುತ್ತವೆ. ತಂದೆ ಬೇಡವೆಂದು ಹೇಳಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.
- Verse 6: “ಆಕೆ ಮಾಡಿದ ಹರಕೆ ಇಲ್ಲವೆ ಪರ್ಯಾಲೋಚಿಸದೆ ಮಾಡಿದ ಪ್ರತಿಜ್ಞೆ ಮುಗಿಯುವಷ್ಟರೊಳಗೆ ಅವಳಿಗೆ ಮದುವೆಯಾಯಿತೆಂದು ಇಟ್ಟುಕೊಳ್ಳೋಣ.
- Verse 7: ಆಗ ಗಂಡಸು ಆ ಪ್ರಮಾಣದ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಡೆಯಲೇಬೇಕು.
- Verse 8: ಆದರೆ ಗಂಡನು, ಕೇಳಿದಾಗಲೆ ಬೇಡವೆಂದು ಆಜ್ಞೆ ಮಾಡಿದರೆ ಆ ಹರಕೆ ಇಲ್ಲವೆ ಆ ಅವಿಚಾರ ಪ್ರತಿಜ್ಞೆ ನಿರರ್ಥಕವಾಗುತ್ತವೆ. ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.
- Verse 9: “ವಿಧವೆ ಇಲ್ಲವೆ ಗಂಡನಿಂದ ಬೇರ್ಪಟ್ಟ ಮಹಿಳೆ ಇಂಥ ಪ್ರಮಾಣವನ್ನು ಕೈಗೊಂಡಿದ್ದರೆ ಅದು ನಿಲ್ಲುತ್ತದೆ. ಅವಳು ಅದನ್ನು ನೆರವೇರಿಸಬೇಕು.
- Verse 10: “ಮಡದಿ ಅಂಥ ಹರಕೆಯನ್ನಾಗಲಿ, ಪ್ರಮಾಣವನ್ನಾಗಲಿ ಮಾಡಿದಾಗ
- Verse 11: ಅವಳ ಗಂಡ ಅದನ್ನು ತಿಳಿದೂ ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುತ್ತವೆ.
- Verse 12: ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುತ್ತವೆ. ಗಂಡನು ರದ್ದುಮಾಡಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.
- Verse 13: ಹೆಂಡತಿ ಮಾಡಿದ ಹರಕೆಯನ್ನು ಹಾಗು ಉಪವಾಸವಿರುವೆನೆಂದು ಅವಳು ಮಾಡಿದ ಪ್ರಮಾಣವನ್ನು ದೃಢೀಕರಿಸುವುದಕ್ಕಾಗಲಿ, ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಹಕ್ಕಿದೆ.
- Verse 14: ಆದರೆ ಅವಳ ಗಂಡ ಯಾವ ಅಡ್ಡಿಯನ್ನೂ ಮಾಡದೆ ದಿನದಿನಕ್ಕೂ ಸುಮ್ಮನಿದ್ದರೆ ಅವಳ ಹರಕೆಗಳನ್ನೂ ಅವನು ಅನುಮೋದಿಸಿದಂತಾಗುವುದು.
- Verse 15: ಅನಂತರ ಅವನು ಬೇಡವೆಂದರೆ ಆ ಪಾಪದ ಫಲವನ್ನು ಅವನೇ ಅನುಭವಿಸಬೇಕು.”
- Verse 16: ಇವೇ ಗಂಡಹೆಂಡಿರ ವಿಷಯವಾಗಿ ಹಾಗು ಇನ್ನೂ ಮದುವೆಯಿಲ್ಲದ ಪುತ್ರಿ ಮತ್ತು ಅವಳ ತಂದೆಯ ವಿಷಯವಾಗಿ ಸರ್ವೇಶ್ವರ ಸ್ವಾಮಿ ಕೊಟ್ಟ ನಿಯಮಗಳು.