ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
41ನೇ ಅಧ್ಯಾಯ
- Verse 1: ದಿಕ್ಕಿಲ್ಲದವನನು ಲಕ್ಷಿಸುವವನು ಧನ್ಯನು I ಆಪತ್ಕಾಲದಲಿ ಆದವನನು ಪ್ರಭು ರಕ್ಷಿಸುವನು II
- Verse 2: ಅಂಥವನನು ಪ್ರಭು ಜೀವದಿಂದಿರಿಸುವನು, ಸುರಕ್ಷಿತವಾಗಿಡುವನು I ನಾಡಿನಲ್ಲವನನು ಧನ್ಯನಾಗಿಸುವನು, ಶತ್ರುಗಳಿಗಧೀನನಾಗಿಸನು II
- Verse 3: ರೋಗದಿ ಹಾಸಿಗೆ ಹಿಡಿದಿರಲು ಪ್ರಭು ಸುಧಾರಿಸುವನು I ರೋಗ ನಿವಾರಿಸಿ ಅವನಿಗೆ ಆರೋಗ್ಯವನೀಯುವನು II
- Verse 4: ನಾನಂತು, “ಪ್ರಭೂ ಕರುಣಿಸು, ಗುಣಪಡಿಸೆನ್ನನು I ನಿನಗೆ ವಿರುದ್ಧ ಪಾಪಗೈದೆ” ಎಂದು ಬೇಡುವೆನು II
- Verse 5: “ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II
- Verse 6: ನೋಡಬರುವರು, ನವಿರಾದ ಮಾತನಾಡುವರವರು I ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ ಹರಡುವರು II
- Verse 7: ಹಗೆಯವರು ಎನಗೆ ವಿರುದ್ಧ ಗುಜುಗುಟ್ಟುತಿಹರು I ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತಿಹರು: II
- Verse 8: “ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ I ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ” II
- Verse 9: ನನ್ನಾಪ್ತಮಿತ್ರನು, ನನ್ನ ನಂಬಿಕೆಗೆ ಪಾತ್ರನು I ನನ್ನೊಡನೆ ಉಂಡವನು, ನನಗೆರಡು ಬಗೆದಿಹನು II
- Verse 10: ನೀನಾದರೋ ಪ್ರಭು ಕರುಣಿಸು, ಏಳ ಮಾಡೆನ್ನನು I ನಾನವರಿಗಾಗಿ ಮುಯ್ಯಿಗೆ ಮುಯ್ಯಿ ತೀರಿಸುವೆನು II
- Verse 11: ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು I ಅರಿತುಕೊಳ್ವೆನು ನಿನ್ನೊಲುಮೆ ನನಗಿದೆಯೆಂದು II
- Verse 12: ನಿರ್ದೋಷಿಯಾದೆನ್ನನು ನೀನುದ್ಧರಿಸುವೆ I ಚಿರಕಾಲ ನಿನ್ನ ಸನ್ನಿಧಿಯಲ್ಲೆನ್ನನು ಇರಿಸುವೆ II
- Verse 13: ಇಸ್ರಯೇಲರ ದೇವರಾದ ಪ್ರಭುವಿಗೆ ಜಯ I ಯುಗಯುಗಾಂತರಕು ಆಮೆನ್ ಆಮೆನ್, ಜಯಜಯ II