ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
96ನೇ ಅಧ್ಯಾಯ
- Verse 1: ಹೊಸಗೀತೆಯನು ಹಾಡಿರಿ ಪ್ರಭುವಿಗೆ I ವಿಶ್ವವೆಲ್ಲವು ಹಾಡಲಿ ಆತನಿಗೆ II
- Verse 2: ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ I ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ II
- Verse 3: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ I ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ II
- Verse 4: ಏಕೆನೆ ಮಹಾತ್ಮನು ಪ್ರಭು, ಬಲು ಸ್ತುತ್ಯರ್ಹನು I ಸಕಲ ದೇವರುಗಳಿಗಿಂತಲೂ ಘನಗಂಭೀರನು II
- Verse 5: ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ I ಪ್ರಭುವಿನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ II
- Verse 6: ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ I ಶಕ್ತಿಸೌಂದರ್ಯ ಆತನ ಗರ್ಭಗುಡಿಯಲಿ II
- Verse 7: ಶಕ್ತಿಸಾಮರ್ಥ್ಯ ಪ್ರಭುವಿನದೇ ಎಂದು I ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದು II
- Verse 8: ಆತನ ನಾಮಕೆ ತನ್ನಿ ಘನತೆಗೌರವವನು I ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು II
- Verse 9: ಪ್ರಭುವಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I
- Verse 10: ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ I ಕದಲದ ಸ್ಥಿರತೆಯನು ಇತ್ತಿಹನು ಧರೆಗೆ I ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ II
- Verse 11: ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು I ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು II
- Verse 12: ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು I ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು II
- Verse 13: ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ I ಜಗಕು, ಜನತೆಗು ತೀರ್ಪಿಡುವನು ನೀತಿನಿಯಮಾನುಸಾರವಾಗಿ II