வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
102ನೇ ಅಧ್ಯಾಯ
- Verse 1: ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ಕೂಗು ಸೇರಲಿ ನಿನ್ನ ಬಳಿಗೆ II
- Verse 2: ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ I ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ II
- Verse 3: ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ I ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ II
- Verse 4: ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ I ತಿಂಡಿತೀರ್ಥವನುಣ್ಣಲೂ ನಾ ಮರೆತುಹೋದೆ II
- Verse 5: ಕೂಗಿ ನಾ ನಿಟ್ಟುಸಿರಿಟ್ಟೆ I ಎಲುಬು ತೊಗಲು ಆಗಿಬಿಟ್ಟೆ II
- Verse 6: ಅಡವಿಯ ರಣಹದ್ದಿಗೆ ಸಮನಾದೆ I ಹಾಳುರಿನ ಗೂಗೆಯ ಹಾಗಾದೆ II
- Verse 7: ಮನೆಮೇಲಿನ ಒಂಟಿ ಪಕ್ಷಿಯಾದೆ I ಬಳಲುತ್ತಿರುವೆನು ನಿದ್ರೆಯಿಲ್ಲದೆ II
- Verse 8: ವೈರಿಗಳು ದಿನವಿಡೀ ನನ್ನ ನಿಂದಿಸುತ್ತಿಹರು I ದ್ವೇಷಿಗಳು ನನ್ನ ಹೆಸರೆತ್ತಿ ಶಪಿಸುತ್ತಿಹರು II
- Verse 9: ಬೂದಿಯೇ ನನಗೆ ಆಹಾರವಾಯಿತು I ಪಾನದಲಿ ಕಣ್ಣೀರು ಮಿಶ್ರವಾಯಿತು II
- Verse 10: ನಿನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ I ನನ್ನನು ಮೇಲಕ್ಕೆತ್ತಿ ಬಿಸಾಡಿಬಿಟ್ಟಿರುವೆಯಲ್ಲಾ II
- Verse 11: ನನ್ನ ಬಾಳು ಬೈಗಿನ ನೆರಳಂತೆ I ನಾನಿರುವೆ ಬಾಡಿದ ಹುಲ್ಲಿನಂತೆ II
- Verse 12: ನೀನಾದರೋ ಪ್ರಭು, ಸದಾ ಸಿಂಹಾಸನಾರೂಢ I ಮಾಳ್ಪರು ತಲತಲಾಂತರಕು ನಿನ್ನ ನಾಮಸ್ಮರಣ II
- Verse 13: ಎದ್ದು ಸಿಯೋನಿಗೆ ತೋರು ಸೌಜನ್ಯತೆ I ಅದಕ್ಕೆ ದಯೆತೋರಿಸುವ ಸಮಯವಿದೇ I ನಿಯಮಿತ ಕಾಲವಿದೋ ಬಂದುಬಿಟ್ಟಿದೆ II
- Verse 14: ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ I ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ II
- Verse 15: ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು I ಭಯಪಡುವರು ನಿನ್ನ ಪ್ರತಾಪಕೆ ಭೂರಾಜರುಗಳು II
- Verse 16: ಏಕೆನೆ ಪುನರುದ್ಧರಿಸುವನು ಸಿಯೋನನು I ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು II
- Verse 17: ತಿರಸ್ಕರಿಸನಾತ ನಿರ್ಗತಿಕರ ಮೊರೆಯನು I ನೆರವೇರಿಸದೆ ಬಿಡನು ಅವರ ಕೋರಿಕೆಯನು II
- Verse 18: ಮುಂದಣ ಸಂತತಿಗಿದು ಶಾಸನವಾಗಿರಲಿ I ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ II
- Verse 19: ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ I ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ II
- Verse 20: ಆಲಿಸಿದಾತನು ಬಂಧಿತರ ಗೋಳಾಟವನು I ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು II
- Verse 21: ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು I ಜನಾಂಗಗಳೂ ರಾಜ್ಯಗಳೂ ಕೂಡಿರಲು
- Verse 22: ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ I ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ II
- Verse 23: ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ ಬಲವನು I ಕಡಿಮೆಮಾಡಿಬಿಟ್ಟಿಹನು ಆತ ನನ್ನ ಆಯುಷ್ಯವನು II
- Verse 24: ಎಂತಲೆ ನಾನು : “ಅರ್ಧಾಯುಷ್ಯದಲೆ ನನ್ನೊಯ್ಯಬೇಡ ದೇವಾ I ತಲತಲಾಂತರದವರೆಗೂ ನಿನ್ನ ವರುಷಗಳು ಉಳಿದಿವೆಯಲ್ಲಾ II
- Verse 25: ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ I ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ II
- Verse 26: ನೀನಾದರೋ ಉಳಿದಿರುವೆ, ಅವೋ ಅಳಿದುಹೋಗುವುವು I ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು I ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ ಅವು II
- Verse 27: ನೀನಂತೂ ಬದಲಾಗದೆ ಇರುವೆಯಯ್ಯಾ I ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯ್ಯಾ II
- Verse 28: ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ I ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ II 7