పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
18ನೇ ಅಧ್ಯಾಯ
- Verse 1: ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ:
- Verse 2: “ಹೆತ್ತವರು ತಿಂದರು ಹುಳಿದ್ರಾಕ್ಷಿಯನ್ನು; ಚಳಿತುಹೋದವು ಅವರ ಮಕ್ಕಳ ಹಲ್ಲುಗಳು” ಎಂಬ ಗಾದೆಯನ್ನು ನೀವು ಇಸ್ರಯೇಲ್ ನಾಡನ್ನು ಕುರಿತು ಹೇಳುವುದೇಕೆ?
- Verse 3: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಯೇಲಿನಲ್ಲಿ ಇನ್ನು ಎತ್ತಬೇಕಾಗುವುದಿಲ್ಲ.
- Verse 4: ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ ಸಾಯುವನು.
- Verse 5: “ಒಬ್ಬನು ಸದ್ಧರ್ಮಿಯಾಗಿ ನ್ಯಾಯನೀತಿಗಳನ್ನು ನಡೆಸಿ,
- Verse 6: ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ,
- Verse 7: ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ;
- Verse 8: ಸಾಲಕ್ಕೆ ಬಡ್ಡಿ ತೆಗೆಯದೆ, ಲಾಭಕ್ಕೆ ಹಣಕೊಡದೆ, ಅನ್ಯಾಯಕ್ಕೆ ಕೈಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
- Verse 9: ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಗೊಂಡು, ಸತ್ಯಪರನಾಗಿಯೇ ನಡೆದರೆ, ಇಂಥವನು ಸದ್ಧರ್ಮಿ. ಆದುದರಿಂದ ಅವನು ಜೀವಿಸುವುದು ನಿಶ್ಚಯ. ಇದು ಸರ್ವೇಶ್ವರನಾದ ದೇವರ ನುಡಿ:
- Verse 10: ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
- Verse 11: ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದು, ನೆರೆಯವನ ಹೆಂಡತಿಯನ್ನು ಕೆಡಿಸಿ,
- Verse 12: ದೀನದಲಿತರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,
- Verse 13: ಅಸಹ್ಯಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣಕೊಟ್ಟು, ಹಿಂಸಾಚಾರಿಯೂ, ರಕ್ತಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.
- Verse 14: “ಇಗೋ, ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಭಯಪಟ್ಟು, ಇಂಥಾ ಕಾರ್ಯಗಳನ್ನು ನಡೆಸದೆ
- Verse 15: ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಯಾರನ್ನೂ ಹಿಂಸಿಸದೆ,
- Verse 16: ಒತ್ತೆಯನ್ನು ಕೇಳದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ,
- Verse 17: ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನು ಕೇಳದೆ, ಲಾಭಕ್ಕೆ ಹಣಕೊಡದೆ, ನನ್ನ ವಿಧಿಗಳನ್ನು ಆಚರಿಸಿ, ನನ್ನ ನಿಯಮಗಳನ್ನು ಅನುಸರಿಸಿದರೆ, ತನ್ನ ತಂದೆಯ ಅಧರ್ಮದ ನಿಮಿತ್ತ ಸಾಯನು, ಅವನು ಜೀವಿಸುವುದು ನಿಶ್ಚಯ.
- Verse 18: ಇವನ ತಂದೆಯಾದರೊ ಸ್ವಕುಲದವರನ್ನು ಬಹಳವಾಗಿ ಅರೆದು, ಸುಲಿದು, ಸ್ವಜನರ ನಡುವೆ ಕೆಟ್ಟದ್ದನ್ನು ನಡೆಸಿದ ಕಾರಣ, ಇಗೋ, ತನ್ನ ಅಧರ್ಮದಿಂದಲೇ ಸಾಯುವನು.
- Verse 19: “ಆದರೆ ನೀವು, - ‘ತಂದೆಯ ದೋಷಫಲವನ್ನು ಮಗನು ಹೇಗೆ ಅನುಭವಿಸುವುದಿಲ್ಲ?’ ಎಂದು ಆಕ್ಷೇಪಿಸುವಿರೋ? ಮಗನು ನೀತಿನ್ಯಾಯಗಳನ್ನು ನಡೆಸಿ ನನ್ನ ವಿಧಿಗಳನ್ನೆಲ್ಲಾ ಕೈಗೊಂಡು ಆಚರಿಸಿದರೆ ಖಂಡಿತ ಜೀವಿಸುವನು.
- Verse 20: ಪಾಪಮಾಡುವವನೇ ಸಾಯುವನು. ಮಗನು ತಂದೆಯ ದೋಷಫಲವನ್ನು ಅನುಭವಿಸನು; ತಂದೆಯು ಮಗನ ದೋಷಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ.
- Verse 21: “ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲವಿಧಿಗಳನ್ನು ಕೈಗೊಂಡು, ನ್ಯಾಯನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು.
- Verse 22: ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು.
- Verse 23: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ.
- Verse 24: ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.
- Verse 25: “ಆದರೆ ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ.
- Verse 26: ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು.
- Verse 27: ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
- Verse 28: ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು.
- Verse 29: ಆದರೆ ಇಸ್ರಯೇಲ್ ವಂಶದವರು ಸರ್ವೇಶ್ವರನ ಕ್ರಮ ಸರಿಯಲ್ಲ ಎಂದು ಹೇಳುತ್ತಿದ್ದಾರೆ; ಇಸ್ರಯೇಲ್ ವಂಶದವರೇ, ನನ್ನ ಕ್ರಮ, ಸರಿಯಿಲ್ಲವೇ? ನಿಮ್ಮ ಕ್ರಮವೇ ಸರಿಯಿಲ್ಲವಷ್ಟೆ.”
- Verse 30: ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ.
- Verse 31: ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿಬಿಟ್ಟು, ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ; ಇಸ್ರಯೇಲ್ ವಂಶದವರೇ, ನೀವು ಏಕೆ ಸಾಯಬೇಕು?
- Verse 32: ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪಕ್ಕೆ ವಿಮುಖರಾಗಿ ಜೀವಿಸಿರಿ; ಇದು ಸರ್ವೇಶ್ವರನಾದ ದೇವರ ನುಡಿ.”