ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ರೋಮನರಿಗೆ
2ನೇ ಅಧ್ಯಾಯ
- Verse 1: ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪುನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು.
- Verse 2: ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು.
- Verse 3: ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ?
- Verse 4: ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ?
- Verse 5: ಆದರೆ ನಿನ್ನದು ಕಠಿಣ ಹೃದಯ, ಮೊಂಡುಸ್ವಭಾವ. ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವ ಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ.
- Verse 6: ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ.
- Verse 7: ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ.
- Verse 8: ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತವೆ.
- Verse 9: ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತವೆ.
- Verse 10: ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ.
- Verse 11: ದೇವರು ಪಕ್ಷಪಾತಿ ಅಲ್ಲ.
- Verse 12: ಮೋಶೆಯ ಧರ್ಮಶಾಸ್ತ್ರದ ಅರಿವಿಲ್ಲದೆ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಒಳಗಾಗದೆಯೋ ನಾಶವಾಗುತ್ತಾರೆ. ಆ ಧರ್ಮಶಾಸ್ತ್ರದ ಅರಿವಿದ್ದೂ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಗುರಿಯಾಗುತ್ತಾರೆ.
- Verse 13: ಧರ್ಮಶಾಸ್ತ್ರವನ್ನು ಆಲಿಸಿದ ಮಾತ್ರಕ್ಕೆ ಯಾರೂ ದೇವರೊಡನೆ ಸತ್ಸಂಬಂಧವನ್ನು ಪಡೆಯಲು ಸಾಧ್ಯವಿಲ್ಲ. ಅದನ್ನು ಆಲಿಸುವುದರ ಜೊತೆಗೆ ಪಾಲಿಸಲೂ ಬೇಕು.
- Verse 14: ಯೆಹೂದ್ಯರಲ್ಲದವರಿಗೆ, ಮೋಶೆಯ ಧರ್ಮಶಾಸ್ತ್ರ ಇರುವುದಿಲ್ಲ. ಅವರು ಅದರ ವಿಧಿನಿಯಮಗಳನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇ ಆದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ.
- Verse 15: ಧರ್ಮಶಾಸ್ತ್ರದ ವಿಧಿನಿಯಮಗಳು ಅವರ ಹೃದಯಗಳಲ್ಲಿ ಲಿಖಿತವಾಗಿವೆಯೆಂದು ಅವರ ನಡತೆಯಿಂದಲೇ ವೇದ್ಯವಾಗುತ್ತದೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
- Verse 16: ನಾನು ಬೋಧಿಸುವ ಶುಭಸಂದೇಶದ ಪ್ರಕಾರ, ದೇವರು ಯೇಸುಕ್ರಿಸ್ತರ ಮುಖಾಂತರ ಮಾನವನ ಗುಟ್ಟುಗಳನ್ನು ರಟ್ಟುಮಾಡಿ, ತೀರ್ಪುಕೊಡುವ ದಿನ ಬಂದೇ ಬರುತ್ತದೆ. ಆ ದಿನ ಇದೆಲ್ಲಾ ಸಂಭವಿಸುತ್ತದೆ.
- Verse 17: “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ದೇವರಿಗೆ ಸೇರಿದವನೆಂದು ಕೊಚ್ಚಿಕೊಳ್ಳುತ್ತೀಯೆ;
- Verse 18: ದೇವರ ಚಿತ್ತವನ್ನು ಅರಿತಿರುವುದಾಗಿ ನೆನೆಸುತ್ತೀಯೆ: ಉತ್ತಮವಾದುದನ್ನು ಆರಿಸಿಕೊಳ್ಳಲು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ಹೇಳಿಕೊಳ್ಳುತ್ತೀಯೆ;
- Verse 19: ನೀನು ಕುರುಡರಿಗೆ ದಾರಿ ತೋರಿಸುವವನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಬುದ್ಧಿಹೀನರಿಗೆ ಬೋಧಕನೂ
- Verse 20: ಮಕ್ಕಳಿಗೆ ಶಿಕ್ಷಕನೂ ಆಗಿರುವುದಾಗಿ ದೃಢವಾಗಿ ನಂಬಿಕೊಂಡಿದ್ದೀಯೆ; ಧರ್ಮಶಾಸ್ತ್ರದಲ್ಲಿ ಜ್ಞಾನ ಮತ್ತು ಸತ್ಯ ಮೇಳೈಸಿರುವುದಾಗಿ ಭಾವಿಸುತ್ತೀಯೆ.
- Verse 21: ಹೀಗೆ, ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೊಳ್ಳಬಾರದೇನು? “ಕದಿಯಬಾರದು” ಎಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತೀಯೇನು?
- Verse 22: “ವ್ಯಭಿಚಾರ ಮಾಡಬಾರದು” ಎಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೇನು? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತೀಯೇನು?
- Verse 23: ದೇವರಿಂದಲೇ ನಿಯಮಗಳನ್ನು ಪಡೆದಿರುವುದಾಗಿ ಕೊಚ್ಚಿಕೊಳ್ಳುವ ನೀನು ಆ ನಿಯಮಗಳನ್ನೇ ಉಲ್ಲಂಘಿಸಿ ದೇವರಿಗೆ ದ್ರೋಹಬಗೆಯುತ್ತೀಯೇನು?
- Verse 24: ಈ ಕಾರಣದಿಂದ. “ನಿಮ್ಮ ದೆಸೆಯಿಂದಲೇ ಯೆಹೂದ್ಯರಲ್ಲದವರು ದೇವರ ಹೆಸರನ್ನು ದೂಷಿಸುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.
- Verse 25: ನೀನು ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡೆದರೆ, ನೀನು ಮಾಡಿಸಿಕೊಂಡಿರುವ ಸುನ್ನತಿಗೆ ಅರ್ಥವಿದೆ. ಆದರೆ ನಿನ್ನ ನಡತೆ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿದ್ದರೆ ನೀನು ಸುನ್ನತಿ ಮಾಡಿಸಿಕೊಂಡಿದ್ದರೂ ಮಾಡಿಸಿಕೊಳ್ಳದಂತೆಯೇ ಸರಿ.
- Verse 26: ಸುನ್ನತಿ ಮಾಡಿಸಿಕೊಳ್ಳದ ಮತ್ತೊಬ್ಬನು ಧರ್ಮಶಾಸ್ತ್ರದ ವಿಧಿಗಳನ್ನು ಪಾಲಿಸಿಕೊಂಡು ಬಂದವನಾಗಿದ್ದರೆ, ದೇವರು ಅವನನ್ನು ಸುನ್ನತಿ ಮಾಡಿಸಿಕೊಂಡವನಂತೆ ಪರಿಗಣಿಸುವುದಿಲ್ಲವೆ?
- Verse 27: ನೀವು ಸುನ್ನತಿ ಮಾಡಿಸಿಕೊಂಡಿದ್ದೀರಿ; ಲಿಖಿತ ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
- Verse 28: ಬಾಹ್ಯಾಚರಣೆಯಲ್ಲಿ ಮಾತ್ರ ಯೆಹೂದ್ಯನಾಗಿರುವವನು ನಿಜವಾದ ಯೆಹೂದ್ಯನಲ್ಲ. ಅಂತೆಯೇ, ನಿಜವಾದ ಸುನ್ನತಿಯು ಕೇವಲ ಬಾಹ್ಯಲಕ್ಷಣವುಳ್ಳ ಶಾರೀರಿಕ ಪದ್ಧತಿಯಲ್ಲ.
- Verse 29: ಯಾರು ಅಂತರಂಗದಲ್ಲಿ ಯೆಹೂದ್ಯನಾಗಿರುತ್ತಾನೋ ಅವನೇ ನಿಜವಾದ ಯೆಹೂದ್ಯನು. ಅಂಥವನಿಗೆ ಅಂತರ್ಯದಲ್ಲಿ ಸುನ್ನತಿಯಾಗಿರುತ್ತದೆ. ಇದು ಲಿಖಿತ ಧರ್ಮಶಾಸ್ತ್ರದಿಂದ ಆದದ್ದಲ್ಲ, ದೇವರಾತ್ಮ ಅವರಿಂದ ಆದ ಕಾರ್ಯ; ಇಂಥವನು ಮೆಚ್ಚುಗೆಯನ್ನು ಪಡೆಯುವುದು ಮನುಷ್ಯನಿಂದಲ್ಲ, ದೇವರಿಂದ.