P. O. C ബൈബിള്
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
30ನೇ ಅಧ್ಯಾಯ
- Verse 1: “ಈಗಲಾದರೊ ನನಗಿಂತ ಚಿಕ್ಕವರು ನನ್ನನ್ನು ಪರಿಹಾಸ್ಯಮಾಡುತ್ತಾರೆ. ಇವರ ಹೆತ್ತವರು ನನ್ನ ಮುಂದೆ. ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆ.
- Verse 2: ಅವರ ಭುಜಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಪುಷ್ಟಿಯು ಕುಗ್ಗಿಹೋಗಿತ್ತು!
- Verse 3: ಕೊರತೆಯಿಂದ, ಬರದಿಂದ ಅವರು ಸೊರಗಿಹೋಗಿದ್ದರು ನಿನ್ನೆಯವರೆಗೂ ಹಾಳುಬೀಳಾದ ನೆಲವನ್ನು ನೆಕ್ಕುತ್ತಿದ್ದರು.
- Verse 4: ಚಕ್ಕೋತ ಸೊಪ್ಪುಗಳನ್ನು ಪೊದೆಗಳಿಂದ ಕಿತ್ತು ತಿನ್ನುತ್ತಿದ್ದರು ಜಾಲಿಯ ಬೇರೇ ಅವರಿಗೆ ಆಹಾರವಾಗಿತ್ತು.
- Verse 5: ಜನರು ಅವರನ್ನು ತಳ್ಳಿಬಿಟ್ಟಿದ್ದರು ಕಳ್ಳರನ್ನೋ ಎಂಬಂತೆ ಕೂಗಿ ಅಟ್ಟಿಬಿಟ್ಟಿದ್ದರು.
- Verse 6: ವಾಸಮಾಡುತ್ತಿದ್ದರವರು ಭೀಕರ ಡೊಂಗರುಗಳಲಿ, ನೆಲದ ಬಿಲಗಳಲಿ, ಬಂಡೆಗಳ ಸಂದುಗಳಲ್ಲಿ.
- Verse 7: ಅರಚಿಕೊಳ್ಳುತ್ತಿದ್ದರು ಪೊದೆಗಳ ನಡುವೆ ಕೂಡಿಕೊಳ್ಳುತ್ತಿದ್ದರು ಮುಳ್ಳುಗಿಡಗಳ ಕೆಳಗೆ.
- Verse 8: ಮೂರ್ಖರ ಮಕ್ಕಳು, ನೀಚ ಜಾತಿಯವರು ನಾಡಿನಿಂದ ಹೊರದೂಡಲ್ಪಟ್ಟವರು ಅವರಾಗಿದ್ದರು.
- Verse 9: ಅಂಥವರ ಲಾವಣಿಗೆ ನಾನೀಗ ಗುರಿಯಾದೆ ಅವರ ಕಟ್ಟುಕತೆಗಳಿಗೆ ಅಡ್ಡಹೆಸರಾದೆ.
- Verse 10: ನನಗೆ ಅಸಹ್ಯಪಟ್ಟು ದೂರಸರಿಯುತ್ತಾರೆ ನನ್ನ ಮೇಲೆ ಉಗುಳುವುದಕ್ಕೂ ಹಿಂಜರಿಯದಿದ್ದಾರೆ.
- Verse 11: ದೇವರು ನನ್ನ ಬಿಲ್ಲನು ಸಡಿಲಗೊಳಿಸಿ ಪೆಟ್ಟಿಗೀಡಾಗಿಸಿದ್ದಾರೆ ಅವರೋ ಕಡಿವಾಣವಿಲ್ಲದ ಕುದುರೆಗಳಂತೆ ನನ್ನ ಮುಂದಿದ್ದಾರೆ.
- Verse 12: ಕಲಹಗಾರರು ಎದ್ದಿದ್ದಾರೆ ನನ್ನ ಬಲಗಡೆಗೆ ನನ್ನ ಕಾಲುಗಳನು ನೂಕುತ್ತಿದ್ದರೆ ಹಿಂದಕೆ ಸಂಚುಹೂಡುತ್ತಿದ್ದಾರೆ ನನ್ನನ್ನು ನಾಶಮಾಡಲಿಕೆ.
- Verse 13: ನನ್ನ ಹಾದಿಯನು ಕಡಿದುಹಾಕಿದ್ದಾರೆ ನನ್ನ ಉಪದ್ರವವನ್ನು ಹೆಚ್ಚಿಸಿದ್ದಾರೆ ಅವರನ್ನು ತಡೆಯಲು ಯಾರೂ ಇಲ್ಲದಿದ್ದಾರೆ.
- Verse 14: ಅಗಲವಾದ ಕೋಟೆಬಿರುಕುಗಳಲಿ ನುಗ್ಗಿಬರುತ್ತಿದ್ದಾರೆ ಹಾಳುಬೀಳಿನಲಿ ನಿಂತಿರುವ ನನ್ನ ಮೇಲೆ ಉರುಳಿಬೀಳಲಿದ್ದಾರೆ.
- Verse 15: ಅಡ್ಡಿ ಆತಂಕಗಳು ನನ್ನನು ಸುತ್ತುವರೆದಿವೆ ನನ್ನ ಮಾನಮರ್ಯಾದೆ ತೂರಿಹೋಗುತ್ತಿದೆ ಗಾಳಿಯಂತೆ ನನ್ನ ಯೋಗಕ್ಷೇಮ ತೇಲಿಹೋಗುತ್ತಿದೆ ಮೋಡದಂತೆ.
- Verse 16: ನನ್ನ ಮನ ಕರಗಿ ನೀರಾಗಿದೆ ಬಾಧೆಗಳು ನನ್ನನು ಬಿಗಿಹಿಡಿದಿವೆ.
- Verse 17: ಇರುಳು ನನ್ನೆಲುಬುಗಳನು ಕೊರೆದು ಕೀಳುತ್ತಿದೆ ಸಂಕಟಗಳು ನನ್ನನು ಎಡೆಬಿಡದೆ ತಿನ್ನುತ್ತಿವೆ.
- Verse 18: ನನ್ನ ಬಟ್ಟೆಯನು ಗಟ್ಟಿಯಾಗಿ ಹಿಡಿದಿದ್ದಾರೆ ಕೊರಳಪಟ್ಟಿಯಂತೆ ಹಿಸುಕಿ ಹಿಂಡುತ್ತಿದ್ದಾರೆ.
- Verse 19: ನನ್ನನು ಕೆಸರಿನಲ್ಲಿ ಕೆಡವಿದ್ದಾರೆ ನನ್ನನು ಭಸ್ಮಕ್ಕೆ ಸಮಾನನನ್ನಾಗಿಸಿದ್ದಾರೆ.
- Verse 20: ದೇವರೇ, ನಾನು ಮೊರೆಯಿಟ್ಟರೂ ಉತ್ತರಕೊಡದಿರುವೆ ನಾನೆದ್ದು ನಿಂತರೂ ನೀನು ಸುಮ್ಮನೆ ನೋಡುತ್ತಿರುವೆ.
- Verse 21: ನನಗೆ ನೀನು ಕ್ರೂರನಾಗಿಬಿಟ್ಟಿರುವೆ ನಿನ್ನ ಭುಜಬಲದಿಂದ ಹಿಂಸಿಸುತ್ತಿರುವೆ.
- Verse 22: ನನ್ನನು ಎತ್ತಿ ತೂರಿಬಿಟ್ಟಿರುವೆ ಬಿರುಗಾಳಿಗೆ ತೊಳಲಾಡುತ್ತಿರುವೆನು ತುಫಾನಿನ ಆರ್ಭಟಕ್ಕೆ.
- Verse 23: ನನ್ನನು ಮರಣಕ್ಕೆ ಗುರಿಮಾಡುವೆಯೆಂದು ತಿಳಿದಿದೆ ಸಮಸ್ತಜೀವಿಗಳು ತೆರಳುವ ಮಂದಿರಕ್ಕೆ ಸೇರಿಸುವೆಯೆಂದು ಗೊತ್ತೇ ಇದೆ.
- Verse 24: ಆದರೂ ಕೇಡಿಗೆ ಈಡಾದವನು ಕೈಚಾಚುವುದಿಲ್ಲವೆ ಸಹಾಯಕ್ಕಾಗಿ? ಆಪತ್ತಿಗೆ ಗುರಿಯಾದವನು ಕೂಗಿಕೊಳ್ಳುವುದಿಲ್ಲವೆ ನೆರವಿಗಾಗಿ?
- Verse 25: ಕಷ್ಟಾನುಭವಿಯನು ಕಂಡು ನಾನು ಕಣ್ಣೀರಿಡಲಿಲ್ಲವೆ? ದಟ್ಟದರಿದ್ರರಿಗೋಸ್ಕರ ನಾನು ದುಃಖಪಡಲಿಲ್ಲವೆ?
- Verse 26: ನಾನು ಒಳಿತನು ನಿರೀಕ್ಷಿಸಿದಾಗ ಕೇಡು ಬಂದೊದಗಿತು ಬೆಳಕನು ಎದುರು ನೋಡುವಾಗ ಕತ್ತಲು ಕವಿಯಿತು.
- Verse 27: ಕರುಳು ಕುದಿಯುತ್ತಿದೆ ಅಶಾಂತಿಯಿಂದ ಬಂದೊದಗಿದೆ ನನಗೆ ಬಾಧೆಯ ದಿನ.
- Verse 28: ಸಂತೈಸುವ ಸೂರ್ಯನಿಲ್ಲದೆ ಅಲೆಯುತ್ತಿರುವೆ ಮಂಕು ಕವಿದು ಅಂಗಲಾಚುತ್ತಿರುವೆ ಸಭೆಯ ಮಧ್ಯೆ ನಿಂತು.
- Verse 29: ನರಿಗಳಿಗೆ ಸಹೋದರನಾಗಿರುವೆ ಗೂಬೆಗಳಿಗೆ ನಾನು ಗೆಳೆಯನಾಗಿರುವೆ.
- Verse 30: ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.
- Verse 31: ಅಳುವ ಧ್ವನಿ ಕೇಳಿಸುತ್ತಿದೆ ನನ್ನ ಕೊಳಲಿನಲಿ ಗೋಳಾಟದ ಸ್ವರವಿದೆ ನನ್ನ ಕಿನ್ನರಿಯಲಿ.”