ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಧರ್ಮೋಪದೇಶಕಾಂಡ
15ನೇ ಅಧ್ಯಾಯ
- Verse 1: “ಏಳು ಸಂವತ್ಸರಗಳು ಕಳೆದನಂತರ ಬಡವರಿಗೆ ಬಿಡುಗಡೆ ಸಿಗಬೇಕು.
- Verse 2: ಹೇಗೆಂದರೆ, ಸರ್ವೇಶ್ವರನೇ ನೇಮಿಸಿದ ಬಿಡುಗಡೆಯ ಸಂವತ್ಸರ ಪ್ರಕಟವಾಗಿದೆ. ಆದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
- Verse 3: ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟದ್ದನ್ನು ಕೇಳಕೂಡದು.
- Verse 4: “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ, ಸರ್ವೇಶ್ವರ ನಿಮಗೆ ಸ್ವದೇಶವಾಗಿ ಕೊಡುವ ನಾಡಿನಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವರು. ಈ ಕಾರಣ, ನಿಮ್ಮಲ್ಲಿ ಬಡವರೇ ಇರುವುದಿಲ್ಲ.
- Verse 5: “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ, ಸರ್ವೇಶ್ವರ ನಿಮಗೆ ಸ್ವದೇಶವಾಗಿ ಕೊಡುವ ನಾಡಿನಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವರು. ಈ ಕಾರಣ, ನಿಮ್ಮಲ್ಲಿ ಬಡವರೇ ಇರುವುದಿಲ್ಲ.
- Verse 6: ನಿಮ್ಮ ದೇವರಾದ ಸರ್ವೇಶ್ವರ ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ; ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ.
- Verse 7: “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನ ಯಾವ ಊರಲ್ಲಿಯಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನ ಬಗ್ಗೆ ಮನಸ್ಸನ್ನು ಕಠಿಣಮಾಡಿಕೊಳ್ಳಬೇಡಿ. ಅವನಿಗೆ ಸಹಾಯಮಾಡದೆ ಇರಬೇಡಿ.
- Verse 8: ನೀವು ಕೈದೆರೆದು ಅವನಿಗೆ ಅಗತ್ಯವಾಗಿ ಬೇಕಾದುದನ್ನು ಕೊಟ್ಟು ಸಹಾಯಮಾಡಬೇಕು.
- Verse 9: ಬಿಡುಗಡೆಯಾಗುವ ಏಳನೆಯ ವರ್ಷ ಸಮೀಪಿಸಿಬಿಟ್ಟಿತು ಎಂದು ನೀಚವಾದ ಆಲೋಚನೆಮಾಡಿ, ಬಡ ಸಹೋದರನ ಬಗ್ಗೆ ಮೋರೆ ಕರ್ರಗೆಮಾಡಿಕೊಂಡು, ಅವನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಸಹಾಯವನ್ನು ನಿರಾಕರಿಸಿದರೆ, ಅವನು ನಿಮ್ಮ ಬಗ್ಗೆ ಸರ್ವೇಶ್ವರನಿಗೆ ಮೊರೆ ಇಡುವನು; ಆಗ ನೀವು ದೋಷಿಗಳಾಗುತ್ತೀರಿ.
- Verse 10: ಕೊಡುವಾಗ ನೀವು ಬೇಸರಗೊಳ್ಳದೆ ಉದಾರ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಕೆಲಸಕಾರ್ಯಗಳಲ್ಲೂ ಪ್ರಯತ್ನಗಳಲ್ಲೂ ನಿಮ್ಮನ್ನು ಅಭಿವೃದ್ಧಿಪಡಿಸುವರು.
- Verse 11: ನಾಡಿನಲ್ಲಿ ಯಾವಾಗಲೂ ಬಡವರು ಇದ್ದೇ ಇರುವರು; ಆದುದರಿಂದ ನೀವು ಸ್ವದೇಶದವರಾದ ಬಡವರಿಗೂ ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕೆಂದು ಆಜ್ಞಾಪಿಸಿದ್ದೇನೆ.
- Verse 12: “ಸ್ವದೇಶದವರಲ್ಲಿ ಯಾವ ಹಿಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ ಮಾರಲ್ಪಟ್ಟಿದ್ದರೆ ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ, ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಟ್ಟುಬಿಡಬೇಕು.
- Verse 13: ಬಿಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು.
- Verse 14: ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಆಡುಕುರಿಗಳು, ದವಸಧಾನ್ಯ, ದ್ರಾಕ್ಷರಸ ಇವುಗಳಲ್ಲಿ ಉದಾರವಾಗಿ ಕೊಟ್ಟುಕಳುಹಿಸಬೇಕು.
- Verse 15: ಈಜಿಪ್ಟ್ ದೇಶದಲ್ಲಿ ನೀವೇ ಗುಲಾಮರಾಗಿದ್ದಿರಿ; ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಬಿಡುಗಡೆ ಮಾಡಿದರೆಂಬುದನ್ನು ಜ್ಞಾಪಕಮಾಡಿಕೊಳ್ಳಿ. ಇದಕ್ಕಾಗಿಯೇ, ನಾನೀಗ ಈ ಆಜ್ಞೆಯನ್ನು ನಿಮಗೆ ಕೊಟ್ಟಿದ್ದೇನೆ.
- Verse 16: “ಒಂದು ವೇಳೆ ಅಂಥ ಗುಲಾಮನು ನಿಮ್ಮ ಬಳಿ ಸುಖವಾಗಿದ್ದು, ನಿಮ್ಮನ್ನೂ ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆ ಆಗಿ ಹೋಗಲು ಒಲ್ಲೆನೆಂದು ಹೇಳಬಹುದು;
- Verse 17: ಆಗ ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ ಕದಕ್ಕೆ ಸಿಕ್ಕಿಸಬೇಕು. ಆ ದಿನ ಮೊದಲ್ಗೊಂಡು ಅವನು ನಿಮಗೆ ಶಾಶ್ವತ ಗುಲಾಮನಾಗಿರುತ್ತಾನೆ. ಅದೇ ರೀತಿಯಲ್ಲಿ ಗುಲಾಮಸ್ತ್ರೀಯರ ವಿಷಯದಲ್ಲೂ ನಡೆದುಕೊಳ್ಳಬೇಕು.
- Verse 18: “ಗುಲಾಮನನ್ನು ಬಿಡುಗಡೆ ಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ಗುಲಾಮನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲವೆ? ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಸಫಲಗೊಳಿಸುವರು.
- Verse 19: “ದನಗಳಲ್ಲೂ ಆಡುಕುರಿಗಳಲ್ಲೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಸರ್ವೇಶ್ವರನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.
- Verse 20: ಪ್ರತಿ ವರ್ಷ ನೀವೂ ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲೆ, ಅವರ ಸನ್ನಿಧಿಯಲ್ಲೇ ಕೊಯ್ದು ತಿನ್ನಬೇಕು.
- Verse 21: “ಅದು ಕುಂಟಾಗಿ, ಕುರುಡಾಗಿ, ಇಲ್ಲವೆ ಬೇರೆ ವಿಧದಲ್ಲಿ ದೋಷವುಳ್ಳದ್ದಾಗಿದ್ದರೆ ಅದನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯಾಗಿ ಸಮರ್ಪಿಸಕೂಡದು;
- Verse 22: ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
- Verse 23: ನೀವು ರಕ್ತವನ್ನು ಮಾತ್ರ ಭುಜಿಸಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.