पवित्र बाइबिल
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
24ನೇ ಅಧ್ಯಾಯ
- Verse 1: ಇಸ್ರಯೇಲರಿಗೆ ಶುಭವಾಗಬೇಕು ಎಂಬುದೇ ಸರ್ವೇಶ್ವರನ ಚಿತ್ತ ಎಂದು ಅರಿತ ಬಿಳಾಮನು ಮೊದಲಿನಂತೆ ಶಕುನ ನೋಡಲು ಹೋಗಲಿಲ್ಲ. ಬದಲಿಗೆ ಮರುಭೂಮಿಯ ಕಡೆ ಮುಖ ತಿರುಗಿಸಿಕೊಂಡು ಕಣ್ಣೆತ್ತಿ ನೋಡಿದನು.
- Verse 2: ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು.
- Verse 3: ಆಗ ಅವನು ದೇವಾತ್ಮಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ
- Verse 4: ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.
- Verse 5: ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ!
- Verse 6: ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರುಮರಗಳಂತೆ, ನೀರ ಬದಿಯ ದೇವದಾರು ವೃಕ್ಷಗಳಂತೆ.
- Verse 7: ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
- Verse 8: ಅವರನ್ನು ದೇವರೇ ಕರೆದು ತಂದರು ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮರ್ಥ್ಯ. ನಿರ್ಮೂಲ ಮಾಡುವರವರು ಶತ್ರುಗಳನ್ನು ಮುರಿದು ಹಾಕುವರು ವೈರಿಗಳ ಎಲುಬುಗಳನ್ನು; ನುಚ್ಚುನೂರು ಮಾಡುವರು ಅವರ ಬಿಲ್ಲುಬಾಣಗಳನ್ನು.
- Verse 9: ಕಾಲು ಮಡಚಿ ಹೊಂಚುಕೂತ ಸಿಂಹದಂತಿದೆ ಆ ಜನಾಂಗ; ಕೆಣಕಲು ಯಾರಿಂದಾದೀತು, ಅದು ಮೃಗೇಂದ್ರನಿಗೆ ಸಮಾನ!
- Verse 10: ಇದನ್ನು ಕೇಳಿ ಬಾಲಾಕನಿಗೆ ಬಿಳಾಮನ ಮೇಲೆ ಕಡುಕೋಪ ಉಂಟಾಯಿತು. ಅವನು ಕೈಕೈಹಿಸಿಕಿಕೊಂಡು ಬಿಳಾಮನಿಗೆ, “ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆ; ಆದರೆ ನೀನು ಮೂರು ಸಾರಿಯೂ ಅವರನ್ನೇ ಆಶೀರ್ವದಿಸಿದೆ.
- Verse 11: ಆದುದರಿಂದ ನಿನ್ನ ಊರಿಗೆ ತೆರಳು. ನಿನ್ನನ್ನು ಬಹಳವಾಗಿಸನ್ಮಾನಿಸಬೇಕೆಂದಿದ್ದೆ. ಆದರೆ ನಿನಗೆ ಸನ್ಮಾನ ಕೂಡದೆಂದು ಸರ್ವೇಶ್ವರ ಆಜ್ಞೆಮಾಡಿದ್ದಾನೆ,” ಎಂದನು.
- Verse 12: ಅದಕ್ಕೆ ಬಿಳಾಮನು, “ನೀನು ನಿನ್ನ ಮನೆತುಂಬ ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಸರ್ವೇಶ್ವರನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಏನನ್ನೂ ಮಾಡಲಾರೆ.
- Verse 13: ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುವೆನೆಂದು ನೀನು ನನ್ನ ಬಳಿಗೆ ಕಳಿಸಿದ ದೂತರಿಗೆ ನಾನು ಹೇಳಲಿಲ್ಲವೆ?
- Verse 14: ಆಗಲಿ, ನಾನು ನನ್ನ ಸ್ವಜನರ ಬಳಿಗೆ ತೆರಳುತ್ತೇನೆ. ಆದರೆ ಈ ಜನರು ನಿನ್ನ ಜನರಿಗೆ ಕೊನೆಗೆ ಏನು ಮಾಡುವರೋ ಅದನ್ನು ತಿಳಿಸುತ್ತೇನೆ ಕೇಳು,” ಎಂದು ಹೇಳಿ
- Verse 15: ಪದ್ಯರೂಪವಾಗಿ ಹೀಗೆಂದನು: ಬೆಯೋರನ ಮಗ ಬಿಳಾಮನು ನುಡಿದ ಭವಿಷ್ಯವಾಣಿ:
- Verse 16: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ:
- Verse 17: ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.
- Verse 18: ಸ್ವಾಧೀನವಾಗಿಸಿಕೊಂಡಿದ್ದಾನೆ ಎದೋಮ್ಯರ ನಾಡನ್ನು; ಆತನಿಗೆ ಅಧೀನರಾದರು ಹಗೆಗಳಾದ ಸೇಯೀರಿನವರು.
- Verse 19: ಹೌದು, ಇಸ್ರಯೇಲರು ಬಲವಂತರು ಯಕೋಬ್ಯರದೇ ದೊರೆತನವಾಯಿತು ನಗರಗಳಿಂದ ತಲೆತಪ್ಪಿಸಿಕೊಂಡವರೂ ನಾಶವಾದರು.”
- Verse 20: ಅನಂತರ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಹೀಗೆಂದು ನುಡಿದನು: “ಅಮಾಲೇಕ್ಯರು ಶ್ರೇಷ್ಠರಲ್ಲವೆ ರಾಷ್ಟ್ರಗಳಲ್ಲಿ? ಆದರೂ ಅವರ ಗತಿ ವಿನಾಶವೇ ಸರಿ.”
- Verse 21: ಬಳಿಕ ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಇಂತೆಂದು ನುಡಿದನು: “ನಿಮ್ಮ ನಿವಾಸಸ್ಥಳ ಸುರಕ್ಷಿತ ಬೆಟ್ಟದ ತುತ್ತತುದಿಯಲ್ಲಿ ಗೂಡು ಕಟ್ಟಿಕೊಂಡಷ್ಟು ಸುರಕ್ಷಿತ
- Verse 22: ಆದರೂ ಕೇನ್ಯರು ಕೂಡ ನಾಶವಾಗುವರು. ಅಶ್ಯೂರ್ಯರು ನಿಮ್ಮನ್ನು ಸೆರೆ ಹಿಡಿಯಲು ಎಷ್ಟು ಕಾಲ ತಾನೆ ಹಿಡಿಯುವುದು?”
- Verse 23: ಬಿಳಾಮನು ಮುಂದುವರೆದು ನುಡಿದದ್ದು ಏನೆಂದರೆ: ಅಯ್ಯೋ, ದೇವರೇ ಹೀಗೆ ಮಾಡುವಾಗ ಉಳಿಯುವವರಾರು?
- Verse 24: ‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್ ಜರನ್ನೂ; ಅವರಿಗೂ ನಾಶವುಂಟಾಗುವುದು.”
- Verse 25: ಇದಾದ ಮೇಲೆ ಬಿಳಾಮನು ಸ್ವಂತ ನಾಡಿಗೆ ಹಿಂದಿರುಗಿದನು. ಬಾಲಾಕನು ತನ್ನ ದಾರಿ ಹಿಡಿದನು.