పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
57ನೇ ಅಧ್ಯಾಯ
- Verse 1: “ಕರುಣಿಸೆನ್ನನು, ಕರುಣಿಸು, ದೇವನೇ I ನನ್ನಾತ್ಮದ ಆಸರೆಯು ನೀನೇ II ನನ್ನ ಗಂಡಾಂತರವು ನೀಗುವ ಪರಿಯಂತ I ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ II
- Verse 2: ನನ್ನ ಕಾರ್ಯವನು ಕೈಗೂಡಿಸುವ ದೇವನಿಗೆ I ನಾ ಮೊರೆಯಿಡುವೆ ಪರಾತ್ಪರನಾದಾ ಕರ್ತನಿಗೆ II
- Verse 3: ಆತ ನೆರವಾಗುವನೆನಗೆ ಪರಲೋಕದಿಂದ I ತಪ್ಪಿಸುವನು ನನ್ನನು ಬೆನ್ನಟ್ಟಿ ಬರುವವರಿಂದ II ತೋರ್ಪಡಿಸುವನು ಸತ್ಯತೆಯನು I ತನ್ನ ಅಚಲ ಪ್ರೀತಿಯನಾ ದೇವನು II
- Verse 4: ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ I ಅವುಗಳ ಹಲ್ಲುಗಳೊ ಭರ್ಜಿಬಾಣಗಳಂತಿವೆ I ನಾಲಿಗೆಗಳು ಹದವಾದ ಕತ್ತಿ ಕಠಾರಿಗಳಂತಿವೆ II
- Verse 5: ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II
- Verse 6: ಕಂಟಕ ಬಂದಿದೆ ನನ್ನ ಪ್ರಾಣಕೆ I ಹಾಕಿಹರು ಕಾಲಿಗೆ ಜೀರುಗುಣಿಕೆ II ತೋಡಿಹರು ಗುಂಡಿಯನು ನಾ ನಡೆವ ದಾರಿಯಲೆ I ತಾವೆ ತಟಕ್ಕನೆ ಬಿದ್ದುಹೋದರು ಅದರಲೆ II
- Verse 7: ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ I ಹಾಡುತ ಪಾಡುತ ನಾ ರಚಿಸುವೆ ಗಾಯನ II
- Verse 8: ಚೇತನಗೊಳ್ಳು ಮನವೇ, ಚೇತನಗೊಳ್ಳು I ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು I ಎಬ್ಬಿಸಿ ರವಿಯನು ಪ್ರಾತಃಕಾಲದೊಳು II
- Verse 9: ನಿನ್ನ ಸ್ತುತಿಸುವೆನು ಪ್ರಭು ಜನಾಂಗಗಳ ಮುಂದೆ I ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ II
- Verse 10: ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನಮಂಡಲವನು I ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲವನು II
- Verse 11: ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II