P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
111ನೇ ಅಧ್ಯಾಯ
- Verse 1: ಅಲ್ಲೆಲೂಯI ಸಜ್ಜನರ ಸಂಘದೊಳು, ಸಭಾಸದಸ್ಯರೊಳು ಕೂಡಿ I ಹೊಗಳುವೆ ಪ್ರಭುವನು ಮನಃಪೂರ್ವಕವಾಗಿ ಹಾಡಿ II
- Verse 2: ಮಹತ್ತಾದವು ಪ್ರಭುವಿನಾ ಕಾರ್ಯಗಳು I ಕೊಂಡಾಡುವರು ಅವುಗಳನು ಭಕ್ತಾದಿಗಳು II
- Verse 3: ಘನತೆ ಗೌರವವುಳ್ಳವು ಆತನ ಎಲ್ಲ ಕಾರ್ಯ I ನಿಲ್ಲುವುದು ಆತನ ನ್ಯಾಯನೀತಿಯು ನಿತ್ಯ II
- Verse 4: ಆತನ ಅದ್ಭುತಕಾರ್ಯ ಸ್ಮರಣೀಯ I ಕರುಣಾವಂತ ಪ್ರಭು, ಪ್ರೀತಿಮಯ II
- Verse 5: ಆಹಾರವನೀಯುವನು ಭಯಭಕ್ತಿಯುಳ್ಳವರಿಗೆ I ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ II
- Verse 6: ತನ್ನ ಪ್ರಜೆಗಿತ್ತಿಹನು ಅನ್ಯಜನರ ಸೊತ್ತನು I ತೋರ್ಪಡಿಸಿಹನು ಈ ಪರಿ ತನ್ನ ಸಾಮರ್ಥ್ಯವನು II
- Verse 7: ನೀತಿ ಸತ್ಯತೆಯುಳ್ಳವು ಆತನ ಸತ್ಕಾರ್ಯಗಳು I ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು II
- Verse 8: ಯುಗಯುಗಾಂತರಕು ದೃಢವಾಗಿರುವುವು I ಸತ್ಯನೀತಿಗಳು ಅವುಗಳಿಗೆ ಅಡಿಪಾಯವು II
- Verse 9: ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II
- Verse 10: ಸುಜ್ಞಾನಕ್ಕೆ ಮೂಲವು ದೈವಭಯವು I ಅದರ ಪಾಲನೆಯು ವಿವೇಕತನವು I ಪ್ರಭುವಿಗೆ ಸ್ತೋತ್ರ ಸದಾಕಾಲವು II