పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಶಾಯ
24ನೇ ಅಧ್ಯಾಯ
- Verse 1: ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು, ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು, ಚದರಿಸುವರು ಅದರ ನಿವಾಸಿಗಳನು.
- Verse 2: ಪ್ರಜೆಗೆ ಹೇಗೋ ಹಾಗೆ ಯಾಜಕನಿಗೆ, ದಾಸನಿಗೆ ಹೇಗೋ ಹಾಗೆ ದಣಿಗೆ , ದಾಸಿಗೆ ಹೇಗೋ ಹಾಗೆ ಯಜಮಾನಿಗೆ, ಕೊಳ್ಳುವವನಿಗೆ ಹೇಗೋ ಹಾಗೆ ಕೊಡುವವನಿಗೆ, ಸಾಲ ಕೊಡುವವನಿಗೆ ಹೇಗೋ ಹಾಗೆ ಸಾಲ ಪಡೆಯುವವನಿಗೆ, ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆ ಬಡ್ಡಿ ತೆರುವವನಿಗೆ, ಬರುವುದು ಒಂದೇ ಗತಿ ಇವರೆಲ್ಲರಿಗೆ.
- Verse 3: ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆಯಾಗುವುದು ಜಗವು, ಸರ್ವೇಶ್ವರ ಸ್ವಾಮಿಯ ನುಡಿಗಳಿವು:
- Verse 4: ಸೊರಗಿಹೋಗುವುದು ಲೋಕ ದುಃಖಿಸುತ್ತಾ ಕುಗ್ಗಿಹೋಗುವುದು ಬುವಿ ಗೋಳಾಡುತ್ತಾ ಕಂಗೆಟ್ಟುಹೋಗುವನು ಪ್ರತಿಯೊಬ್ಬ ವಿಶ್ವವಿಖ್ಯಾತ.
- Verse 5: ಭೂನಿವಾಸಿಗಳು ಮೀರಿಹರು ದೈವಾಜ್ಞೆಗಳನು ಉಲ್ಲಂಘಿಸಿಹರು ದೈವನಿಯಮಗಳನು, ಭಂಗಪಡಿಸಿಹರು ಶಾಶ್ವತ ಒಡಂಬಡಿಕೆಯನ್ನು, ಮಲಿನವಾಗಿಸಿಹರು ನಡತೆಯಿಂದ ಲೋಕವನು.
- Verse 6: ಇದಕಾರಣ ಕಬಳಿಸಿದೆ ಜಗವನು ಶಾಪ, ತಟ್ಟಿದೆ ಆ ಜನರಿಗೆ ದಂಡನೆಯ ತಾಪ. ಸುಟ್ಟಮೇಲೆ ಉಳಿದಿಹರು ಅವರಲಿ ಕೆಲವರು ಮಾತ್ರ.
- Verse 7: ಬಾಡಿಹೋಗಿದೆ ದ್ರಾಕ್ಷಾಲತೆ, ದುಬಾರಿಯಾಗಿದೆ ದ್ರಾಕ್ಷಾರಸ, ನರಳುತಿದೆ ನಲಿಯುತ್ತಿದ್ದ ಜನಸಮೂಹ.
- Verse 8: ನಿಂತುಹೋಗಿದೆ ದಮ್ಮಡಿಗಳ ಹರ್ಷನಾದ, ಕೊನೆಗೊಂಡಿದೆ ಉಲ್ಲಾಸಿಗಳ ಕೋಲಾಹಲ, ಅಡಗಿಹೋಗಿದೆ ಕಿನ್ನರಿಯ ಮಧುರಸ್ವರ.
- Verse 9: ಇನ್ನಿಲ್ಲ ಮದ್ಯಪಾನ ಗೀತಾಗಾನ, ಕಹಿಪಾನವಾಯಿತು ಕುಡುಕನಿಗೆ ಸುರಾಪಾನ.
- Verse 10: ಪಾಳುಬಿದ್ದಿದೆ ಅಸ್ತವ್ಯಸ್ತವಾದ ನಗರ, ಯಾರೂ ಪ್ರವೇಶಿಸದಂತೆ ಮುಚ್ಚಿದೆ ಪ್ರತಿಯೊಂದು ಗೃಹ.
- Verse 11: ಮದ್ಯಪಾನವಿಲ್ಲವೆಂದು ಬೀದಿಗಳಲಿ ಬೊಬ್ಬೆ ಇಡುತಿಹರೆಲ್ಲ, ಅಸ್ತಮಿಸಿಹೋಯಿತು ಜಗದ ಉಲ್ಲಾಸವೆಲ್ಲ, ಸೆರೆಯಾಗಿ ತೊಲಗಿತು ಅದರ ಸಡಗರವೆಲ್ಲ.
- Verse 12: ಪಾಳುಬಿದ್ದಿದೆ ನಗರ, ಮುರಿದು ಬಿದ್ದಿದೆ ಪುರದ್ವಾರ.
- Verse 13: ಉಳಿಯುವುವು ಜನಾಂಗಗಳು ಜಗದ ಮಧ್ಯೆ, ಎಣ್ಣೆಯ ಬೀಜವನು ಉದುರಿಸಿದ ಮೇಲೆ ಮಿಗುವ ಹೀಚಿನಂತೆ, ದ್ರಾಕ್ಷಿ ಹಣ್ಣನು ಕೊಯ್ದ ಮೇಲೆ ಉಳಿದ ಕೂಳೆಯಂತೆ.
- Verse 14: ಆರ್ಭಟಿಸುವರು ಅಳಿದುಳಿದವರು ಆನಂದದಿಂದ, ಕೊಂಡಾಡುವರು ಸರ್ವೇಶ್ವರನ ಮಹಿಮೆಯನು ಪಡುವಣದಿಂದ,
- Verse 15: ಎಂದೇ ಮೂಡಣದವರೇ, ಸನ್ಮಾನಿಸಿರಿ ಸರ್ವೇಶ್ವರ ಸ್ವಾಮಿಯನು, ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ ದೇವರಾದ ಸ್ವಾಮಿಯ ನಾಮವನು.
- Verse 16: ಜಗದ ಕಟ್ಟಕಡೆಯಿಂದ ಕೇಳಿಬರುತಿದೆ, ‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ. ಆದರೆ ನಶಿಸಿಹೋಗುತ್ತಿರುವೆನು ನಾನು, ಹೌದು, ನಶಿಸಿ ನಾಶವಾಗುತ್ತಿರುವೆನು, ಏನೆಂದು ಹೇಳಲಿ ನನ್ನ ಗತಿಯನು. ಇದೋ, ಬಾಧಿಸುತ್ತಿಹರು ದ್ರೋಹಿಗಳು, ದ್ರೋಹದ ಮೇಲೆ ದ್ರೋಹವೆಸಗುತಿಹರು.
- Verse 17: ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು, ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು.
- Verse 18: ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು, ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು. ತೆರೆದಿವೆ ನೋಡಿ, ಆಕಾಶದ ದ್ವಾರಗಳು, ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.
- Verse 19: ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ ಕತ್ತರಿಸುವುದು ಕದಲಿಹೋಗಿ.
- Verse 20: ಓಲಾಡುವುದು ಭೂಮಿ ಅಮಲೇರಿದವನಂತೆ, ತೂಗಾಡುವುದು ಬಿರುಗಾಳಿಗೆ ಸಿಕ್ಕಿದ ಗುಡಿಸಲಂತೆ, ಕುಸಿದು ಬೀಳುವುದು ದ್ರೋಹದ ಭಾರಕೆ, ಮರಳಿ ಏಳದಂತೆ.
- Verse 21: ಆ ದಿನ ಸರ್ವೇಶ್ವರ ದಂಡಿಸುವರು ಮೇಲಣ ಸೇನಾಶೂರರನು, ಕೆಳಗಣ ಭೂ ರಾಜರನು.
- Verse 22: ತಳ್ಳುವವರನು ಖೈದಿಗಳ ಗುಂಪಿನಂತೆ ನೆಲಮಾಳಿಗೆಗೆ, ಇರುವರವರು ಸೆರೆಯಲಿ ಬಹುದಿನಗಳವರೆಗೆ, ತದನಂತರ ಗುರಿಯಾಗುವರು ದಂಡನೆಗೆ.
- Verse 23: ನಾಚುವನು ಚಂದ್ರ, ಹೇಸುವನು ಸೂರ್ಯ, ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ ಸಿಯೋನ್ ಪರ್ವತದೊಳು, ಜೆರುಸಲೇಮ್ ನಗರದೊಳು. ಪ್ರತ್ಯಕ್ಷವಾಗುವುದಾತನ ಮಹಿಮಾಪ್ರಭಾವವು, ಅಲ್ಲಿನ ಜನನಾಯಕರ ಸಮ್ಮುಖದೊಳು.