पवित्र बाइबिल
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
7ನೇ ಅಧ್ಯಾಯ
- Verse 1: ಪ್ರಧಾನಯಾಜಕನು, “ಇವರು ನಿನ್ನ ವಿರುದ್ಧ ಹೇಳುತ್ತಿರುವುದು ಸತ್ಯವೋ?” ಎಂದು ಸ್ತೇಫನನನ್ನು ಕೇಳಿದನು.
- Verse 2: ಪ್ರತ್ಯುತ್ತರವಾಗಿ ಅವನು ಹೀಗೆಂದನು: “ಭ್ರಾತೃಗಳೇ, ಪಿತೃಗಳೇ, ಕಿವಿಗೊಡಿ. ನಮ್ಮ ಪಿತಾಮಹ ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪಟೋಮಿಯದಲ್ಲಿ ಇದ್ದನು. ಆಗ ಮಹಿಮಾ ಸ್ವರೂಪರಾದ ದೇವರು ಅವನಿಗೆ ದರ್ಶನವಿತ್ತರು.
- Verse 3: ‘ನೀನು ನಿನ್ನ ಬಂಧುಬಳಗವನ್ನೂ ತಾಯ್ನಾಡನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೋಗು,’ ಎಂದರು.
- Verse 4: ಅಂತೆಯೇ ಅವನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ವಾಸಮಾಡಿದನು; ಅವನ ತಂದೆಯ ಮರಣಾನಂತರ ದೇವರು ಅವನನ್ನು ನೀವು ವಾಸಮಾಡುತ್ತಿರುವ ಈ ನಾಡಿಗೆ ಕರೆತಂದರು.
- Verse 5: ಆಗ ಇಲ್ಲಿ ಕಾಲಿಡುವಷ್ಟು ನೆಲವನ್ನು ಕೂಡ ದೇವರು ಅವನಿಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ. ಸ್ವಂತ ಸೊತ್ತಾಗಿ ಅವನಿಗೂ ಅವನ ಬಳಿಕ ಅವನ ಸಂತತಿಗೂ ಕೊಡುವುದಾಗಿ ವಾಗ್ದಾನಮಾಡಿದರಷ್ಟೆ. ಆಗ ಅಬ್ರಹಾಮನಿಗೆ ಮಕ್ಕಳೇ ಇರಲಿಲ್ಲ.
- Verse 6: ಇದಲ್ಲದೆ ದೇವರು ಅಬ್ರಹಾಮನಿಗೆ, ‘ನಿನ್ನ ಸಂತತಿಯವರು ಅನ್ಯದೇಶದಲ್ಲಿ ಗುಲಾಮರಾಗುವರು; ನಾನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಒಳಗಾಗುವರು.
- Verse 7: ಅವರಿಂದ ಗುಲಾಮಗಿರಿಯನ್ನು ಪಡೆಯುವ ಜನಾಂಗಕ್ಕೆ ನಾನು ದಂಡನೆ ವಿಧಿಸುವೆನು. ಅನಂತರ ಅವರು ಅಲ್ಲಿಂದ ಹೊರಬಂದು ನನ್ನನ್ನು ಈ ಸ್ಥಳದಲ್ಲೇ ಆರಾಧಿಸುವರು,’ ಎಂದರು.
- Verse 8: ಆಮೇಲೆ ದೇವರು ಅಬ್ರಹಾಮನೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಆ ಒಡಂಬಡಿಕೆಯ ಚಿಹ್ನೆಯನ್ನಾಗಿ ಸುನ್ನತಿಯನ್ನು ವಿಧಿಸಿದರು.ಅದರಂತೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಹುಟ್ಟಿದ ಎಂಟನೆಯ ದಿನ ಸುನ್ನತಿಯನ್ನು ಮಾಡಿದನು. ಇಸಾಕನು ತನ್ನ ಮಗ ಯಕೋಬನಿಗೂ, ಯಕೋಬನು ತನ್ನ ಹನ್ನೆರಡು ಮಕ್ಕಳಾದ ನಮ್ಮ ಪಿತಾಮಹರಿಗೂ ಹಾಗೆಯೇ ಮಾಡಿದನು.
- Verse 9: “ಈ ಪಿತಾಮಹರು ಜೋಸೆಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗೆ ಇದ್ದು,
- Verse 10: ಎಲ್ಲಾ ಆಪತ್ತು ವಿಪತ್ತುಗಳಿಂದ ಅವನನ್ನು ಪಾರುಮಾಡಿದರು. ಅವನು ಈಜಿಪ್ಟಿನ ಅರಸ ಫರೋಹನ ಆಸ್ಥಾನಕ್ಕೆ ಬಂದಾಗ ದೇವರು ಅವನಿಗೆ ಜ್ಞಾನಸಂಪನ್ನತೆಯನ್ನಿತ್ತು ಅರಸನ ಮೆಚ್ಚುಗೆಗೆ ಪಾತ್ರನಾಗುವಂತೆ ಅನುಗ್ರಹಿಸಿದರು. ಫರೋಹನು ಅವನನ್ನು ರಾಜ್ಯಪಾಲನನ್ನಾಗಿಯೂ ಅರಮನೆಯ ಮೇಲ್ವಿಚಾರಕನನ್ನಾಗಿಯೂ ನೇಮಿಸಿದನು.
- Verse 11: ಈಜಿಪ್ಟ್ ಹಾಗೂ ಕಾನಾನ್ ದೇಶಗಳಲ್ಲಿ ಕ್ಷಾಮ ತಲೆದೋರಿದಾಗ ಜನರು ಕಷ್ಟಸಂಕಟಗಳಿಗೆ ಒಳಗಾದರು. ನಮ್ಮ ಪೂರ್ವಜರು ಆಹಾರವಿಲ್ಲದೆ ಅವಸ್ಥೆಪಟ್ಟರು.
- Verse 12: ಈಜಿಪ್ಟ್ ದೇಶದಲ್ಲಿ ಧಾನ್ಯ ಇರುವುದೆಂದು ಅರಿತು ಯಕೋಬನು, ಮೊದಲ ಬಾರಿಗೆ ತನ್ನ ಪುತ್ರರನ್ನು ಅಲ್ಲಿಗೆ ಕಳುಹಿಸಿದನು.
- Verse 13: ಎರಡನೆಯ ಬಾರಿ ಅವರು ಬಂದಾಗ ಜೋಸೆಫನು ತನ್ನ ಗುರುತನ್ನು ಸಹೋದರರಿಗೆ ತಿಳಿಸಿದನು. ಆಗ ಫರೋಹನಿಗೆ ಜೋಸೆಫನ ವಂಶದ ಪರಿಚಯವಾಯಿತು.
- Verse 14: ಅನಂತರ ತನ್ನ ತಂದೆ ಯಕೋಬನೂ ಅವನ ಬಂಧುಬಳಗದವರೂ ಈಜಿಪ್ಟಿಗೆ ಬರುವಂತೆ ಜೋಸೆಫನು ಹೇಳಿಕಳುಹಿಸಿದನು.
- Verse 15: ಇವರ ಒಟ್ಟು ಸಂಖ್ಯೆ ಎಪ್ಪತ್ತೈದು. ಯಕೋಬನು ಈಜಿಪ್ಟಿಗೆ ಹೋದನು. ಅವನೂ ನಮ್ಮ ಪಿತಾಮಹರೂ ಅಲ್ಲೇ ನಿಧನರಾದರು.
- Verse 16: ಅವರ ಅವಶೇಷಗಳನ್ನು ಮರಳಿ ಶೇಕೆಮಿಗೆ ಕೊಂಡೊಯ್ಯಲಾಯಿತು. ಅಲ್ಲಿ ಹಾಮೋರ್ ಎಂಬವನ ಮಕ್ಕಳಿಂದ ಅಬ್ರಹಾಮನು ಕ್ರಯಕ್ಕೆ ಕೊಂಡುಕೊಂಡಿದ್ದ ಸಮಾಧಿಯಲ್ಲಿ ಹೂಳಿದರು.
- Verse 17: “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವ ಕಾಲವು ಸಮೀಪಿಸಿತು. ಈಗಾಗಲೇ ಈಜಿಪ್ಟ್ ದೇಶದಲ್ಲಿ ನಮ್ಮ ಜನರ ಸಂಖ್ಯೆ ಅಧಿಕವಾಗಿ ಬೆಳೆದಿತ್ತು.
- Verse 18: ಕಡೆಗೆ ಜೋಸೆಫನನ್ನೇ ಅರಿಯದ ಬೇರೊಬ್ಬ ಅರಸ ರಾಜ್ಯವಾಳಲಾರಂಭಿಸಿದನು.
- Verse 19: ಅವನು ನಮ್ಮ ಜನರೊಡನೆ ಕುಯುಕ್ತಿಯಿಂದ ನಡೆದುಕೊಂಡನು. ಅವರ ಹಸುಳೆಗಳನ್ನು ನಿರ್ನಾಮಮಾಡಲು ಅವುಗಳನ್ನು ಹೊರಗೆ ಹಾಕಬೇಕೆಂದು ಬಲಾತ್ಕಾರಮಾಡಿದನು.
- Verse 20: ಸುರಸುಂದರನಾದ ಮೋಶೆ ಜನಿಸಿದ್ದು ಈ ಸಂದರ್ಭದಲ್ಲೇ. ಅವನು ಮೂರು ತಿಂಗಳವರೆಗೆ ಮನೆಯಲ್ಲೇ ಬೆಳೆದನು.
- Verse 21: ಅನಂತರ ಅವನನ್ನು ಮನೆಯಿಂದ ದೂರವಿಟ್ಟಿದ್ದಾಗ, ಫರೋಹನ ಮಗಳು ಅವನನ್ನು ತನ್ನ ಪಾಲನೆಗೆ ತೆಗೆದುಕೊಂಡು ಸ್ವಂತ ಮಗನಂತೆ ಸಾಕಿದಳು.
- Verse 22: ಅವನು ಈಜಿಪ್ಟರ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ನಡೆಯಲ್ಲೂ ನುಡಿಯಲ್ಲೂ ಸಮರ್ಥನಾದನು.
- Verse 23: “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು.
- Verse 24: ಆಗ ಅವರಲ್ಲಿ ಒಬ್ಬನು ಈಜಿಪ್ಟಿನವನಿಂದ ಅನ್ಯಾಯವಾಗಿ ಹಿಂಸೆಪಡುತ್ತಿರುವುದನ್ನು ಕಂಡನು. ಅವನ ಸಹಾಯಕ್ಕೆ ಹೋಗಿ ಈಜಿಪ್ಟಿನವನನ್ನು ಕೊಂದು ಸೇಡುತೀರಿಸಿದನು.
- Verse 25: ಸ್ವಜನರ ಬಿಡುಗಡೆಗೆ ದೇವರು ತನ್ನನ್ನು ನೇಮಿಸಿರುವರು; ತನ್ನ ಸ್ವಂತಜನರು ಇದನ್ನು ಅರ್ಥಮಾಡಿಕೊಳ್ಳುವರು ಎಂದು ಮೋಶೆ ಭಾವಿಸಿದ್ದನು. ಆದರೆ, ಅವರು ಅರ್ಥಮಾಡಿಕೊಳ್ಳಲಿಲ್ಲ.
- Verse 26: ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನ ಪಡಿಸಲು ಯತ್ನಿಸಿದನು.
- Verse 27: ಆಗ ಆಕ್ರಮಣ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ನ್ಯಾಯತೀರಿಸಲು ನಿನಗೆ ಅಧಿಕಾರವನ್ನು ಕೊಟ್ಟವರು ಯಾರು?
- Verse 28: ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಪ್ರಶ್ನಿಸಿದನು.
- Verse 29: ಇದನ್ನು ಕೇಳಿದ್ದೇ ಮೋಶೆ ಅಲ್ಲಿಂದ ಪಲಾಯನಮಾಡಿ ಮಿದ್ಯಾನರ ನಾಡಿನಲ್ಲಿ ಆಶ್ರಯ ಪಡೆದನು. ಅಲ್ಲಿರುವಾಗ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
- Verse 30: “ನಾಲ್ವತ್ತು ವರ್ಷಗಳಾದ ಮೇಲೆ ಒಂದು ದಿನ ಸೀನಾಯಿ ಬೆಟ್ಟದ ಮರಳುಗಾಡಿನಲ್ಲಿ ಉರಿಯುತ್ತಿದ್ದ ಪೊದೆಯೊಂದನ್ನು ಮೋಶೆ ಕಂಡನು. ಅದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು.
- Verse 31: ಇದನ್ನು ಕಂಡ ಮೋಶೆ ವಿಸ್ಮಿತನಾದನು. ಅದನ್ನು ಚೆನ್ನಾಗಿ ನೋಡಲೆಂದು ಹತ್ತಿರಕ್ಕೆ ಬಂದಾಗ,
- Verse 32: ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು.
- Verse 33: ಸರ್ವೇಶ್ವರ ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ದೂರವಿಡು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು.
- Verse 34: ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.
- Verse 35: “ ‘ನಮ್ಮ ನ್ಯಾಯತೀರಿಸುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?’ ಎಂದು ಇಸ್ರಯೇಲರಿಂದ ತಿರಸ್ಕೃತನಾದವನೇ ಆ ಮೋಶೆ. ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡ ತಮ್ಮ ದೂತನ ಮೂಲಕ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ನೇಮಿಸಿದ್ದು ಇವನನ್ನೇ.
- Verse 36: ಈಜಿಪ್ಟಿನಲ್ಲೂ ಕೆಂಪುಸಮುದ್ರದಲ್ಲೂ ನಲವತ್ತು ವರ್ಷಕಾಲ ಮರಳು ಬೆಂಗಾಡಿನಲ್ಲೂ ಅದ್ಭುತಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಿ ಇಸ್ರಯೇಲರನ್ನು ಬಿಡುಗಡೆಮಾಡಿದವನು ಇವನೇ.
- Verse 37: ‘ದೇವರು ನನ್ನನ್ನು ಕಳುಹಿಸಿದಂತೆ, ನಿಮ್ಮ ಜನಾಂಗದಿಂದಲೇ ಒಬ್ಬ ಪ್ರವಾದಿಯನ್ನು ಕಳುಹಿಸುವರು’ ಎಂದು ಇಸ್ರಯೇಲರಿಗೆ ತಿಳಿಸಿದವನು ಈ ಮೋಶೆಯೇ.
- Verse 38: ಇಸ್ರಯೇಲರು ಮರಳುಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ.
- Verse 39: “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು.
- Verse 40: ಅವರು ಆರೋನನಿಗೆ, ‘ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು. ನಮಗೆ ಮುಂದಾಳಾಗಿ ಹೋಗಲು ಕೆಲವು ದೇವರುಗಳ ವಿಗ್ರಹಗಳನ್ನು ಮಾಡಿಕೊಡು,’ ಎಂದರು.
- Verse 41: ಮಾತ್ರವಲ್ಲ, ಹೋರಿಕರುವಿನ ಆಕಾರದ ವಿಗ್ರಹವೊಂದನ್ನು ಮಾಡಿ ಅದಕ್ಕೆ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಿಗಾಗಿ ಮೆರೆದಾಡಿದರು.
- Verse 42: ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ.
- Verse 43: ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ.
- Verse 44: “ದೇವಪ್ರಸನ್ನತೆಯ ಗುಡಾರವು ನಮ್ಮ ಪೂರ್ವಜರ ಬಳಿ ಮರಳುಗಾಡಿನಲ್ಲಿತ್ತು. ಮೋಶೆಯೊಡನೆ ಮಾತನಾಡಿದ ದೇವರು ಅವನಿಗಿತ್ತ ಆಜ್ಞೆಯಂತೆ ಹಾಗೂ ತೋರಿಸಿದ ಆಕಾರದಂತೆ ಅದನ್ನು ನಿರ್ಮಿಸಲಾಗಿತ್ತು.
- Verse 45: ಅನಂತರ ಬಂದ ನಮ್ಮ ಪಿತೃಗಳು ಅದನ್ನು ಸ್ವಾಸ್ತ್ಯವಾಗಿ ಪಡೆದರು. ದೇವರು ಅನ್ಯಜನಾಂಗಗಳನ್ನು ಓಡಿಸಿ ಸ್ವಾಧೀನಮಾಡಿಕೊಟ್ಟ ನಾಡಿಗೆ, ಅವರು ಯೆಹೋಶುವನ ಮುಖಂಡತ್ವದಲ್ಲಿ ಹೋದಾಗ, ಆ ಗುಡಾರವನ್ನೂ ತೆಗೆದುಕೊಂಡು ಹೋದರು. ದಾವೀದನ ಕಾಲದವರೆಗೂ ಅದು ಅಲ್ಲೇ ಇತ್ತು.
- Verse 46: ದೈವಾನುಗ್ರಹಕ್ಕೆ ಪಾತ್ರನಾದ ದಾವೀದನು ಯಕೋಬನ ದೇವರಿಗೆ ಆಲಯವೊಂದನ್ನು ಕಟ್ಟಲು ಅಪ್ಪಣೆಯಾಗಬೇಕೆಂದು ಬೇಡಿಕೊಂಡನು.
- Verse 47: ಸಾಕ್ಷಾತ್ ಆ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
- Verse 48: ಆದರೆ ಪರಾತ್ಪರ ದೇವರು ಮಾನವ ನಿರ್ಮಿತ ಆಲಯಗಳಲ್ಲಿ ಮನೆಮಾಡುವುದಿಲ್ಲ.
- Verse 49: ಸ್ವರ್ಗವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದಪೀಠ. ಇಂತಿರಲು, ನನ್ನಂಥವನಿಗೆ ಎಂಥ ಆಲಯವನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವಾದರೂ ಯಾವುದು?
- Verse 50: ಇವೆಲ್ಲವನ್ನೂ ನಿರ್ಮಿಸಿದವನು ನಾನೇ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಸರ್ವೇಶ್ವರ, ಪ್ರವಾದಿಯ ಪ್ರವಚನವೊಂದರಲ್ಲಿ.”
- Verse 51: ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು’ ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ.
- Verse 52: ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ.
- Verse 53: ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು.
- Verse 54: ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು.
- Verse 55: ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು,
- Verse 56: “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು.
- Verse 57: ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು.
- Verse 58: ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
- Verse 59: ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
- Verse 60: ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು.