வேதாகமம்
ಹಳೆಯ ಒಡಂಬಡಿಕೆ
1 ಸಮುವೇಲನು
6ನೇ ಅಧ್ಯಾಯ
- Verse 1: ಸರ್ವೇಶ್ವರನ ಮಂಜೂಷ ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳಿತ್ತು.
- Verse 2: ಫಿಲಿಷ್ಟಿಯರು ಅವರ ಪೂಜಾರಿಗಳನ್ನೂ ಮಂತ್ರಗಾರರನ್ನೂ ಕರೆದು, “ಸರ್ವೇಶ್ವರನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಮರಳಿ ಅದರ ಸ್ಥಳಕ್ಕೆ ಹೇಗೆ ಕಳುಹಿಸುವುದು? ನಮಗೆ ತಿಳಿಸಿ,” ಎಂದು ಕೇಳಿಕೊಂಡರು.
- Verse 3: ಮರುತ್ತರವಾಗಿ ಅವರು, “ಇಸ್ರಯೇಲ್ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು; ನಿಮ್ಮ ಪಾಪಕ್ಕಾಗಿ ಪ್ರಾಯಶ್ಚಿತ್ತ ದ್ರವ್ಯದೊಡನೆ ಕಳುಹಿಸಬೇಕು. ಆಗ ಮಾತ್ರ ನೀವು ಗುಣಹೊಂದುವಿರಿ; ಅಲ್ಲದೆ ಅವರ ದೇವರ ಶಿಕ್ಷಾಹಸ್ತ ನಿಮ್ಮನ್ನು ಬಾಧಿಸುತ್ತಿದ್ದುದಕ್ಕೆ ಕಾರಣ ಗೊತ್ತಾಗುವುದು,” ಎಂದು ಹೇಳಿದರು.
- Verse 4: ಆ ಜನರು, “ನಾವು ಪ್ರಾಯಶ್ಚಿತಾರ್ಥವಾಗಿ ಏನನ್ನು ಕಳುಹಿಸಬೇಕು?” ಎಂದು ವಿಚಾರಿಸಿದರು. ಅದಕ್ಕೆ ಅವರು, “ನಿಮಗೂ ನಿಮ್ಮ ರಾಜರುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ನಿಮ್ಮ ರಾಜರುಗಳ ಸಂಖ್ಯೆಗೆ ಸರಿಯಾಗಿ ಐದು ಬಂಗಾರದ ಗಡ್ಡೆಗಳನ್ನು ಹಾಗು ಐದು ಬಂಗಾರದ ಇಲಿಗಳನ್ನು ಮಾಡಿಸಬೇಕು.
- Verse 5: ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಈ ಗಡ್ಡೆಗಳ ಹಾಗು ಇಲಿಗಳ ರೂಪವನ್ನು ಚಿನ್ನದಿಂದ ಮಾಡಿಸಿ ಇಸ್ರಯೇಲ್ ದೇವರಿಗೆ ಬಹುಮಾನವಾಗಿ ಕೊಡಿ. ಆಗ ಆತನ ಶಿಕ್ಷಾಹಸ್ತ ನಿಮ್ಮನ್ನೂ ನಿಮ್ಮ ದೇವತೆಗಳನ್ನೂ ಹಾಗು ಪ್ರಾಂತ್ಯಗಳನ್ನೂ ಬಿಟ್ಟುಹೋಗಬಹುದು.
- Verse 6: ಈಜಿಪ್ಟ್ ನವರಂತೆ ಆಗಲಿ, ಫರೋಹನಂತೆ ಆಗಲಿ ನೀವೇಕೆ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳಬೇಕು? ಇಸ್ರಯೇಲರನ್ನು ಕಳುಹಿಸಲೊಲ್ಲದ ಈ ಈಜಿಪ್ಟ್ ನವರನ್ನು ಸರ್ವೇಶ್ವರನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲವೆ?
- Verse 7: ಈಗ ನೀವು ಒಂದು ಹೊಸ ಒಡಂಬಡಿಕೆಯನ್ನು ಮಾಡಿಸಿರಿ. ಅದಕ್ಕೆ ಹಾಲುಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ.
- Verse 8: ಆ ಬಂಡಿಯ ಮೇಲೆ ಸರ್ವೇಶ್ವರನ ಮಂಜೂಷವನ್ನು ಹಾಗು ನೀವು ಪ್ರಾಯಶ್ಚಿತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕಪೆಟ್ಟಿಗೆಯನ್ನು ಇಡಿ. ಬಳಿಕ ಆ ಬಂಡಿಯನ್ನು ಹೊರಡಿಸಿ ಹೋಗಬಿಡಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ.
- Verse 9: ಬಂಡಿ ಹೋಗುವ ದಾರಿಯನ್ನು ಗಮನಿಸಿರಿ. ಅದು ತಾನಾಗಿ ಸ್ವದೇಶದ ದಾರಿಹಿಡಿದು ಬೇತ್ಷೆಮೆಷಿನ ಕಡೆಗೆ ಹೋದರೆ ಈಗ ಬಂದಿರುವ ಕೇಡನ್ನು ಕಳುಹಿಸಿದವನು ಆ ಸರ್ವೇಶ್ವರನೇ ಎಂದು ತಿಳಿಯಿರಿ. ಬಂಡಿ ಆ ಮಾರ್ಗವನ್ನು ಹಿಡಿಯದಿದ್ದರೆ ಆ ಸರ್ವೇಶ್ವರನ ಹಸ್ತ ನಮ್ಮನ್ನು ಮುಟ್ಟಲಿಲ್ಲ, ಈ ಕೇಡು ಆಕಸ್ಮಿಕವಾಗಿ ಬಂದಿದೆ ಎಂದು ತಿಳಿದುಕೊಳ್ಳಿ,” ಎಂದು ಹೇಳಿದರು.
- Verse 10: ಫಿಲಿಷ್ಟಿಯರು ಅದೇ ಪ್ರಕಾರ ಮಾಡಿದರು; ಹಾಲುಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯಲ್ಲೇ ಕಟ್ಟಿಹಾಕಿದರು.
- Verse 11: ಸರ್ವೇಶ್ವರನ ಮಂಜೂಷವನ್ನು ಮತ್ತು ಚಿನ್ನದ ಇಲಿಗಳೂ ಗಡ್ಡೆಗಳೂ ಇದ್ದ ಚಿಕ್ಕಪೆಟ್ಟಿಗೆಯನ್ನು ಬಂಡಿಯಲ್ಲಿ ಇಟ್ಟರು.
- Verse 12: ಕೂಡಲೆ ಆ ಹಸುಗಳು ಬೇತ್ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಅಂಬಾ ಎನ್ನುತ್ತಾ ನೆಟ್ಟಗೆ ಮುಂದೆ ಸಾಗಿದವು. ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯ ರಾಜರುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆಹೋದರು.
- Verse 13: ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಬೆಳೆಯನ್ನು ಕೊಯ್ಯುತ್ತಿದ್ದರು. ಕಣ್ಣೆತ್ತಿ ಸರ್ವೇಶ್ವರನ ಮಂಜೂಷವನ್ನು ನೋಡಿ ಬಹಳ ಸಂತೋಷಪಟ್ಟರು.
- Verse 14: ಆ ಬಂಡಿ ಬೇತ್ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ಒಂದು ದೊಡ್ಡ ಕಲ್ಲಿನ ಬಳಿ ಬಂದು ನಿಂತಿತು. ಅವರು ಅಲ್ಲಿಗೆ ಹೋಗಿ, ಬಂಡಿಯ ಕಟ್ಟಿಗೆಗಳನ್ನು ಮುರಿದು, ಅಗ್ನಿ ಮಾಡಿ ಆ ಹಸುಗಳನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ಅರ್ಪಿಸಿದರು.
- Verse 15: ಲೇವಿಯರು ಸರ್ವೇಶ್ವರನ ಮಂಜೂಷವನ್ನು ಹಾಗು ಚಿನ್ನದ ವಸ್ತುಗಳಿದ್ದ ಚಿಕ್ಕಪೆಟ್ಟಿಗೆಯನ್ನು ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್ಷೆಮೆಷಿನವರು ಅದೇ ದಿನ ಸರ್ವೇಶ್ವರನಿಗೆ ದಹನಬಲಿಗಳನ್ನು ಹಾಗು ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು.
- Verse 16: ಇದನ್ನೆಲ್ಲ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ರಾಜರು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.
- Verse 17: ಫಿಲಿಷ್ಟಿಯರು ಸರ್ವೇಶ್ವರನಿಗೆ ಪ್ರಾಯಶ್ಚಿತಾರ್ಥವಾಗಿ ಸಮರ್ಪಿಸಿದ ಚಿನ್ನದ ಗಡ್ಡೆಗಳ ಸಂಸ್ಥಾನಾನುಸಾರವಾದ ಪಟ್ಟಿ ಇದು: ಅಷ್ಡೋದ್, ಗಾಜಾ, ಪರವಾಗಿ ಒಂದು, ಅಷ್ಕೆಲೋನ್ ಪರವಾಗಿ ಒಂದು, ಗತ್ ಪರವಾಗಿ ಒಂದು ಮತ್ತು ಎಕ್ರೋನ್ ಪರವಾಗಿ ಒಂದು,
- Verse 18: ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ರಾಜರ ಅಧೀನದಲ್ಲಿದ್ದ ಎಲ್ಲ ಪುಟ್ಟ ಗ್ರಾಮಗಳ ಹಾಗು ಕೋಟೆಪೇಟೆಗಳ ಸಂಖ್ಯೆಗೆ ಸರಿಯಾಗಿದ್ದವು. ಸರ್ವೇಶ್ವರನ ಮಂಜೂಷವನ್ನು ಇಡಲಾಗಿದ್ದ ಆ ದೊಡ್ಡ ಕಲ್ಲು ಇಂದಿನವರೆಗೂ ಬೇತ್ ಷೆಮೆಷಿನ ಯೆಹೋಶುವಿನ ಹೊಲದಲ್ಲಿ ಸಾಕ್ಷಿಯಾಗಿ ನಿಂತಿದೆ.
- Verse 19: ಮಂಜೂಷವನ್ನು ತೆರೆದು ನೋಡಿದ ಬೇತ್ ಷೆಮೆಷಿನವರಾದ ಎಪ್ಪತ್ತು ಮಂದಿಯನ್ನು ಸರ್ವೇಶ್ವರ ನಾಶಮಾಡಿದರು. ಈ ವಿನಾಶಕ್ಕಾಗಿ ಬೇತ್ ಷೆಮೆಷಿನವರು ಗೋಳಾಡಿದರು.
- Verse 20: “ಪರಮಪಾವನ ದೇವರಾದ ಸರ್ವೆಶ್ವರನ ಮುಂದೆ ಯಾರು ತಾನೆ ನಿಂತಾರು? ಇನ್ನು ಮುಂದೆ ಇವರು ಹೋಗತಕ್ಕ ಸ್ಥಳ ಯಾವುದು?” ಎಂದು ಮಾತಾಡಿಕೊಂಡರು ಜನರು.
- Verse 21: ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಸರ್ವೇಶ್ವರನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿ,” ಎಂದು ತಿಳಿಸಿದರು.