ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
40ನೇ ಅಧ್ಯಾಯ
- Verse 1: ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು I ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು II
- Verse 2: ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ I ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ II
- Verse 3: ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ I ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ II
- Verse 4: ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು I ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು II
- Verse 5: ಪ್ರಭು, ಎನ್ನ ದೇವ, ನಿನಗೆ ಸಮಾನತೆ ಎಲ್ಲಿಯದು I ನೀನೆಸಗಿದ ಪವಾಡ ಪ್ರಯೋಜನಗಳೆನಿತು I ಅಗಣಿತವಾದವುಗಳ ವಿವರ ಅಸದಳವಾದುದು II
- Verse 6: ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ I ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ I ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ II
- Verse 7: ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
- Verse 8: ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II
- Verse 9: ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II
- Verse 10: ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II
- Verse 11: ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ I ನಿನ್ನ ಪ್ರೀತಿ ಸತ್ಯತೆ ಕಾದಿರಿಸಲಿ ನನ್ನನು ಸತತ II
- Verse 12: ಲೆಕ್ಕವಿಲ್ಲದಾಪತ್ತುಗಳು ನನ್ನನು ಸುತ್ತಿಕೊಂಡಿವೆ I ದಿಕ್ಕು ತೋಚದಂತೆನ್ನ ಪಾಪಗಳು ನನಗಂಟಿಕೊಂಡಿವೆ I ಸಿಲುಕವು ಎಣಿಕೆಗೆ ತಲೆಗೂದಲಂತೆ, ನಾನೆದೆಗುಂದಿರುವೆ II
- Verse 13: ಕರುಣೆಯಿಂದೆನ್ನನು ಪ್ರಭು ರಕ್ಷಿಸ ಬಾ I ನನಗೊತ್ತಾಸೆ ಮಾಡಲು ಪ್ರಭು, ಬೇಗ ಬಾ II
- Verse 14: ನನ್ನ ಕೊಲೆಗೆಂದು ಯತ್ನಿಸುವವರು ನಾಚಿ ಗಲಿಬಿಲಿಗೊಳ್ಳಲಿ I ನನ್ನಳಿವನು ಕೋರುವಂಥವರು ಲಜ್ಜೆಯಿಂದ ಹಿಂದಿರುಗಲಿ II
- Verse 15: ಆಹಾ ಆಹಾ ಎಂದು ಹಾಸ್ಯ ಮಾಡುವವರು I ಅಕಟಕಟವೆನ್ನಲಿ ಹೇಸಿಗೆಯಿಂದಾ ನರರು II
- Verse 16: ನಿನ್ನನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ I ನಿನ್ನ ರಕ್ಷಣಾಪ್ರಿಯರು ಸತತ “ಪ್ರಭು ಪರಾಕ್ರಮಿ” ಎನ್ನಲಿ II
- Verse 17: ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು I ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು II