ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
64ನೇ ಅಧ್ಯಾಯ
- Verse 1: ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ I ಕಾಪಾಡು, ಶತ್ರುಗಳ ಭಯವಿದೆ ನನಗೆ II
- Verse 2: ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ I ಕಾದಿರಿಸೆನ್ನ ದುರುಳರ ದೊಂಬಿಯಿಂದ II
- Verse 3: ನಾಲಗೆಯೆಂಬ ಅಲಗನವರು ಮಸೆದಿಹರು I ನಂಜುಮಾತೆಂಬ ಅಂಬನು ಹೂಡಿಹರು II
- Verse 4: ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ I ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ II
- Verse 5: ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು I “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು? II
- Verse 6: ಅವರು ಹೂಡಿರುವುದು ಕುತಂತ್ರವನು I ಕೊಚ್ಚಿಕೊಳ್ವುದು ಚತುರೋಪಾಯವನು I ಅಶೋಧ್ಯ ಮಾನವನ ಹೃನ್ಮನಗಳು! II
- Verse 7: ಆದರೆ ಎಸೆವನು ಬಾಣವನು ದೇವನೆ I ಪಡೆವರು ಅಪಘಾತವನು ಫಕ್ಕನೆ II
- Verse 8: ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು I ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು II
- Verse 9: ಜನರೆಲ್ಲರಾಗ ತಲ್ಲಣಗೊಳ್ಳುವರು I ದೇವಕಾರ್ಯವಿದು ಎಂದು ಧ್ಯಾನಿಪರು I ಆತನ ಸತ್ಕಾರ್ಯಗಳನು ಸಾರುವರು II
- Verse 10: ಹರ್ಷಿಸಲಿ ಸಜ್ಜನರು ಪ್ರಭುವಿನಲಿ I ಆಶ್ರಯ ಪಡೆಯಲೀಗಲೆ ಆತನಲಿ I ನೇರ ಹೃದಯಿಗಳೆಲ್ಲರು ಹಿಗ್ಗಲಿ II