ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
5ನೇ ಅಧ್ಯಾಯ
- Verse 1: ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು : ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ ಫಲವತ್ತಾಗಿಹ ಗುಡ್ಡದ ಮೇಲಿನ ತೋಟ. ಆರಿಸಿ ಎಸೆದನು ಕಲ್ಲುಮುಳ್ಳುಗಳನು ಅಗೆದು ಹದಮಾಡಿದನಾತ ಗುಡ್ಡವನು.
- Verse 2: ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು ಕಟ್ಟಿದನು ಅದರೊಳಗೆ ಆಲೆಯೊಂದನು. ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು, ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು !
- Verse 3: ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ : “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ.
- Verse 4: ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ:
- Verse 5: ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ.
- Verse 6: ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ.
- Verse 7: ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !
- Verse 8: ಮನೆಯ ಮೇಲೆ ಮನೆಯನ್ನು, ಹೊಲದ ಮೇಲೆ ಹೊಲವನ್ನು ಕೂಡಿಹಾಕಿಸುತ್ತಾ ಇರುವವರಿಗೆ ಧಿಕ್ಕಾರ ! ಇತರರಿಗೆ ಕಿಂಚಿತ್ತನ್ನೂ ಬಿಡದೆ ನಾಡಿನ ನಡುವೆ ತಾವೇ ಗೌಡರಾಗಿ ವಾಸಿಸುವ ಇವರಿಗೆ ಧಿಕ್ಕಾರ !
- Verse 9: ಸೇನಾಧೀಶ್ವರಸ್ವಾಮಿಯಿಂದ ನಾನು ಕಿವಿಯಾರೆ ಕೇಳಿದಂತೆ ಹಲವಾರು ಮಂದಿರಗಳು ಬರಿದಾಗುವುವು. ಸುಂದರ ಹಾಗೂ ಸವಿಸ್ತಾರವಾದ ಭವನಗಳು ನಿವಾಸಿಗಳಿಲ್ಲದೆ ಪಾಳುಬೀಳುವುವು.
- Verse 10: ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಎಂಟು ಲೀಟರ್ ದ್ರಾಕ್ಷಾರಸವನ್ನು ಕೊಡುವುದು. ನೂರೆಂಬತ್ತು ಲೀಟರ್ ಬೀಜಬಿತ್ತಿದರೆ, ಕೇವಲ ಹದಿನೆಂಟು ಲೀಟರ್ ಧಾನ್ಯ ಮಾತ್ರ ಸಿಗುವುದು.
- Verse 11: ಮದ್ಯದ ಗೀಳಿನಿಂದ ಮುಂಜಾನೆ ಏಳುವವರಿಗೆ ಧಿಕ್ಕಾರ ! ಅಮಲೇರಿ ಉನ್ಮತ್ತರಾಗುವಂತೆ ರಾತ್ರಿಯಲ್ಲಿ ಹೊತ್ತುಮೀರಿ ಕುಡಿಯುತ್ತಾ ಕಾಲಹರಣ ಮಾಡುವವರಿಗೆ ಧಿಕ್ಕಾರ !
- Verse 12: ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು.
- Verse 13: ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು.
- Verse 14: ಪಾತಾಳವು ಹಸಿದು ಹಂಬಲಿಸುತ್ತಿದೆ. ಅಗಾಧವಾಗಿ, ಬಾಯಿ ತೆರೆದು ನಿಂತಿದೆ. ಜೆರುಸಲೇಮಿನ ಶ್ರೀಮಂತರು, ಸದ್ದುಗದ್ದಲ ಮಾಡುವ, ಹೆಮ್ಮೆಯಿಂದ ಹಿಗ್ಗುವ ಜನಸಾಮಾನ್ಯರು ಆ ಪಾತಾಳದೊಳಕ್ಕೆ ಬಿದ್ದುಹೋಗುವರು.
- Verse 15: ನರಮಾನವರು ತಗ್ಗಿಹೋಗುವರು. ಕುಲೀನರು ಕುಗ್ಗಿಹೋಗುವರು. ಗರ್ವಿಷ್ಠರ ಸೊಕ್ಕು ಅಡಗಿಹೋಗುವುದು.
- Verse 16: ಸೇನಾಧೀಶ್ವರ ಸ್ವಾಮಿಯಾದರೋ ನ್ಯಾಯತೀರಿಸುವುದರಲ್ಲಿ ಸರ್ವಶ್ರೇಷ್ಠರು. ಧರ್ಮಪಾಲನೆಯಲ್ಲಿ ಪರಮಪರಿಶುದ್ಧರು ಎಂದು ಕಾಣಿಸಿಕೊಳ್ಳುತ್ತಾರೆ.
- Verse 17: ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು.
- Verse 18: ಅಕ್ರಮವೆಂಬ ಹಗ್ಗಗಳಿಂದ ಅಪರಾಧ ಎಂಬ ತೇರನ್ನು ಎಳೆಯುವವರಿಗೆ ಧಿಕ್ಕಾರ !
- Verse 19: “ಸ್ವಾಮಿ ತ್ವರೆಮಾಡಲಿ, ತನ್ನ ಕಾರ್ಯವನ್ನು ತುರ್ತಾಗಿ ನಡೆಸಲಿ, ನೋಡೋಣ; ಇಸ್ರಯೇಲಿನ ಪರಮ ಪಾವನ ಸ್ವಾಮಿಯ ಯೋಜನೆ ಶೀಘ್ರವಾಗಿ ಕೈಗೂಡಲಿ, ಆಗ ಪರಿಗ್ರಹಿಸೋಣ” ಎಂದು ಹೇಳುವ ಜನರಿಗೆ ಧಿಕ್ಕಾರ !
- Verse 20: ಕೆಟ್ಟದ್ದನ್ನು ಒಳ್ಳೆಯದೆಂದೂ ಒಳ್ಳೆಯದನ್ನು ಕೆಟ್ಟದ್ದೆಂದೂ ಬೋಧನೆ ಮಾಡುವವರಿಗೆ ಧಿಕ್ಕಾರ ! ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸುವಂಥವರಿಗೆ ಧಿಕ್ಕಾರ ! ಕಹಿಯನ್ನು ಸಿಹಿಯೆಂದೂ ಸಿಹಿಯನ್ನು ಕಹಿಯೆಂದೂ ವಾದಿಸುವಂಥವರಿಗೆ ಧಿಕ್ಕಾರ !
- Verse 21: ತಮ್ಮ ದೃಷ್ಟಿಯಲ್ಲಿ ತಾವೇ ಜ್ಞಾನಿಗಳೆಂದು ತಮ್ಮ ಗಣನೆಯಲ್ಲಿ ತಾವೇ ವಿವೇಕಿಗಳೆಂದು ಭಾವಿಸುವವರಿಗೆ ಧಿಕ್ಕಾರ !
- Verse 22: ಸುರಾಪಾನದಲ್ಲಿ ಶೂರರಾಗಿ, ಮದ್ಯಮಿಶ್ರಣದಲ್ಲಿ ಸಾಹಸಿಗಳಾಗಿ ಇರುವವರಿಗೆ ಧಿಕ್ಕಾರ !
- Verse 23: ಲಂಚಕ್ಕೋಸ್ಕರ ನಿರ್ದೋಷಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿ ವಂಚಿಸುವವರಿಗೆ ಧಿಕ್ಕಾರ !
- Verse 24: ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ.
- Verse 25: ಎಂದೇ ತಮ್ಮ ಜನರ ವಿರುದ್ಧ ಸ್ವಾಮಿಯ ಕೋಪ ಭುಗಿಲೆದ್ದಿದೆ. ಹೊಡೆಯುವುದಕ್ಕೆ ಅವರ ಕೈ ಮೇಲಕ್ಕೆತ್ತಿದೆ. ಬೆಟ್ಟಗುಡ್ಡಗಳು ನಡುಗುವುವು. ಸತ್ತ ಹೆಣಗಳು ಕಸದಂತೆ ಬೀದಿಯಲ್ಲಿ ಬಿದ್ದಿರುವುವು. ಇಷ್ಟೆಲ್ಲ ನಡೆದರೂ ಸ್ವಾಮಿಯ ಕೋಪ ತಣಿಯದು, ಎತ್ತಿದ ಕೈ ಇಳಿಯದು.
- Verse 26: ದೂರದ ಜನಾಂಗಕ್ಕೆ ಸ್ವಾಮಿ ಧ್ವಜಾರೋಹಣ ಮಾಡುವರು ಗುರುತಾಗಿ, ಕರೆಯುವರವರನು ಜಗದ ಕಟ್ಟಕಡೆಯಿಂದ ಸೀಟಿಹಾಕಿ; ಬರುವರಾಗ ಆ ಜನರು ತ್ವರೆಮಾಡಿ, ವೇಗವಾಗಿ.
- Verse 27: ಬಳಲಿ ಹೋಗರು ಅವರಲ್ಲಿ ಯಾರೂ ಮುಗ್ಗರಿಸಿ, ನಿದ್ರಿಸರು ಯಾರೂ ತೂಕಡಿಸಿ, ಸಡಿಲವಾಗದವರ ನಡುಕಟ್ಟು, ಕಿತ್ತುಹೋಗದವರ ಕೆರದ ಕಟ್ಟು.
- Verse 28: ಚೂಪಾಗಿವೆ ಅವರ ಬಾಣಗಳು; ಬಿಗಿದಿವೆ ಬಿಲ್ಲುಗಳು, ಬೆಣಚುಕಲ್ಲಿನಂತಿವೆ ಕುದುರೆಗಳ ಗೊರಸುಗಳು, ಸುತ್ತುತ್ತಿವೆ ಸುಂಟರಗಾಳಿಯಂತವರ ಚಕ್ರಗಳು.
- Verse 29: ಗರ್ಜಿಸುತಿಹರು ಸೈನಿಕರು ಸಿಂಹದಂತೆ, ಆರ್ಭಟಿಸುತಿಹರವರು ಪ್ರಾಯದ ಸಿಂಹಗಳಂತೆ, ಗುರುಗುಟ್ಟುತಿಹರು ಬೇಟೆ ಹಿಡಿದ ಕೇಸರಿಯಂತೆ. ಅದನ್ನೆತ್ತಿಕೊಂಡು ಓಡುತಿಹರು, ಬಿಡಿಸುವರಾರೂ ಇಲ್ಲದಂತೆ.
- Verse 30: ಗುರುಗುಟ್ಟುತಿಹರು ಯೆಹೂದ್ಯರ ಮೇಲೆ ಭೋರ್ಗರೆಯುವ ಸಮುದ್ರದಂತೆ; ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ; ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ; ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ !