ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
12ನೇ ಅಧ್ಯಾಯ
- Verse 1: ಅದಕ್ಕೆ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:
- Verse 2: :ಹೌದ್ಹೌದು ನೀವೇ ಮಹಾಜನ, ನಿಮ್ಮೊಡನೆಯೇ ಸಾಯುವುದು ಸುಜ್ಞಾನ!
- Verse 3: ನಿಮ್ಮ ಹಾಗೆ ನಾನೂ ಬಲ್ಲವ ನಿಮಗಿಂತ ನಾನೇನೂ ಕೀಳಲ್ಲ. ಇದು ಯಾರಿಗೆ ತಾನೆ ತಿಳಿದಿಲ್ಲ?
- Verse 4: ನೀತಿವಂತನೂ ನಿರ್ದೋಷಿಯೂ ಆದ ನಾನು ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ ಕಾದಿರಲು ಗೆಳೆಯರ ಗೇಲಿಪರಿಹಾಸ್ಯಕೆ ಗುರಿಯಾದೆನು.
- Verse 5: ದಲಿತರನ್ನು ಕಂಡರೆ ಸುಖಜೀವಿಗಳಿಗೆ ತಾತ್ಸಾರ ಜಾರಿ ಬೀಳಲಿರುವವರಿಗೆ ಕಾದಿದೆ ತಿರಸ್ಕಾರ.
- Verse 6: ಸಮೃದ್ಧಿಯಾಗಿವೆ ಕಳ್ಳಕಾಕರ ಗುಡಾರಗಳು ಸುರಕ್ಷಿತವಾಗಿರುವರು ದೇವರನ್ನೆ ಕೆರಳಿಸುವವರು ಅಂಗೈಯಲ್ಲಿರುವುದೇ ಅವರಿಗೆ ದೇವರು!
- Verse 7: ಮೃಗಗಳನ್ನು ಬೇಕಾದರೆ ಕೇಳು, ಅವು ಕಲಿಸುವುವು ಆಕಾಶದ ಪಕ್ಷಿಗಳನ್ನು ಕೇಳು, ಅವು ತಿಳಿಸುವುವು.
- Verse 8: ಕ್ರಿಮಿಕೀಟಗಳನ್ನು ಕೇಳು, ಅವು ನಿನಗೆ ಬೋಧಿಸುವುವು ಸಮುದ್ರದ ಮೀನುಗಳು ನಿನಗೆ ಉಪದೇಶ ಮಾಡುವುವು.
- Verse 9: ಇವುಗಳೆಲ್ಲವನ್ನು ಮಾಡಿದ್ದು ಸರ್ವೇಶ್ವರನ ಕೈಯೇ ಇದು ತಿಳಿಯದಿರುವುದು ಯಾರಿಗೆ ತಾನೆ?
- Verse 10: ಆತನ ಕೈಯಲ್ಲಿದೆ ಎಲ್ಲ ಜೀವಿಗಳ ಪ್ರಾಣ ಪ್ರತಿಯೊಬ್ಬ ನರಮಾನವನ ಶ್ವಾಸ.
- Verse 11: ನಾಲಿಗೆ ರುಚಿನೋಡುವಂತೆಯೆ ಕಿವಿ ನುಡಿಯನು ವಿವೇಚಿಸುತ್ತದೆ.
- Verse 12: ಜ್ಞಾನವಿದೆ ವಯೋವೃದ್ಧರಲ್ಲಿ ವಿವೇಕವಿದೆ ದೀರ್ಘಾಯುಷ್ಯರಲ್ಲಿ.
- Verse 13: ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.
- Verse 14: ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.
- Verse 15: ಆತ ನೀರನ್ನು ತಡೆದರೆ, ಬತ್ತಿಹೋಗುತ್ತದೆ ಬೆಳೆಯೆಲ್ಲ ತೂಬೆತ್ತಿದರೆ ಮುಳುಗಿಹೋಗುತ್ತದೆ ಇಳೆಯೆಲ್ಲ.
- Verse 16: ಸಾಮರ್ಥ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.
- Verse 17: ಮಂತ್ರಿಗಳನು ಬರಿಬತ್ತಲೆಯಾಗಿ ನಡೆಸುತ್ತಾನೆ ನ್ಯಾಯಾಧಿಪತಿಗಳನು ಮೂರ್ಖರನ್ನಾಗಿಸುತ್ತಾನೆ.
- Verse 18: ಅರಸರು ಹಾಕಿದ ಬಂಧನವನ್ನು ಬಿಚ್ಚಿ ಬಿಗಿಯುತ್ತಾನೆ ಅವರ ಸೊಂಟಕ್ಕೆ ಚಿಂದಿ.
- Verse 19: ಯಾಜಕರನ್ನು ಬರಿಬತ್ತಲೆಯಾಗಿ ನಡೆಸುತ್ತಾನೆ ಅಚಲ ಶಕ್ತಿಶಾಲಿಗಳನ್ನು ಕೆಡವಿಬಿಡುತ್ತಾನೆ.
- Verse 20: ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು ಹಿರಿಯರ ಧೀಮಂತಿಕೆಯನ್ನು ತೆಗೆದುಬಿಡುತ್ತಾನೆ.
- Verse 21: ಅಧಿಪತಿಗಳಿಗೆ ಉಂಟುಮಾಡುತ್ತಾನೆ ಅವಮಾನವನ್ನು ಬಿಚ್ಚಿಬಿಡುತ್ತಾನೆ ಬಲಾಢ್ಯರ ನಡುಕಟ್ಟನ್ನು.
- Verse 22: ಇರುಳಿನ ಆಳದಲ್ಲಿರುವವುಗಳನ್ನು ಬೆಳಗಿಸುತ್ತಾನೆ ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾನೆ.
- Verse 23: ರಾಷ್ಟ್ರಗಳನ್ನು ಬೆಳೆಸುತ್ತಾನೆ, ಅಳಿಸುತ್ತಾನೆ ಅವುಗಳನ್ನು ಹರಡುತ್ತಾನೆ, ಹೊರದೂಡುತ್ತಾನೆ.
- Verse 24: ಭೂಪತಿಗಳನ್ನು ಬುದ್ಧಿಹೀನರನ್ನಾಗಿಸುತ್ತಾನೆ ದಾರಿಕಾಣದ ಅರಣ್ಯದಲಿ ಅಲೆದಾಡಿಸುತ್ತಾನೆ.
- Verse 25: ಅಂಥವರು ಕತ್ತಲೊಳು ತಡಕಾಡುವರು ಬೆಳಕಿಲ್ಲದೆ ತಡವರಿಸುವರು ಕುಡಿದು ಅಮಲೇರಿದವರಂತೆ.”