ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
10ನೇ ಅಧ್ಯಾಯ
- Verse 1: ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? I ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? II
- Verse 2: ಸೊಕ್ಕಿನಿಂದ ಶೋಷಿಸುತಿಹರು ದಲಿತರನು ದುರುಳರು I ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು II
- Verse 3: ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು I ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು II
- Verse 4: ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ I ಅವನ ಮನದೊಳಿದೊಂದೇ ಭಾವನೆ : “ದೇವರೇ ಇಲ್ಲ"! II
- Verse 5: ಗೆಲುವೆ ಅವನ ವ್ಯವಹಾರವೆಲ್ಲದರ ಸಾರ I ನಿನ್ನ ನಿರ್ಣಯ ಅವನ ಗ್ರಹಿಕೆಗೆ ಅತಿ ದೂರ II ಶತ್ರುಗಳನು ಕಂಡರೆ ಅವನಿಗೆ ತಾತ್ಸಾರ II
- Verse 6: ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II
- Verse 7: ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ I ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ II
- Verse 8: ಊರು ಸಂದುಗೊಂದುಗಳಲೆ ಅವಿತಿದ್ದು I ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು I ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು II
- Verse 9: ಹೊಂಚುಹಾಕುವನವನು ಗುಹೆಯೊಳಗಿನ ಸಿಂಹದಂತೆ I ಕಾಯ್ದು ಹಿಡಿದೆಳೆವನು ದಲಿತರನು ಬಲೆಗೆ ಬೀಳ್ವಂತೆ II
- Verse 10: ಬಲಿಯಾಗಿಹನು ಬಲತ್ಕಾರಕೆ ಅಬಲನು I ಕುಸಿದು ಬಿದ್ದಿಹನು ಜಜ್ಜರಿತವಾಗವನು II
- Verse 11: ಮನದೊಳಿಂತೆಂದು ನೆನೆದನಾ ದುರುಳನು: I “ದೇವನಿದನು ಮರೆತು ವಿಮುಖನಾಗಿಹನು I ಇನ್ನೆಂದಿಗು ನೋಡನು ಇದೆಲ್ಲವನು” II
- Verse 12: ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II
- Verse 13: ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? I “ದೇವನೆನ್ನ ವಿಚಾರಿಸನು” ಎನ್ನುವುದೆಂತು? II
- Verse 14: ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II
- Verse 15: ಧೂರ್ತನ, ದುರುಳನ ಭುಜಬಲವನು ನೀ ಮುರಿದುಬಿಡು I ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು II
- Verse 16: ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ I ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ II
- Verse 17: ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II
- Verse 18: ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ I ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ II