ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
75ನೇ ಅಧ್ಯಾಯ
- Verse 1: ವಂದನೆ ಹೇ ದೇವಾ, ಕೃತಜ್ಞತಾ ವಂದನೆ I ನೀ ಸಾಧಿಸಿದ ಸತ್ಕಾರ್ಯಗಳ ವಿವರಣೆ I ತಂದಿದೆ ನಮಗೆ ನಿನ್ನ ನಾಮದ ಸ್ಮರಣೆ II
- Verse 2: ಈ ಪರಿ ನುಡಿದಿರುವನಾ ದೇವನು : I “ಕ್ಲುಪ್ತಕಾಲದಲಿ ನಾ ನೀಡುವೆನು I ತೀರ್ಪನು, ನ್ಯಾಯವಾದ ತೀರ್ಪನು II
- Verse 3: ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II
- Verse 4: ಗರ್ವಿಗಳೇ, ಸಾಕುಮಾಡಿ ನಿಮ್ಮ ಸೊಕ್ಕುಮಾತುಗಳನು I ದುರ್ಜನರೇ, ತೋರಬೇಡಿ ನಿಮ್ಮ ಕೋರೆಕೊಂಬುಗಳನು II
- Verse 5: ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು I ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” II
- Verse 6: ಪೂರ್ವಪಶ್ಚಿಮದಿಂದ ಬರುವುದಿಲ್ಲ ಉದ್ಧಾರ I ಅರಣ್ಯದಿಂದ ದೊರಕುವುದಿಲ್ಲ ಜೀವೋದ್ಧಾರ II
- Verse 7: ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II
- Verse 8: ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು I ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು II ಅದನವನು ಸುರಿಯಲು ಕುಡಿವರು ಜಗದ ದುರುಳರು I ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು II
- Verse 9: ನಾನಾದರೊ ಕೀರ್ತಿಸುವೆನು ಯಕೋಬ ದೇವರನು I ಮಾಡುವೆನು ಅನವರತ ಆತನ ಗುಣಗಾನವನು II
- Verse 10: ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು II