ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
40ನೇ ಅಧ್ಯಾಯ
- Verse 1: ನಿಮ್ಮ ದೇವರು ಇಂತೆನ್ನುತ್ತಾರೆ : “ಸಂತೈಸಿ, ನನ್ನ ಜನರನ್ನು ಸಂತೈಸಿರಿ.
- Verse 2: ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರ ಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ.”
- Verse 3: ಇಗೋ, ಈ ವಾಣಿಯನ್ನು ಕೇಳಿ : “ಸರ್ವೇಶ್ವರ ಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ.
- Verse 4: ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನು.
- Verse 5: ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರ ಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.”
- Verse 6: ಆ ವಾಣಿ ಮತ್ತೆ ಕೇಳಿಸಿತು : ‘ಗಟ್ಟಿಯಾಗಿ ಕೂಗು’ ಎಂದಿತು ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು : “ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ.
- Verse 7: ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು.
- Verse 8: ಒಣಗಿ ಹೋಗುವುದಾ ಹುಲ್ಲು, ಬಾಡಿಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು.”
- Verse 9: ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು.
- Verse 10: ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ.
- Verse 11: ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
- Verse 12: ಅಳೆವನಾರು ಸಮುದ್ರಸಾಗರಗಳನ್ನು ಬೊಗಸೆಗೈಯಿಂದ? ಮೊಳ ಹಾಕುವವನಾರು ಆಕಾಶಮಂಡಲವನ್ನು ಕೈಗೇಣಿನಿಂದ? ತುಂಬುವವನಾರು ಧರೆಯ ಮರಳನ್ನೆಲ್ಲಾ ಕೊಳಗದೊಳಗೆ? ತೂಗಿದವನಾರು ಬೆಟ್ಟಗುಡ್ಡಗಳನ್ನು ತ್ರಾಸುತಕ್ಕಡಿಯೊಳಗೆ?
- Verse 13: ಆದೇಶವಿತ್ತವನಾರು ಸರ್ವೇಶ್ವರನ ಆತ್ಮಕೆ? ಉಪದೇಶವಿತ್ತ ಸಲಹೆಗಾರನಾರು ಆತನಿಗೆ?
- Verse 14: ಜ್ಞಾನೋದಯ ನೀಡಿದವನಾರು ಆತನಿಗೆ? ನ್ಯಾಯಮಾರ್ಗ ತೋರಿಸಿದವನಾರು ಆತನಿಗೆ? ಬುದ್ಧಿ ಕಲಿಸಿದವನಾರು ಆತನಿಗೆ? ಏನೇ ಮಾರ್ಗವನ್ನು ಸೂಚಿಸಿದವನಾರು ಆತನಿಗೆ?
- Verse 15: ಆತನ ಗಣನೆಗೆ ರಾಷ್ಟ್ರಗಳು ಕಪಿಲೆಯಿಂದ ಉದುರುವ ತುಂತುರುಗಳು ತ್ರಾಸಿನ ತಟ್ಟೆಯ ಮೇಲಿರುವ ಧೂಳಿನ ಕಣಗಳು ದ್ವೀಪಗಳೋ ಆತನ ತೂಕಕ್ಕೆ ಅಣುರೇಣುಗಳು.
- Verse 16: ಲೆಬನೋನಿನ ಪಶುಗಳು ಸಾಲವು ದಹನಬಲಿಗೆ ಅಲ್ಲಿನ ಮರಗಳು ಸಾಲವು ಅದರ ಸೌದೆಗೆ.
- Verse 17: ಸಕಲ ರಾಷ್ಟ್ರಗಳು ಆತನ ದೃಷ್ಟಿಗೆ ಏನೂ ಇಲ್ಲದಂತೆ ಅವುಗಳು ಆತನ ಎಣಿಕೆಗೆ ಶುದ್ಧ ಸೊನ್ನೆಯಂತೆ.
- Verse 18: ಇಂತಿರಲು ಯಾರಿಗೆ ಹೋಲಿಸಬಲ್ಲಿರಿ ದೇವರನು? ಕೊಡಬಲ್ಲಿರಾ ಆತನಿಗೆ ಯಾವುದಾದರೊಂದು ಉಪಮಾನವನು?
- Verse 19: ವಿಗ್ರಹವಾದರೋ ಎರಕ ಹೊಯ್ಯಲ್ಪಟ್ಟಿತು ಶಿಲ್ಪಿಯಿಂದ ಅದಕ್ಕೆ ಬಡಿದಿರುವ ಚಿನ್ನದ ಕವಚ ಅಕ್ಕಸಾಲಿಗನಿಂದ ಅದಕ್ಕೆ ತೊಡಿಸಿರುವ ಬೆಳ್ಳಿಸರಪಣಿ ಆ ವಾಜನಿಂದ.
- Verse 20: ಇಷ್ಟು ಹಣವನ್ನು ವೆಚ್ಚ ಮಾಡಲಾಗದ ಬಡವನು ಹುಡುಕುವನು ಹುಳಿತುಹೋಗದ ಮರವನು ಬಾಗಿ ಬೀಳದ ವಿಗ್ರಹವನ್ನು ಮಾಡಬಲ್ಲಾ ಕುಶಲನನು.
- Verse 21: ನಿಮಗೆ ತಿಳಿದಿಲ್ಲವೋ, ನೀವು ಕೇಳಿಲ್ಲವೋ ಆದಿಯಿಂದ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಪೃಥ್ವಿಸ್ಥಾಪನೆ ಹೇಗಾಯಿತೆಂದು ನೀವು ಗ್ರಹಿಸಿಲ್ಲವೋ?
- Verse 22: ಆಸೀನನಾಗಿಹನು ಆತ ಭೂಮಂಡಲಕ್ಕಿಂತ ಮೇಲೆ ಭೂನಿವಾಸಿಗಳು ಕಾಣುತಿಹರು ಆತನಿಗೆ ಮಿಡತೆಗಳಂತೆ ಹರಡಿಹನು ಆಕಾಶಮಂಡಲವನು ನವಿರು ಬಟ್ಟೆಯಂತೆ ಮೇಲೆತ್ತಿಕಟ್ಟಿಹನು ಅದನ್ನು ನಿವಾಸದ ಗುಡಾರದಂತೆ.
- Verse 23: ನಾಶಗೊಳಿಸುವನಾತ ದೇಶಾಧಿಪತಿಗಳನು ನಿರ್ನಾಮಗೊಳಿಸುವನು ರಾಜಾಧಿರಾಜರನು.
- Verse 24: ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರುವಾಗಲೆ ಬಾಡುವುದು ಇವರ ಸಂತಾನ ಆತನ ಶ್ವಾಸದಿಂದಲೆ; ಬಡಿದು ಹೊಯ್ಯಲ್ಪಡುವುದು ಒಣಹುಲ್ಲಿನಂತೆ ಬಿರುಗಾಳಿಯಿಂದಲೆ.
- Verse 25: “ಇಂತಿರಲು ನನ್ನನ್ನು ಯಾರಿಗೆ ಹೋಲಿಸಬಲ್ಲಿರಿ?” ಯಾರಿಗೆ ನನ್ನನ್ನು ಸರಿಸಮಾನ ಮಾಡಬಲ್ಲಿರಿ?” ಎಂದು ಕೇಳುತ್ತಿಹರು ಪರಮಪಾವನ ಸ್ವಾಮಿ.
- Verse 26: ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ ಯಾರು ಆ ತಾರೆಗಳನ್ನು ರಚಿಸಿದಾತ? ಆ ತಾರಾ ಸಮೂಹವನ್ನು ಕ್ರಮಾನುಸಾರ ನಡೆಸುವಾತ, ಒಂದೊಂದನ್ನೂ ಹೆಸರಿಟ್ಟು ಕರೆಯುವಾತ, ಅವುಗಳಲ್ಲಿ ಒಂದನ್ನೂ ಕಾಣೆಯಾಗಲು ಬಿಡದಾತ, ಅಷ್ಟು ಬಲಾಢ್ಯನು, ಶಕ್ತಿವಂತನು ಆತ
- Verse 27: ಹೀಗಿರಲು ಎಲೈ ಯಕೋಬ್ಯರೇ, ಇಸ್ರಯೇಲರೇ, ‘ಮರೆಯಾಗಿದೆ ಪ್ರಭುವಿಗೆ ನನ್ನ ಕುಂದುಕೊರತೆ, ನ್ಯಾಯನೀತಿ ದೊರಕದಿದೆ ನನಗೆ ಇದರತ್ತ ದೇವರ ಲಕ್ಷ್ಯಬೀಳದಿದೆ’ ಎನ್ನುತ್ತಿರುವಿರಿ ಏಕೆ?
- Verse 28: ನೀವು ಕೇಳಿಲ್ಲವೇ? ನಿಮಗೆ ತಿಳಿದಿಲ್ಲವೇ? ಸರ್ವೇಶ್ವರ ಅನಂತ ದೇವರಲ್ಲವೇ? ಭೂದಿಗಂತಗಳನ್ನು ಆತ ಸೃಜಿಸಿದನಲ್ಲವೇ? ದಣಿವೆಂಬುದು ಇಲ್ಲ, ಬಳಲಿಕೆ ಎಂಬುದು ಇಲ್ಲ ಆತನಿಗೆ. ಆತನ ದಕ್ಷಸಾಮರ್ಥ್ಯ ಅಗಮ್ಯ ಪರಿಶೋಧನೆಗೆ.
- Verse 29: ದಯಪಾಲಿಸುವನಾತ ಬಲಾಭಿವೃದ್ಧಿಯನ್ನು ಬಳಲಿದವನಿಗೆ ಅನುಗ್ರಹಿಸುವನಾತ ಚೈತನ್ಯವನು ನಿತ್ರಾಣನಿಗೆ.
- Verse 30: ಯುವಕರೂ ದಣಿದು ಬಳಲುವರು ತರುಣರೂ ಸೊರಗಿ ಮುಗ್ಗರಿಸುವರು.
- Verse 31: ಸರ್ವೇಶ್ವರನನ್ನು ಎದುರುನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿಯರು, ನಡೆದರೂ ಬಳಲರು.