ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
29ನೇ ಅಧ್ಯಾಯ
- Verse 1: ಹತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:
- Verse 2: “ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನ ಕಡೆಗೆ ಮುಖಮಾಡಿ ಅವನನ್ನು ಹಾಗು ಈಜಿಪ್ಟಿನವರೆಲ್ಲರನ್ನು ಕುರಿತು ಹೀಗೆ ನುಡಿ -
- Verse 3: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಈಜಿಪ್ಟಿನ ಅರಸ ಫರೋಹನೇ, ನದೀಶಾಖೆಗಳ ನಡುವೆ ಒರಗಿಕೊಂಡು ‘ಈ ನದಿ ನನ್ನದೇ. ನನಗಾಗಿಯೇ ಮಾಡಿಕೊಂಡಿದ್ದೇನೆ’ ಎಂದುಕೊಳ್ಳುವ ದೊಡ್ಡ ಮೊಸಳೆ ನೀನು. ಇಗೋ, ನಾನು ನಿನಗೆ ವಿರುದ್ಧನಾಗಿದ್ದೇನೆ.
- Verse 4: ನಾನು ನಿನ್ನ ದವಡೆಗಳಿಗೆ ಗಾಳಹಾಕುವೆನು; ನಿನ್ನ ನದಿಯ ಮೀನುಗಳು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು. ಅಂಟಿಕೊಂಡಿರುವ ಆ ಮೀನುಗಳ ಸಹಿತ ನಿನ್ನನ್ನು ನಿನ್ನ ನದಿಯ ಮಧ್ಯೆಯಿಂದ ಈಚೆಗೆ ಎಳೆಯುವೆನು.
- Verse 5: ನಿನ್ನನ್ನೂ ನಿನ್ನ ಎಲ್ಲ ಮೀನುಗಳನ್ನೂ ಕಾಡುಪಾಲು ಮಾಡುವೆನು; ನೀನು ಬಯಲಿನಲ್ಲಿ ಬಿದ್ದಿರುವೆ; ನಿನ್ನನ್ನು ಯಾರೂ ಹೊರರು, ಹೂಣಿಡರು; ನಿನ್ನನ್ನು ಭೂಜಂತುಗಳಿಗೂ ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.
- Verse 6: “ಆಗ ಈಜಿಪ್ಟಿನ ಸಕಲ ನಿವಾಸಿಗಳು, ‘ಇಸ್ರಯೇಲ್ ವಂಶದವರಿಗೆ ನಾವು ಬರೀ ದಂಟಿನ ಊರುಗೋಲಾದೆವು’ ಎಂದು ನಾಚಿಕೆಪಟ್ಟು ನಾನೇ ಸರ್ವೇಶ್ವರ ಎಂಬುದಾಗಿ ದೃಢಮಾಡಿಕೊಳ್ಳುವರು.
- Verse 7: ಈಜಿಪ್ಟೇ, ಇಸ್ರಯೇಲರು ನಿನ್ನ ಮೇಲೆ ಕೈಯಿಡಲು, ನೀನು ಅವರನ್ನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ನಿನ್ನ ಮೇಲೆ ಊರಿಕೊಳ್ಳಲು, ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದೆ.
- Verse 8: ಹೀಗಿರಲು, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ಬರಮಾಡಿ ಜನರನ್ನೂ ಜಾನುವಾರುಗಳನ್ನೂ ನಿನ್ನಿಂದ ನಿರ್ಮೂಲಮಾಡುವೆನು.
- Verse 9: ಫರೋಹನು, - ‘ಈ ನದಿ ನನ್ನದೇ, ನಾನೇ ಮಾಡಿಕೊಂಡೆ’ ಎಂದುಕೊಂಡನು. ಈ ಕಾರಣ ಈಜಿಪ್ಟ್ ದೇಶ ಹಾಳುಪಾಳಾಗುವುದು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.
- Verse 10: ಇಗೋ, ನಾನು ನಿನಗೂ ನಿನ್ನ ನದಿಗೂ ವಿರುದ್ಧನಾಗಿ ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ತನಕ, ಹೌದು, ಸುಡಾನ್ ಎಲ್ಲೆಯವರೆಗೂ ಪೂರ್ತಿಯಾಗಿ ಹಾಳುಪಾಳುಮಾಡುವೆನು.
- Verse 11: ಯಾವ ವ್ಯಕ್ತಿಯೂ ಅಲ್ಲಿ ಹೆಜ್ಜೆಯಿಟ್ಟು ಹಾದುಹೋಗನು; ನಲವತ್ತು ವರ್ಷ ನಿರ್ಜನವಾಗಿರುವುದು.
- Verse 12: ಹಾಳುಬಿದ್ದಿರುವ ದೇಶಗಳೊಳಗೆ ಈಜಿಪ್ಟ್ ದೇಶವನ್ನೂ ಹಾಳು ಬೀಳಿಸುವೆನು; ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳನ್ನೂ ಪಾಳುಬೀಳಿಸುವೆನು; ನಲವತ್ತು ವರ್ಷ ಹಾಗೆಯೇ ಇರುವುವು; ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸ, ದೇಶವಿದೇಶಗಳಿಗೆ ತೂರಿಬಿಡುವೆನು.
- Verse 13: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಲವತ್ತು ವರ್ಷಗಳ ಮೇಲೆ ನಾನು
- Verse 14: ಈಜಿಪ್ಟಿನ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮಭೂಮಿಯಾದ ದಕ್ಷಿಣ ಈಜಿಪ್ಟಿಗೆ ಪುನಃ ಬರಮಾಡುವೆನು. ಅಲ್ಲೇ ಅವರು ನಿಕೃಷ್ಟ ರಾಜ್ಯದವರಾಗಿರುವರು.
- Verse 15: ಆ ರಾಜ್ಯ ಸಮಸ್ತ ರಾಜ್ಯಗಳಲ್ಲಿ ಕನಿಷ್ಟವೆನಿಸಿಕೊಳ್ಳುವುದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಆ ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣಗತಿಗೆ ತರುವೆನು.
- Verse 16: ಈಜಿಪ್ಟ್ ಇನ್ನು ಇಸ್ರಯೇಲ್ ವಂಶದವರ ಭರವಸೆಯಾಗದು; ಅದರ ಕಡೆಗೆ ಕಣ್ಣೆತ್ತುವಾಗ ದೇವದ್ರೋಹದ ನೆನಪು ಇಸ್ರಯೇಲರಲ್ಲಿ ಹುಟ್ಟುವುದು; ನಾನೇ ಸರ್ವೇಶ್ವರ ಎಂದು ಅವರಿಗೆ ಮನದಟ್ಟಾಗುವುದು.”
- Verse 17: ಇಪ್ಪತ್ತೇಳನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -
- Verse 18: “ನರಪುತ್ರನೇ, ಬಾಬಿಲೋನಿನ ನೆಬೂಕದ್ನೆಚ್ಚರನು ಟೈರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಬಹು ಶ್ರಮದ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ. ಪ್ರತಿಯೊಬ್ಬನ ಹೆಗಲು ಕಾಯಿಕಟ್ಟಿದೆ; ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ಟೈರಿನಿಂದ ಫಲವೇನೂ ಸಿಕ್ಕಲಿಲ್ಲ.
- Verse 19: ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಗೋ, ನಾನು ಬಾಬಿಲೋನಿನ ಅರಸ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುವೆನು; ಅವನು ಅದರ ಜನರನ್ನೂ ಆಸ್ತಿಪಾಸ್ತಿಯನ್ನೂ ಒಯ್ದು, ಆ ದೇಶವನ್ನು ಸೂರೆಮಾಡಿ ಕೊಳ್ಳೆಹೊಡೆಯುವನು; ಅದೇ ಅವನ ಸೈನ್ಯಕ್ಕೆ ಸಿಕ್ಕುವ ಸಂಬಳ.
- Verse 20: ಅವನು ಸೈನ್ಯಸಮೇತ ನನ್ನ ಪರವಾಗಿ ಸೇವೆಮಾಡಿದ್ದರಿಂದ ಅವನು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನಾನು ಈಜಿಪ್ಟ್ ದೇಶವನ್ನು ಅವನಿಗೆ ಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.
- Verse 21: “ಆ ದಿನದಲ್ಲಿ ನಾನು ಇಸ್ರಯೇಲ್ ವಂಶಕ್ಕೆ ಕೋಡುಮೂಡಿಸಿ ಆ ವಂಶದವರ ಮಧ್ಯೆ ನಿನ್ನ ಬಾಯನ್ನು ಬಿಚ್ಚುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಖಚಿತವಾಗುವುದು.