ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
1ನೇ ಅಧ್ಯಾಯ
- Verse 1: ಎಫ್ರಯಿಮ್ ಬೆಟ್ಟದ ಪ್ರದೇಶದಲ್ಲಿ ರಾಮಾ ಒಂದು ಊರು. ಆ ಊರಲ್ಲಿ ‘ಎಲ್ಕಾನ’ ಎಂಬ ಒಬ್ಬ ಮನುಷ್ಯನಿದ್ದ. ಇವನು ಯೆರೋಹಾಮನ ಮಗ, ಎಲೀಹುವಿನ ಮೊಮ್ಮಗ ಹಾಗು ತೋಹುವಿನ ಮರಿಮಗ. ಈ ತೋಹು ಎಂಬುವನು ಎಫ್ರಯಿಮ್ಯನಾದ ಚೂಫನ ಮಗ.
- Verse 2: ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ. ಇನ್ನೊಬ್ಬಳು ಪೆನಿನ್ನ. ಪೆನಿನ್ನಗೆ ಮಕ್ಕಳು ಇದ್ದರು; ಆದರೆ ಹನ್ನಳಿಗೆ ಇರಲಿಲ್ಲ.
- Verse 3: ಎಲ್ಕಾನನು ಪ್ರತಿ ವರ್ಷ ರಾಮಾದಿಂದ ಶಿಲೋವಿಗೆ ಹೋಗಿ ಸೇನಾಧೀಶ್ವರರಾದ ಸರ್ವೇಶ್ವರಸ್ವಾಮಿಗೆ ಬಲಿದಾನವನ್ನು ಸಮರ್ಪಿಸಿ ಆರಾಧಿಸುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ, ಫೀನೆಹಾಸ ಎಂಬವರು ಸರ್ವೇಶ್ವರನ ಯಾಜಕರಾಗಿದ್ದರು.
- Verse 4: ಎಲ್ಕಾನನು ಬಲಿಯರ್ಪಿಸಿದಾಗಲೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲ ಗಂಡು-ಹೆಣ್ಣು ಮಕ್ಕಳಿಗೂ ಬಲಿಭೋಜನದ ಒಂದೊಂದು ಭಾಗವನ್ನು ಕೊಡುತ್ತಿದ್ದನು.
- Verse 5: ಅವನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದರೂ ಒಂದು ಭಾಗವನ್ನು ಮಾತ್ರ ಆಕೆಗೆ ಕೊಡುತ್ತಾ ಇದ್ದನು. ಏಕೆಂದರೆ ಸರ್ವೇಶ್ವರ ಆಕೆಗೆ ಮಕ್ಕಳನ್ನು ಕೊಟ್ಟಿರಲಿಲ್ಲ.
- Verse 6: ಇದಲ್ಲದೆ, “ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ,” ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು.
- Verse 7: ವರ್ಷ ವರ್ಷವೂ ಇದು ಹಾಗೆಯೆ ನಡೆಯುತ್ತಿತ್ತು; “ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು.
- Verse 8: ಆಗ ಆಕೆಯ ಗಂಡ ಎಲ್ಕಾನನು ಆಕೆಗೆ, “ಹನ್ನಾ, ಏಕೆ ಅಳುತ್ತಿರುವೆ? ಊಟಮಾಡದಿರುವುದಕ್ಕೆ ಕಾರಣ ಏನು? ವ್ಯಸನಪಡುವುದು ಏಕೆ? ಹತ್ತು ಮಕ್ಕಳಿಗಿಂತಲು ನಾನು ನಿನಗೆ ಹೆಚ್ಚಲ್ಲವೆ?” ಎಂದನು
- Verse 9: ಶಿಲೋವಿನಲ್ಲಿ ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ ಹನ್ನಳು ಎದ್ದು ಸರ್ವೇಶ್ವರನ ಮಂದಿರಕ್ಕೆ ಬಂದಳು. ಯಾಜಕ ಏಲಿಯನು ಆ ಮಂದಿರದ ದ್ವಾರದ ನಿಲುವು ಪಟ್ಟಿಗಳ ಬಳಿ ಒಂದು ಪೀಠದ ಮೇಲೆ ಕುಳಿತಿದ್ದನು.
- Verse 10: ಹನ್ನಳು ಬಹು ದುಃಖದಿಂದ ಕಣ್ಣೀರಿಡುತ್ತಾ ಸರ್ವೇಶ್ವರನಲ್ಲಿ ಹೀಗೆಂದು ಪ್ರಾರ್ಥಿಸಿದಳು:
- Verse 11: “ಸರ್ವಶಕ್ತರಾದ ಸರ್ವೇಶ್ವರಾ, ನಿಮ್ಮ ದಾಸಿ ಆದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿ. ಅವನನ್ನು ಅಮರಣಾಂತರ ನಿಮಗೇ ಸಮರ್ಪಿಸುವೆನು; ಅವನ ತಲೆಯ ಮೇಲೆ ಕ್ಷೌರಕತ್ತಿಯನ್ನು ಬರಗೊಡಿಸುವುದಿಲ್ಲ ಎಂದು ಹರಕೆ ಮಾಡುತ್ತೇನೆ.”
- Verse 12: ಹನ್ನಳು ಬಹಳ ಹೊತ್ತಿನವರೆಗೆ ಸರ್ವೇಶ್ವರನ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾ ಇದ್ದಳು. ಏಲಿ ಆಕೆಯ ಬಾಯನ್ನು ಗಮನಿಸಿದನು.
- Verse 13: ಆಕೆ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾ ಇದ್ದಳು; ತುಟಿಗಳು ಅಲುಗಾಡುತ್ತಿದ್ದವು, ಶಬ್ದ ಮಾತ್ರ ಕೇಳಿಸುತ್ತಿರಲಿಲ್ಲ. ಆದುದರಿಂದ ಇವಳು ಕುಡಿದಿರಬೇಕೆಂದು ತಿಳಿದು,
- Verse 14: “ನಿನ್ನ ಕುಡಿತದ ಅಮಲು ಇನ್ನೂ ಇಳಿಯಲಿಲ್ಲವೆ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟುಹೋಗಲಿ,” ಎಂದನು.
- Verse 15: ಆಕೆ, “ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ.
- Verse 16: ನಿಮ್ಮ ದಾಸಿಯಾದ ನನ್ನನ್ನು ಅಯೋಗ್ಯಳೆಂದು ನೆನಸಬೇಡಿ. ಈವರೆಗೂ ನನ್ನ ಅತಿಯಾದ ಚಿಂತೆಯನ್ನೂ ವ್ಯಥೆಯನ್ನೂ ಅರಿಕೆಮಾಡಿಕೊಳ್ಳುತ್ತಿದ್ದೆ,” ಎಂದು ಹೇಳಿದಳು.
- Verse 17: ಆಗ ಏಲಿ ಆಕೆಗೆ, “ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ,” ಎಂದನು.
- Verse 18: “ನಿಮ್ಮ ದಾಸಿಯಾದ ನನ್ನ ಮೇಲೆ ಕರುಣೆಯಿರಲಿ,” ಎಂದು ಹೇಳಿ ಆಕೆ ಅಲ್ಲಿಂದ ಹೊರಟುಹೋಗಿ ಊಟಮಾಡಿದಳು. ಬಳಿಕ ಅವಳ ದುಃಖ ದೂರವಾಯಿತು.
- Verse 19: ಮಾರನೆಯ ದಿನ ಬೆಳಿಗ್ಗೆ ಅವರೆಲ್ಲರು ಎದ್ದು ಸರ್ವೇಶ್ವರನನ್ನು ಆರಾಧಿಸಿ ರಾಮಾದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಲು ಆಕೆ ಸರ್ವೇಶ್ವರನ ಅನುಗ್ರಹದಿಂದ ಗರ್ಭಿಣಿ ಆದಳು.
- Verse 20: ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. “ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ,” ಎಂದು ಹೇಳಿ ಆ ಮಗುವಿಗೆ ‘ಸಮುವೇಲ’ ಎಂದು ಹೆಸರಿಟ್ಟಳು.
- Verse 21: ವಾಡಿಕೆಯ ಪ್ರಕಾರ ಎಲ್ಕಾನನು ಕುಟುಂಬ ಸಹಿತವಾಗಿ ಸರ್ವೇಶ್ವರನಿಗೆ ವಾರ್ಷಿಕ ಬಲಿಯನ್ನು ಅರ್ಪಿಸಲು ಹಾಗು ಹರಕೆಯನ್ನು ತೀರಿಸಲು ಶಿಲೋವಿಗೆ ಹೋಗಲು ಸಿದ್ಧನಾದ.
- Verse 22: ಹನ್ನಳು, “ಮಗನು ಮೊಲೆಬಿಡುವವರೆಗೂ ನಾನು ಬರುವುದಿಲ್ಲ; ಅವನು ಸರ್ವೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಬಾಳಿನುದ್ದಕ್ಕೂ ಅಲ್ಲಿಯೇ ಇರುವ ಹಾಗೆ ಆಮೇಲೆ ತೆಗೆದುಕೊಂಡು ಬರುತ್ತೇನೆ,” ಎಂದು ಹೇಳಿದಳು.
- Verse 23: ಗಂಡನಾದ ಎಲ್ಕಾನನು, “ಹಾಗೆಯೇ ಆಗಲಿ; ನಿನಗೆ ಸರಿತೋರಿದಂತೆ ಮಾಡು. ಮಗು ಮೊಲೆಬಿಡುವವರೆಗೆ ಮನೆಯಲ್ಲೇ ಇರು. ಸರ್ವೇಶ್ವರ ನಿನ್ನ ಮಾತನ್ನು ದೃಢವಾಗಿಸಲಿ,” ಎಂದನು. ಮಗು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಆರೈಕೆ ಮಾಡಿದಳು.
- Verse 24: ಅನಂತರ ಆಕೆ ಮಗನನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗೂ ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು.
- Verse 25: ಆ ಹೋರಿಯನ್ನು ಬಲಿದಾನ ಮಾಡಿದ ಮೇಲೆ ಮಗುವನ್ನು ಏಲಿಯ ಬಳಿಗೆ ತರಲಾಯಿತು.
- Verse 26: ಹನ್ನಳು ಏಲಿಗೆ, “ಸ್ವಾಮೀ, ನಿಮ್ಮ ಜೀವದಾಣೆ, ಹಿಂದೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿಮ್ಮ ಹತ್ತಿರ ನಿಂತಿದ್ದ ಮಹಿಳೆ ನಾನೇ.
- Verse 27: ಸರ್ವೇಶ್ವರ ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ.
- Verse 28: ಇವನನ್ನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟಿದ್ದೇನೆ. ಬದುಕಿರುವ ತನಕ ಇವನು ಅವರಿಗೇ ಪ್ರತಿಷ್ಠಿತನು,” ಎಂದು ಹೇಳಿದಳು. ಬಳಿಕ ಅವರು ಸರ್ವೇಶ್ವರಸ್ವಾಮಿಯನ್ನು ಆರಾಧಿಸಿದರು.