पवित्र बाइबिल
ಹಳೆಯ ಒಡಂಬಡಿಕೆ
ಯಾಜಕಕಾಂಡ
10ನೇ ಅಧ್ಯಾಯ
- Verse 1: ಆರೋನನ ಮಕ್ಕಳಲ್ಲಿ ನಾದಾಬ್ ಮತ್ತು ಅಬೀಹು ಎಂಬಿಬ್ಬರು ತಮ್ಮ ತಮ್ಮ ಧೂಪ ಕಳಸಗಳಲ್ಲಿ ಸರ್ವೇಶ್ವರ ಸ್ವಾಮಿ ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು, ಅದರ ಮೇಲೆ ಸಾಂಬ್ರಾಣಿಯನ್ನು ಹಾಕಿ ಸರ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿದರು.
- Verse 2: ಆಗ ಸರ್ವೇಶ್ವರನ ಸನ್ನಿಧಿಯಿಂದ ಬೆಂಕಿ ಹೊರಟು ಅವರನ್ನು ನಾಶಮಾಡಿತು. ಅವರು ಸರ್ವೇಶ್ವರನ ಸನ್ನಿಧಿಯಲ್ಲೇ ಸತ್ತರು.
- Verse 3: ಆಗ ಮೋಶೆ ಆರೋನನಿಗೆ: “’ನನ್ನ ಬಳಿಯಿರುವವರ ಮುಖಾಂತರವೆ ನನ್ನ ಪರಿಶುದ್ಧತೆಯನ್ನು ತೋರ್ಪಡಿಸುವೆ ಜನರೆಲ್ಲರ ಸಮ್ಮುಖದಲೆ ನನ್ನ ಮಹಿಮೆಯನು ಶೃತಪಡಿಸುವೆ, ಎಂಬ ಸರ್ವೇಶ್ವರನ ನುಡಿಗೆ ಇದೊಂದು ದೃಷ್ಟಾಂತವೇ ಸರಿ,” ಎಂದನು. ಅದಕ್ಕೆ ಆರೋನನು ಮೌನವಾಗಿದ್ದನು.
- Verse 4: ಮೋಶೆ ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ಮೀಶಾಯೇಲನನ್ನು ಮತ್ತು ಎಲ್ಸಾಫನನ್ನು ಕರೆಸಿ, “ನೀವು ಇಲ್ಲಿಗೆ ಬಂದು ನಿಮ್ಮ ಅಣ್ಣಂದಿರ ಶವಗಳನ್ನು ದೇವಮಂದಿರದಿಂದ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋಗಿ,” ಎಂದನು.
- Verse 5: ಮೋಶೆಯ ಅಪ್ಪಣೆಯ ಮೇರೆಗೆ ಅವರು ಬಂದು ಸತ್ತವರ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಹೊರಕ್ಕೆ ಹೊತ್ತುಕೊಂಡು ಹೋದರು.
- Verse 6: ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಹಾಗು ಈತಾಮಾರ್ ಎಂಬುವರಿಗೆ, “ನೀವು ಸಂತಾಪ ಸೂಚಿಸಲು ಕೂದಲನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವು ಕೂಡ ಸಾಯುವಿರಿ; ಅದು ಮಾತ್ರವಲ್ಲ, ಇಡೀ ಜನಸಮೂಹದ ಮೇಲೆ ಸರ್ವೇಶ್ವರ ಸಿಟ್ಟುಗೊಳ್ಳುವರು. ಸರ್ವೇಶ್ವರನಿಂದ ಹೊರಟ ಆ ಬೆಂಕಿಯ ನಿಮಿತ್ತ ನಿಮ್ಮ ಸೋದರರಾದ ಇಸ್ರಯೇಲ್ ಸಮಾಜದವರೇ ದುಃಖಿಸಲಿ.
- Verse 7: ಸರ್ವೇಶ್ವರನ ಅಭಿಷೇಕತೈಲ ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು, ಹೋದರೆ ಸಾಯುವಿರಿ,” ಎಂದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು.
- Verse 8: ಆರೋನನಿಗೆ, ಸರ್ವೇಶ್ವರ,
- Verse 9: “ನೀನೂ ನಿನ್ನ ಪುತ್ರರು ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು, ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತ ನಿಯಮ.
- Verse 10: ದೇವರಿಗೆ ಮೀಸಲಾದ ವಸ್ತ್ರಗಳಾವುವು; ಸಲ್ಲದ ವಸ್ತ್ರಗಳಾವುವು; ಶುದ್ಧ, ಆಶುದ್ಧವಾದುವುಗಳಾವುವು ಎಂಬುದನ್ನು ನೀವು ವಿವೇಚಿಸಬೇಕು.
- Verse 11: ಸರ್ವೇಶ್ವರನಾದ ನಾನು ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಎಲ್ಲ ಆಜ್ಞೆಗಳನ್ನು ಜನರಿಗೆ ಬೋಧಿಸಬೇಕು. ಇದು ನಿಮ್ಮ ಕರ್ತವ್ಯ,” ಎಂದು ಹೇಳಿದರು.
- Verse 12: ಮೋಶೆ ಆರೋನನಿಗೂ ಅವನ ಉಳಿದ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್ ಅವರಿಗೆ ಹೀಗೆಂದು ಹೇಳಿದನು: “ಸರ್ವೇಶ್ವರನಿಗೆ ದಹನ ಬಲಿದಾನವಾಗಿ ಸಮರ್ಪಿತವಾದ ದ್ರವ್ಯಗಳಲ್ಲಿ ಮಿಕ್ಕಿರುವ ನೈವೇದ್ಯ ದ್ರವ್ಯವನ್ನು ತೆಗೆದುಕೊಂಡು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ ಬಲಿಪೀಠದ ಬಳಿಯಲ್ಲಿ ಊಟಮಾಡಿ.
- Verse 13: ಅದು ಮಹಾಪರಿಶುದ್ಧವಾಗಿರುವುದರಿಂದ ಪವಿತ್ರ ಸ್ಥಳದೊಳಗೇ ಅದನ್ನು ಊಟಮಾಡಿ. ಜನರು ಸರ್ವೇಶ್ವರನಿಗೆ ಸಮರ್ಪಿಸುವ ಹೋಮದ್ರವ್ಯಗಳಲ್ಲಿ ಅದು ನಿಮಗೂ ನಿಮ್ಮ ಮಕ್ಕಳಿಗೂ ಸಲ್ಲತಕ್ಕದೆಂದು ಅಪ್ಪಣೆಯಾಗಿದೆ.
- Verse 14: ನೀವು ಯಾಜಕನಿಗೆಂದೇ ಪ್ರತ್ಯೇಕವಾಗಿ ಆರತಿಯೆತ್ತಿ ಅರ್ಪಿಸಿದ ಎದೆಯ ಭಾಗವನ್ನು ಮತ್ತು ತೊಡೆಯನ್ನು ಯಾವುದಾದರೂ ಒಂದು ಶುದ್ಧ ಸ್ಥಳದಲ್ಲಿ ಊಟಮಾಡಬಹುದು. ನೀವೂ ನಿಮ್ಮ ಕುಟುಂಬದವರು ಅದನ್ನು ತಿನ್ನಬಹುದು. ಏಕೆಂದರೆ, ಇಸ್ರಯೇಲರು ಸಮರ್ಪಿಸುವ ಶಾಂತಿಸಮಾಧಾನದ ಬಲಿದ್ರವ್ಯಗಳಲ್ಲಿ ಇವು ನಿಮಗೂ ನಿಮ್ಮ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ.
- Verse 15: ಜನರು ಹೋಮಕ್ಕಾಗಿ ಕೊಬ್ಬನ್ನು ತಂದು ಸಮರ್ಪಿಸುವಾಗಲೆಲ್ಲಾ ಯಾಜಕರಿಗಾಗಿ ಪ್ರತ್ಯೇಕಿಸಿ ಆರತಿಯೆತ್ತಿ ಸಮರ್ಪಿಸುವ ಆ ಎದೆಯ ಭಾಗವನ್ನು, ತೊಡೆಯನ್ನು ಸರ್ವೇಶ್ವರನ ಸನ್ನಿಧಿಗೆ ತರಬೇಕು. ಸರ್ವೇಶ್ವರನ ಆಜ್ಞಾನುಸಾರ ಅವು ನಿಮಗೂ ನಿಮ್ಮ ವಂಶಜರಿಗೂ ಸಲ್ಲತಕ್ಕದ್ದು. ಇದು ಶಾಶ್ವತ ನಿಯಮ,” ಎಂದು ಹೇಳಿದನು.
- Verse 16: ಜನರೆಲ್ಲರ ದೋಷಪರಿಹಾರಕ್ಕಾಗಿ ಸಮರ್ಪಿತವಾದ ಹೋತದ ಬಗ್ಗೆ ಅದು ಏನಾಯಿತೆಂದು ಮೋಶೆ ವಿಚಾರಿಸಿದಾಗ ಅದನ್ನು ಸುಟ್ಟುಬಿಟ್ಟರೆಂದು ತಿಳಿದುಬಂದಿತು. ಇದನ್ನು ಕೇಳಿ ಮೋಶೆ, ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರ ಮೇಲೆ ಸಿಟ್ಟುಗೊಂಡನು.
- Verse 17: “ಆ ದೋಷಪರಿಹಾರಕ ಬಲಿ ಮಹಾಪರಿಶುದ್ಧವಾದುದಲ್ಲವೆ? ನೀವು ಜನಸಮೂಹದ ಪಾಪಗಳನ್ನು ಪರಿಹಾರಮಾಡುವಂತೆ, ಅವರ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷನಿವಾರಿಸುವಂತೆ, ಅದು ನಿಮ್ಮ ಭಾಗವಾಗಿ ನೇಮಕವಾಗಿದೆಯಲ್ಲವೆ? ಅದನ್ನೇಕೆ ನೀವು ಪರಿಶುದ್ಧ ಸ್ಥಳದಲ್ಲಿ ತಿನ್ನಲಿಲ್ಲ?
- Verse 18: ಅದರ ರಕ್ತವನ್ನು ಪವಿತ್ರಸ್ಥಾನದೊಳಕ್ಕೆ ತರಲಿಲ್ಲವಾದ ಕಾರಣ ನಾನು ಆಜ್ಞಾಪಿಸಿದಂತೆ ನೀವು ಅದರ ಮಾಂಸವನ್ನು ದೇವಸ್ಥಾನದ ಪ್ರಾಕಾರದೊಳಗೆ ತಿನ್ನಬೇಕಾಗಿತ್ತು,” ಎಂದನು.
- Verse 19: ಅದಕ್ಕೆ ಆರೋನನು ಮೋಶೆಗೆ, “ಇವರು ಈ ದಿನ ಸರ್ವೇಶ್ವರನ ಸನ್ನಿಧಿಯಲ್ಲಿ ತಮಗೋಸ್ಕರ ದೋಷಪರಿಹಾರಕ ಬಲಿಯನ್ನು ಹಾಗು ದಹನ ಬಲಿಯನ್ನು ಸಮರ್ಪಿಸಿದ್ದರೂ ಈ ಆಪತ್ತು ನನಗೆ ಸಂಭವಿಸಿತು; ಹೀಗಿರುವಲ್ಲಿ ನಾನು ದೋಷಪರಿಹಾರಕ ಬಲಿಮಾಂಸವನ್ನು ಈ ದಿನ ಊಟಮಾಡಿದ್ದರೆ ಅದು ಸರ್ವೇಶ್ವರನಿಗೆ ಸರಿದೋರುತ್ತಿತ್ತೆ?” ಎಂದು ಉತ್ತರಕೊಟ್ಟನು.
- Verse 20: ಆರೋನನ ಈ ಮಾತು ಮೋಶೆಗೆ ತೃಪ್ತಿ ತಂದಿತು.