ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
71ನೇ ಅಧ್ಯಾಯ
- Verse 1: ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ I ಆಶಾಭಂಗವಾಗದಿರಲೆಂದು ನಾ ಬೇಡುವೆ II
- Verse 2: ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ I ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ II
- Verse 3: ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು I ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು II
- Verse 4: ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ I ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ II
- Verse 5: ಸ್ವಾಮಿ ದೇವಾ, ನೀನೇ ನನ್ನ ಭರವಸೆ I ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ II
- Verse 6: ಹುಟ್ಟಿನಿಂದಲೆ ನಾ ನಿನಗಂಟಿಕೊಂಡಿರುವೆನಯ್ಯಾ I ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ I ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ II
- Verse 7: ಹಲವರಿಗೆ ನಾನೊಂದು ಒಗಟು I ನೀನೆನಗೆ ಬಲವಾದ ನೆಲೆಗಟ್ಟು II
- Verse 8: ನಿನ್ನ ಗುಣಗಾನ ನನ್ನ ಬಾಯ್ತುಂಬ I ನಿನ್ನ ಘೋಷಣೆ ನನಗೆ ದಿನವಾದ್ಯಂತ II
- Verse 9: ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II
- Verse 10: ನನಗೆದುರಾಗಿ ಶತ್ರುಗಳಾಲೋಚಿಸುತಿಹರಯ್ಯಾ I ನನ್ನ ಕೊಲೆಗಾಗಿ ಒಂದುಗೂಡಿ ಹೊಂಚಿಸುತಿಹರಯ್ಯಾ II
- Verse 11: “ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು ಕೈಬಿಟ್ಟಿಹನು I ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತಿಹರು II
- Verse 12: ಓ ದೇವಾ, ದೂರವಾಗಿರಬೇಡಯ್ಯಾ I ನೆರವಾಗಲು ಬೇಗ ತ್ವರೆಮಾಡಯ್ಯಾ II
- Verse 13: ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ ಕಂಟಕರನು I ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು ಬಗೆವವರನು II
- Verse 14: ನಾನಂತು ನಂಬಿರುವೆ ನಿನ್ನ ನಿರಂತರವಾಗಿ I ನಿನ್ನನು ಕೀರ್ತಿಸುತ್ತಿರುವೆ ಅಧಿಕಾಧಿಕವಾಗಿ II
- Verse 15: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು I ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು II
- Verse 16: ಸ್ವಾಮಿ ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ I ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ II
- Verse 17: ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ? I ನಿನ್ನ ಅದ್ಭುತಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ II
- Verse 18: ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II
- Verse 19: ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ ಮುಟ್ಟುತ್ತಿಹವು I ಮಹತ್ಕಾರ್ಯಗಳೆಸಗಿದ ನಿನಗೆ ದೇವಾ, ಯಾರು ಸಾಟಿಯು? II
- Verse 20: ದೇವಾ, ಈಡು ಮಾಡಿದೆಯೆನ್ನನು ಕಷ್ಟಸಂಕಟಗಳಿಗೆ I ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ II
- Verse 21: ನನ್ನ ಗೌರವವನು ಅಧಿಕರಿಸಯ್ಯಾ I ಮರಳಿ ನೆಮ್ಮದಿಯನು ಪಾಲಿಸಯ್ಯಾ II
- Verse 22: ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ I ಕಿನ್ನರಿಯನು ನುಡಿಸುತಾ ಭಜಿಸುವೆನಯ್ಯಾ II ಇಸ್ರಯೇಲಿನ ಆ ಪರಮಪಾವನ ಸ್ವಾಮಿಯ I ವೀಣೆವಾದ್ಯದೊಂದಿಗೆ ಕೀರ್ತಿಸುವೆನಯ್ಯಾ II
- Verse 23: ಮಧುರದನಿಗೈವುದು ಎನ್ನಧರ ನಿನ್ನ ಗುಣಗಾನದಲಿ I ನೀನುದ್ಧರಿಸಿದ ಎನ್ನ ಮನ ಭಾಗಿಯಾಗುವುದಾ ಗಾನದಲಿ II
- Verse 24: ನನಗೆ ಕೇಡು ಬಗೆದವರಿದೋ ಪಡೆದರು ನಿಂದೆ ಅಪಮಾನವನು I ದಿನವೆಲ್ಲ ವರ್ಣಿಪುದೆನ್ನ ನಾಲಿಗೆ ನಿನ್ನೀ ನೀತಿಸಾಧನೆಯನು II