ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
119ನೇ ಅಧ್ಯಾಯ
- Verse 1: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು I ದೋಷರಹಿತ ಮಾರ್ಗದಲಿ ನಡೆವವರು ಧನ್ಯರು II
- Verse 2: ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು I ಮನಃಪೂರ್ವಕವಾಗಿ ಆತನನು ಅರಸುವವರು ಧನ್ಯರು II
- Verse 3: ಅಕ್ರಮಗೈಯರು ಅಂಥವರಾರು I ಆತ ತೋರಿದ ಮಾರ್ಗದಲೆ ನಡೆವರು II
- Verse 4: ನಿನ್ನ ನೇಮಗಳನು ಪ್ರಭೂ, ನೀನೆ ವ್ಯಕ್ತಪಡಿಸಿರುವೆಯಯ್ಯಾ I ಜಾಗರೂಕತೆಯಿಂದ ಪಾಲಿಸಬೇಕೆಂದು ನೀ ವಿಧಿಸಿರುವೆಯಯ್ಯಾ II
- Verse 5: ನಿನ್ನ ನಿಬಂಧನೆಗಳ ಪಾಲನೆಯಲಿ I ಸ್ಥಿರತೆ ಇದ್ದರೆ ಒಳಿತು ನನ್ನ ಮನದಲಿ II
- Verse 6: ಲಕ್ಷ್ಯ ಕೊಟ್ಟೆನಾದರೆ ನಿನ್ನೆಲ್ಲ ಆಜ್ಞೆಗಳಿಗೆ I ಆಸ್ಪದವಿರದು ಎನಗೆ ಪ್ರಭು, ಆಶಾಭಂಗಕೆ II
- Verse 7: ನೀತಿಯುತ ನಿನ್ನ ವಿಧಿಗಳನು ಕಲಿಯುವೆನಯ್ಯಾ I ಯಥಾರ್ಥ ಹೃದಯದಿಂದ ನಿನ್ನ ಸ್ತುತಿಪೆನಯ್ಯಾ II
- Verse 8: ನಿನ್ನ ನಿಬಂಧನೆಗಳನು ಅನುಸರಿಸುವೆನಯ್ಯಾ I ನನ್ನನೆಂದಿಗೂ, ಪ್ರಭು, ಕೈಬಿಡದಿರಯ್ಯಾ II
- Verse 9: ನಡತೆಯಲಿ ಶುದ್ಧವಿರಲು ಯುವಜನಕೆ ಹೇಗೆ ಸಾಧ್ಯ? I ನಿನ್ನಯ ವಾಕ್ಯಾನುಸರಣೆಯಿಂದಲೆ ಅವರಿಗದು ಸಾಧ್ಯ II
- Verse 10: ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ I ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ II
- Verse 11: ನಿನಗೆ ವಿರುದ್ಧ ನಾ ಪಾಪಮಾಡದಂತೆ I ನಿನ್ನಾ ನುಡಿಯನು ನನ್ನೆದೆಯಲ್ಲಿರಿಸಿದೆ II
- Verse 12: ಸ್ತುತಿ ಸಲ್ಲಲಿ ಪ್ರಭು ನಿನಗೆ I ನಿನ್ನ ಆಜ್ಞೆಗಳನು ಕಲಿಸು ಎನಗೆ II
- Verse 13: ಬಂದುವು ಆ ವಿಧಿಗಳು ನಿನ್ನ ಬಾಯಿಂದ I ವರ್ಣಿಸುವೆನು ಅವನ್ನು ನನ್ನ ಬಾಯಿಂದ II
- Verse 14: ಸಿರಿಸಂಪತ್ತಿಗಿಂತ ಮಿಗಿಲಾಗಿ I ಆನಂದಿಪೆ ನಿನ್ನ ಮಾರ್ಗಿಯಾಗಿ II
- Verse 15: ನನಗಿದೆ ನಿನ್ನ ನಿಯಮಗಳ ಧ್ಯಾನ I ನಿನ್ನ ಮಾರ್ಗಗಳಲ್ಲಿ ಗಾಢ ಗಮನ II
- Verse 16: ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ I ನಿನ್ನ ವಾಕ್ಯವನು ಮರೆಯಲಾರೆನಯ್ಯಾ II
- Verse 17: ನಿನ್ನ ನುಡಿಯ ಕೇಳಿ ಬಾಳುವಂತೆ I ತೋರು ದಾಸನೆನಗೆ ಪ್ರಸನ್ನತೆ II
- Verse 18: ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ I ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ II
- Verse 19: ಧರೆಯೊಳು ಪ್ರವಾಸಿಯಾಗಿ ನಾನಿರುವೆನಯ್ಯಾ I ನಿನ್ನಾಜ್ಞೆಗಳನು ನನಗೆ ಮರೆಮಾಡಬೇಡಯ್ಯಾ II
- Verse 20: ನಿನ್ನ ವಿಧಿಗಳನೆ ಹಂಬಲಿಸುತಿರುವೆ ಅನುದಿನ I ಇದು ಕಾರಣ ಕರಗಿಹೋಗುತಿದೆ ಎನ್ನ ಚೇತನ II
- Verse 21: ಶಾಪಗ್ರಸ್ತರು ನಿನ್ನ ಆಜ್ಞೆಗಳನು ಮೀರಿದವರು I ನಿನ್ನ ಧಿಕ್ಕಾರಕ್ಕೆ ಗುರಿಯಾಗುವರು ಆ ಗರ್ವಿಷ್ಠರು II
- Verse 22: ನಿನ್ನ ಕಟ್ಟಳೆಗಳನು ಕೈಗೊಂಡು ನಡೆವವನು ನಾನು I ನನಗಿರುವ ನಿಂದಾಪಮಾನಗಳನು ತೊಲಗಿಸು ನೀನು II
- Verse 23: ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II
- Verse 24: ನಿನ್ನಾಜ್ಞೆಯು ಆನಂದದಾಯಕ I ಅವೇ ನನಗೆ ಮಂತ್ರಾಲೋಚಕ II
- Verse 25: ನನ್ನ ಪ್ರಾಣ ಸೊರಗಿ ಸುಣ್ಣವಾಗಿದೆಯಯ್ಯಾ I ನಿನ್ನ ವಾಕ್ಯಾನುಸಾರ ಉಜ್ಜೀವಗೊಳಿಸಯ್ಯಾ II
- Verse 26: ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II
- Verse 27: ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II
- Verse 28: ದುಃಖದಿಂದ ಸೊರಗಿಹೋಗಿದೆ ಎನ್ನಮನ I ನಿನ್ನ ವಾಕ್ಯಾನುಸಾರ ನೀಡು ಸಾಂತ್ವನ II
- Verse 29: ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II
- Verse 30: ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು II
- Verse 31: ಅಂಟಿಕೊಂಡಿರುವೆನು ನಿನ್ನ ಕಟ್ಟಳೆಗಳಿಗೆ I ಆಶಾಭಂಗಪಡಿಸಬೇಡ ಪ್ರಭು ನನಗೆ II
- Verse 32: ಹಿಡಿದಿರುವೆನು ನಿನ್ನ ಆಜ್ಞಾಮಾರ್ಗವನು I ಏಕೆನೆ ಹಿರಿದಾಗಿಸಿರುವೆ ನೀ ನನ್ನ ಅರಿವನು II
- Verse 33: ನಿನ್ನ ನಿಬಂಧನೆಯನು, ಪ್ರಭು, ಕಲಿಸೆನಗೆ I ಅದರಂತೆಯೇ ನಡೆಯುವೆನು ಕಡೆಯವರೆಗೆ II
- Verse 34: ನೀಡೆನಗೆ ನಿನ್ನ ಶಾಸ್ತ್ರದ ಅರಿವನು I ಪೂರ್ಣಮನದಿಂದ ಆಚರಿಸುವೆನದನು II
- Verse 35: ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ I ಪಡೆಯುವೆ ಹರ್ಷಾನಂದವನು ಅದರಲಿ II
- Verse 36: ತಿರುಗಿಸೆನ್ನ ಮನವ ನಿನ್ನ ಕಟ್ಟಳೆಯ ಕಡೆ I ಲಾಭಲೋಭದತ್ತ ಅದು ಸರಿಯದಂತೆ ತಡೆ II
- Verse 37: ವ್ಯರ್ಥವಾದವುಗಳು ನಾಟದಿರಲಿ ಕಣ್ಗೆ I ಚೇತನ ನೀಡು ನಿನ್ನ ಮಾರ್ಗದಲಿ ನನಗೆ II
- Verse 38: ಭಯಭಕ್ತ ಜನತೆಗೆ ನೀನಿತ್ತಾ ಮಾತು I ದಾಸನಾದ ನನ್ನಲಿ ನೆರವೇರಲಿ ಇಂತು II
- Verse 39: ತೊಲಗಲಿ ನಾನಂಜುವ ಅಪಮಾನವು I ನಿನ್ನ ವಿಧಿಗಳು ನನಗೆ ಹಿತಕರವಾದುವು II
- Verse 40: ನಿನ್ನ ನಿಬಂಧನೆಗಳ ಅಭಿಮಾನಿಯು ನಾನು I ನೀತಿಗನುಸಾರ ಚೇತನಗೊಳಿಸೆನ್ನ ನೀನು II
- Verse 41: ದೊರಕಲಿ ಪ್ರಭು ನನಗೆ ನಿನ್ನ ಕರುಣೆ I ನೀನು ವಾಗ್ದಾನಮಾಡಿದಾ ರಕ್ಷಣೆ II
- Verse 42: ಕೊಡುವೆನಾಗ ಸದುತ್ತರವನು ನಿಂದಕನಿಗೆ I ಕಾರಣ, ನಿನ್ನ ವಾಕ್ಯದಲೆ ಇದೆ ನನಗೆ ನಂಬಿಕೆ II
- Verse 43: ತೆಗೆಯಬೇಡ ನನ್ನ ಬಾಯಿಂದ ಸತ್ಯವನು I ನಂಬಿಕೊಂಡಿರುವೆ ನಿನ್ನ ನ್ಯಾಯವಿಧಿಯನು II
- Verse 44: ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ I ಯುಗಯುಗಾಂತರಕು ಅದನು ಪರಿಪಾಲಿಸುವೆ II
- Verse 45: ನಿನ್ನ ನಿಯಮದಂತೆ ಬಾಳಲು ಯತ್ನಿಸಿದೆ I ಎಂತಲೇ, ಆತಂಕವಿಲ್ಲದೆ ನಡೆದೆ II
- Verse 46: ಮಾತಾಡುವೆನು ನಿನ್ನ ಆಜ್ಞೆಗಳ ವಿಷಯವಾಗಿ I ಅರಸುಗಳ ಮುಂದೆಯು ನಿಸ್ಸಂಕೋಚವಾಗಿ II
- Verse 47: ನಿನ್ನ ಆಜ್ಞೆಗಳಲ್ಲಿದೆ ನನಗಾನಂದ I ಅವುಗಳ ಮೇಲೆಯೆ ನನಗಭಿಮೋದ II
- Verse 48: ನಾ ಕೈಯೊಡ್ಡಿ ಕೇಳುವುದು ನಿನ್ನ ಆಜ್ಞೆಗಳನೆ I ನನಗೆ ಪ್ರಿಯ, ಧ್ಯಾನಾರ್ಹ, ನಿನ್ನ ನಿಬಂಧನೆ II
- Verse 49: ಸ್ಮರಿಸಿಕೋ ದಾಸನೆನಗೆ ನೀನಿತ್ತಾ ಮಾತನು I ಹುಟ್ಟಿಸಿರುವೆ ನನ್ನೊಳು ನಂಬಿಕೆ, ನಿರೀಕ್ಷೆಗಳನು II
- Verse 50: ನಿನ್ನ ನುಡಿ ತರುತ್ತದೆನಗೆ ನವಚೇತನ I ಆಪತ್ಕಾಲದಲಿ ನನಗದೇ ಸಾಂತ್ವನ II
- Verse 51: ಹಾಸ್ಯ ಅಪಹಾಸ್ಯ ಮಾಡಿದರು ಗರ್ವಿಷ್ಠರೆನ್ನನು I ಆದರೂ ನಾ ಬಿಡಲಿಲ್ಲ ನಿನ್ನ ಧರ್ಮಶಾಸ್ತ್ರವನು II
- Verse 52: ನಿನ್ನ ಪ್ರಾಚೀನ ವಿಧಿಗಳ ಜ್ಞಾಪನ I ತರುತ್ತದೆನಗೆ ಹೇ ಪ್ರಭೂ, ಸಾಂತ್ವನ II
- Verse 53: ನಿನ್ನ ಶಾಸ್ತ್ರದ ಭ್ರಷ್ಠರನು ಕಂಡಾಗ I ನನಗೆ ಬರುತ್ತದೆ ಕೋಪೋದ್ರೇಕ II
- Verse 54: ನನ್ನೀ ಬಾಳ ಪ್ರವಾಸ ಮಂದಿರದೊಳು I ಗಾನವಾದುವು ನಿನ್ನಾನಿಬಂಧನೆಗಳು II
- Verse 55: ರಾತ್ರಿಯೊಳೂ ಮಾಡಿದೆ ನಿನ್ನ ನಾಮಸ್ಮರಣೆಯನು I ಕೈಗೊಂಡೆನು ಹೇ ಪ್ರಭೂ, ನಿನ್ನ ಧರ್ಮಶಾಸ್ತ್ರವನು II
- Verse 56: ಈ ನಿನ್ನ ನಿಯಮಗಳ ಪಾಲನೆ I ನನ್ನ ಪಾಲಿಗದು ಸಂಭಾವನೆ II
- Verse 57: ಹೇ ಪ್ರಭು, ನೀನೇ ನನ್ನ ಪಾಲಿನ ಸ್ವಾಸ್ತ್ಯ I ನಿನ್ನ ವಾಕ್ಯದ ಪಾಲನೆಯೆ ನಾಗೈದ ನಿರ್ಣಯ II
- Verse 58: ನಿನ್ನ ಕರುಣೆಯನು ಕೋರಿದೆನು ಮನಸಾರ I ಪ್ರಸನ್ನನಾಗು ನನಗೆ ನಿನ್ನ ನುಡಿಗನುಸಾರ II
- Verse 59: ನನ್ನಯ ನಡತೆಯನು ಪರಿಶೋಧಿಸುತ್ತ I ತಿರುಗಿಕೊಂಡೆನು ನಿನ್ನ ಕಟ್ಟಳೆಯತ್ತ II
- Verse 60: ನಿನ್ನ ಆಜ್ಞೆಯನು ನಾನು ಅನುಸರಿಸುವಲ್ಲಿ I ಆಲಸಿಯಲ್ಲ, ಆಸಕ್ತ ನಾನು ಅದರಲ್ಲಿ II
- Verse 61: ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನು I ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು II
- Verse 62: ನ್ಯಾಯಯುತ ನಿನ್ನ ವಿಧಿಗೋಸ್ಕರ ವಂದಿಸಲು I ನಾನು ಎಚ್ಚರಗೊಳ್ಳುವೆ ಮಧ್ಯರಾತ್ರಿಯೊಳು II
- Verse 63: ಗೆಳೆಯ ನಾನು ನಿನ್ನಲಿ ಭಯಭಕ್ತಿಯುಳ್ಳವರಿಗೆ I ನಿನ್ನ ನಿಯಮಗಳ ಕೈಗೊಂಡು ನಡೆಯುವವರಿಗೆ II
- Verse 64: ಪ್ರಭು, ನಿನ್ನಚಲ ಪ್ರೀತಿಯಿಂದ ಜಗ ತುಂಬಿದೆ I ನೀಡೆನಗೆ ಪ್ರಭು, ನಿನ್ನ ನಿಬಂಧನೆಗಳ ಬೋಧೆ II
- Verse 65: ಹೇ ಪ್ರಭೂ, ನಿನ್ನ ವಾಗ್ದಾನದ ಪ್ರಕಾರ I ಮಾಡಿದೆ ನಿನ್ನ ದಾಸನಿಗೆ ಮಹೋಪಕಾರ II
- Verse 66: ಸುಜ್ಞಾನ ವಿವೇಕಗಳನು ಕಲಿಸೆನಗೆ I ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ II
- Verse 67: ಕಷ್ಟಾನುಭವಕೆ ಮುಂಚೆ ದಾರಿತಪ್ಪಿ ನಡೆದೆ I ಆದರೀಗ ನಡೆಯುತ್ತಿರುವೆ ನಿನ್ನ ನುಡಿಯಂತೆ II
- Verse 68: ಒಳ್ಳೆಯವ, ಒಳ್ಳೆಯದ ಗೈಕೊಳ್ಳುವ ನೀನು I ಬೋಧಿಸೆನಗೆ ನಿನ್ನಾ ನಿಬಂಧನೆಗಳನು II
- Verse 69: ಸುಳ್ಳು ಕಲ್ಪಿಸಿಹರಾ ಗರ್ವಿಗಳು ನಿನಗೆ ವಿರುದ್ಧವಾಗಿ I ನಾನೋ ಪಾಲಿಪೆ ನಿನ್ನ ನಿಯಮಗಳನು ಹೃತ್ಪೂರ್ವಕವಾಗಿ II
- Verse 70: ಕೊಬ್ಬಿನಂತೆ ಆ ಜನರ ಹೃದಯ ಮಂದ I ನಿನ್ನ ಧರ್ಮಶಾಸ್ತ್ರವೇ ನನಗಾನಂದ II
- Verse 71: ಕಷ್ಟಾನುಭವವೂ ಆಯಿತೆನಗೆ ಹಿತಕರ I ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ II
- Verse 72: ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ I ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ II
- Verse 73: ನನ್ನನು ನಿರ್ಮಿಸಿ ರೂಪಿಸಿವೆ ನಿನ್ನ ಕೈಗಳು I ನೀಡು ಬುದ್ಧಿಯನು ನಿನ್ನಾಜ್ಞೆಗಳನು ಕಲಿಯಲು II
- Verse 74: ನಿನ್ನಾ ವಾಕ್ಯದಲಿ ನಾನಿತ್ತ ನಿರೀಕ್ಷೆಯಿಂದ I ಭಯಭಕ್ತಿಯುಳ್ಳವನು ನೋಡಿ ಪಡೆದನು ಆನಂದ II
- Verse 75: ನಾ ಬಲ್ಲೆ ಪ್ರಭು, ನಿನ್ನ ವಿಧಿಗಳು ನೀತಿಯುತವೆಂದು I ಕಷ್ಟಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು II
- Verse 76: ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ I ಸಾಂತ್ವನ ನೀಡಲಿ ನನಗೆ ನಿನ್ನಚಲ ಒಲವರ II
- Verse 77: ನಾ ಬದುಕುವಂತೆ ತೋರೆನಗೆ ನಿನ್ನ ದಯ I ನಿನ್ನ ಧರ್ಮಶಾಸ್ತ್ರ ನನಗೆ ಪರಮಪ್ರಿಯ II
- Verse 78: ನನಗೆ ಕೇಡು ಬಗೆದ ಗರ್ವಿಗಳಿಗಾಗಲಿ ಮಾನಭಂಗ I ನಾನಾದರೋ ಗೈವೆ ನಿನ್ನ ನೇಮಗಳ ಧ್ಯಾನಯೋಗ II
- Verse 79: ನನ್ನತ್ತ ಬರಲಿ ನಿನ್ನಲಿ ಭಯಭೀತಿಯುಳ್ಳವರು I ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು II
- Verse 80: ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ I ನನಗೆ ಒದಗದು ಆಗ ಆಶಾಭಂಗ, ಅವಮಾನ II
- Verse 81: ಮನಗುಂದಿರುವೆ ನಾ ಮುಕ್ತಿಯ ಬಯಕೆಯಲೆ I ನಂಬಿಕೆಯನು ಇಟ್ಟಿರುವೆ ನಿನ್ನ ವಾಕ್ಯದಲೆ II
- Verse 82: ನಿನ್ನ ವಾಗ್ದಾನದ ನಿರೀಕ್ಷೆಯಲೆ ನನ್ನ ಕಣ್ಣು ಸೊರಗಿವೆ I “ನನಗೆಂದು ನೀಡುವೆ ಸಾಂತ್ವನ?” ಎಂದು ನಾ ಕೇಳುತ್ತಿರುವೆ II
- Verse 83: ಬೆಂಕಿಗೆ ಬಿಸಾಡಿದ ಒಣ ಬುದ್ಧಲಿಯಂತಾದೆ I ಆದರೂ ನಿನ್ನ ನಿಬಂಧನೆಗಳನ್ನು ಮರೆಯದಿದ್ದೆ II
- Verse 84: ನಿನ್ನ ದಾಸ ನಾನೆಷ್ಟು ದಿನ ಕಾದಿರಬೇಕಯ್ಯಾ I ನನ್ನ ಹಿಂಸಕರಿಗೆಂದು ಶಿಕ್ಷೆ ವಿಧಿಸುವೆಯಯ್ಯಾ? II
- Verse 85: ಗುಂಡಿ ಅಗೆದಿಹರು ಎನಗೆ ಗರ್ವಿಷ್ಠರು I ಧರ್ಮಶಾಸ್ತ್ರ ಪಾಲಿಸದ ಆ ದುರುಳರು II
- Verse 86: ನಿನ್ನ ಆಜ್ಞೆಗಳೆಲ್ಲ ನಂಬಲರ್ಹವಾದುವಯ್ಯಾ I ನಿಷ್ಕಾರಣವಾಗಿ ಹಿಂಸಿಸುತಿಹರು, ನೆರವಾಗಯ್ಯಾ II
- Verse 87: ಅಳಿಸಿಹಾಕಲು ನೋಡಿದರು ಇಳೆಯಿಂದೆನ್ನನು I ಆದರು ಉಳಿಸಿಕೊಂಡೆನು ನಿನ್ನ ನಿಯಮಗಳನು II
- Verse 88: ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು I ಕೈಗೊಳ್ಳುವೆನಾಗ ನಿನ್ನ ಬಾಯುಸುರಿದ ಕಟ್ಟಳೆಗಳನು II
- Verse 89: ಹೇ ಪ್ರಭು, ನಿನ್ನ ವಾಕ್ಯ ಶಾಶ್ವತ I ಪರಲೋಕದಲಿ ಅದು ಚಿರ ಶಾಶ್ವತ II
- Verse 90: ಇರುವುದು ತಲತಲಾಂತರಕು ನಿನ್ನ ಸತ್ಯತೆ I ನೀ ಸ್ಥಾಪಿಸಿದ ಭೂಮಂಡಲಕ್ಕಿದೆ ಸ್ಥಿರತೆ II
- Verse 91: ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ I ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ II
- Verse 92: ನಿನ್ನ ಧರ್ಮಶಾಸ್ತ್ರವು ನೀಡಿರದಿದ್ದರೆ ನನಗೆ ಸಂತಸ I ನನಗೊದಗಿದ ವಿಪತ್ತಿನಲೆ ನಾ ಹೊಂದುತ್ತಿದ್ದೆ ವಿನಾಶ II
- Verse 93: ಮರೆಯೆ ನಾನೆಂದಿಗೂ ನಿನ್ನ ನಿಯಮಗಳನು I ಅವುಗಳಿಂದಲೇ ನನಗಿತ್ತೆ ನವಜೀವನವನು II
- Verse 94: ಉದ್ಧರಿಸೆನ್ನನು, ನಾನು ನಿನ್ನವನು I ನಿನ್ನ ನಿಯಮಗಳಲೇ ಆಸಕ್ತನು II
- Verse 95: ಹೊಂಚುಹಾಕುತಿಹರು ದುರುಳರು ಸಂಹರಿಸಲೆನ್ನನು I ನಾನೋ ನಿನ್ನ ಕಟ್ಟಳೆಗಳನು ಲಕ್ಷಿಸುತ್ತಿರುವೆನು II
- Verse 96: ನಾ ಬಲ್ಲೆ ಸರ್ವಸಂಪೂರ್ಣತೆಗೂ ಮಿತಿ ಉಂಟೆಂದು I ನಿನ್ನ ಆಜ್ಞೆಗಳಾದರೋ ಅಪರಿಮಿತವಾದುವೆಂದು II
- Verse 97: ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ I ನಾನದರಲೇ ದಿನವೆಲ್ಲಾ ಧ್ಯಾನಮಯ II
- Verse 98: ನಿನ್ನಾಜ್ಞೆಗಳು ಸದಾ ನನ್ನೊಂದಿಗಿರುವುದರಿಂದ I ನಾನಧಿಕ ಬುದ್ಧಿವಂತ ನನ್ನ ಶತ್ರುಗಳಿಗಿಂತ II
- Verse 99: ನಿನ್ನ ಕಟ್ಟಳೆಗಳ ಧ್ಯಾನಿ ನಾನಾದುದರಿಂದ I ನಾನಧಿಕ ಜ್ಞಾನಿ ನನ್ನ ಬೋಧಕರೆಲ್ಲರಿಗಿಂತ II
- Verse 100: ನಿನ್ನ ನಿಯಮಗಳನು ಕೈಗೊಂಡುದರಿಂದ I ನಾನಧಿಕ ವಿವೇಕಿ ಗುರುಹಿರಿಯರಿಗಿಂತ II
- Verse 101: ನಿನ್ನ ವಾಕ್ಯವನು ಅನುಸರಿಸುವ ಧ್ಯೇಯದಿಂದ I ನನ್ನ ಹೆಜ್ಜೆಗಳನು ತಡೆದೆನು ದುರ್ಮಾರ್ಗದಿಂದ II
- Verse 102: ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ I ನೀನೇ ನನಗದರ ಬೋಧನೆ ಮಾಡಿದ್ದರಿಂದ II
- Verse 103: ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ I ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ II
- Verse 104: ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ I ದ್ವೇಷಿಸುತಿಹೆನು ಪ್ರತಿಯೊಂದು ಮಿಥ್ಯಾ ಮಾರ್ಗ II
- Verse 105: ನಿನ್ನ ವಾಕ್ಯ ನನಗೆ ದಾರಿದೀಪ I ನನ್ನ ಕಾಲಿನ ನಡೆಗೆ ಕೈದೀಪ II
- Verse 106: ನಡೆದುಕೊಳ್ಳುವೆನು ಶಪಥ ಮಾಡಿರುವಂತೆ I ನಿನ್ನ ನೀತಿವಿಧಿಗಳನು ಪಾಲಿಪೆನು ಅದರಂತೆ II
- Verse 107: ಕುಗ್ಗಿಹೋಗಿರುವೆನು ಪ್ರಭು ಅತ್ಯಧಿಕವಾಗಿ I ಚೇತನಗೊಳಿಸು ನಿನ್ನ ವಾಕ್ಯಾನುಸಾರವಾಗಿ II
- Verse 108: ಸ್ವೀಕರಿಸು ನಾನು ಉಸುರುವ ಸ್ತುತಿಯರ್ಪಣೆಯನು I ಪ್ರಭೂ, ನನಗೆ ಕಲಿಸು ನಿನ್ನ ವಿಧಿನಿಯಮಗಳನು II
- Verse 109: ಕೈಯಲಿ ಜೀವ ಹಿಡಿದು ಕಳೆಯುತಿರುವೆ ಕಾಲವೆಲ್ಲ I ಆದರೂ ಪ್ರಭು, ನಾ ಧರ್ಮಶಾಸ್ತ್ರವನು ಮರೆತಿಲ್ಲ II
- Verse 110: ಒಡ್ಡಿಹರು ಎನಗೆ ಆ ದುರುಳ ಜನರು ಬಲೆಯನು I ಆದರೂ ಮೀರಿಲ್ಲ ನಾನು ನಿನ್ನ ನಿಯಮಗಳನು II
- Verse 111: ಹೃದಯಾನಂದಕರ ನಿನ್ನ ಕಟ್ಟಳೆಗಳು I ನನಗಮರ ಸ್ವಾಸ್ತ್ಯವಾದುವುವು ಅವುಗಳು II
- Verse 112: ಮನಸ್ಸುಮಾಡಿರುವೆ ಸದಾ ಕೈಗೊಂಡು ನಡೆಯಲು I ಜೀವಮಾನವೆಲ್ಲ ನಿನ್ನ ನಿಬಂಧನೆಗಳನು II
- Verse 113: ದ್ವೇಷವಿದೆ ಎನಗೆ ದ್ವಿಮನಸ್ಕರಲಿ I ಪ್ರೀತಿ ಇದೆ ನಿನ್ನ ಧರ್ಮಶಾಸ್ತ್ರದಲಿ II
- Verse 114: ನನ್ನಾಶ್ರಯವೂ ಕವಚವೂ ನೀನೇ I ನಿರೀಕ್ಷಿಸುತಿರುವೆ ನಿನ್ನ ವಾಕ್ಯವನೆ II
- Verse 115: ತೊಲಗು ನನ್ನಿಂದ ದುರುಳ ಜನಾಂಗವೆ I ದೈವಾಜ್ಞೆಗಳನು ನಾನು ಪಾಲಿಸುವೆ II
- Verse 116: ನಿನ್ನ ನುಡಿಗನುಸಾರ ಉದ್ಧರಿಸು, ನಾ ಬದುಕುವೆ I ನಿರಾಶೆಗೊಳಿಸಬೇಡ ನಾ ನಿರೀಕ್ಷಿಸುತ್ತಿರುವೆ II
- Verse 117: ನನಗಾಧಾರವಾಗಿರು ಸುರಕ್ಷಿತನಾಗಿರುವೆ I ನಿನ್ನಾ ನಿಬಂಧನೆಗಳಿಗೆ ಸದಾ ಗಮನ ಕೊಡುವೆ II
- Verse 118: ನಿಬಂಧನೆ ಮೀರಿದವರನು ತಿರಸ್ಕರಿಸುತಿ I ವ್ಯರ್ಥವಾದುದಾ ಜನರು ಹೂಡುವ ಕುಯುಕ್ತಿ II
- Verse 119: ಲೋಕದ ದುರುಳರನ್ನೆಲ್ಲಾ ಕಸದಂತೆ ಪರಿಗಣಿಸುತ್ತೀ I ಎಂತಲೇ, ನಿನ್ನಾ ಕಟ್ಟಳೆಯಲ್ಲಿದೆ ನನಗೆ ಆಸಕ್ತಿ II
- Verse 120: ನಡುಗುತ್ತಿದೆ ದೇಹ ನಿನ್ನ ಭಯದಿಂದ I ಬಾಳಿದೆ ನಿನ್ನ ವಿಧಿಗಳ ಭೀತಿಯಿಂದ II
- Verse 121: ಕೈಗೊಳ್ಳುವೆ ನೀತಿಯುತ ನಿನ್ನಾ ವಿಧಿಗಳನು I ಬಲಾತ್ಕಾರಿಗಳಿಗೊಪ್ಪಿಸಬೇಡ ನನ್ನನ್ನು II
- Verse 122: ಹೊಣೆಗಾರನಾಗು ನಿನ್ನ ದಾಸನ ಕ್ಷೇಮಕೆ I ಆ ಗರ್ವಿಗಳು ಬಾಧಕರಾಗದಿರಲಿ ನನಗೆ II
- Verse 123: ಮಂದವಾಯಿತೆನ್ನ ನೇತ್ರ ನಿನ್ನ ರಕ್ಷಣೆಗಾಗಿ ಕಾಯುತ I ನೀತಿಯುತ ನಿನ್ನ ನುಡಿ ಈಡೇರುವುದನು ನಿರೀಕ್ಷಿಸುತ II
- Verse 124: ಕೃಪೆಯಿಂದ ನಡೆಸು ನಿನ್ನ ದಾಸನನು I ಕಲಿಸೆನಗೆ ನಿನ್ನ ನಿಬಂಧನೆಗಳನು II
- Verse 125: ನಿನ್ನ ದಾಸ ನಾನು, ದಯಪಾಲಿಸು ಎನಗೆ I ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ II
- Verse 126: ಉಲ್ಲಂಘನೆಯಾಗಿದೆ ಪ್ರಭು, ನಿನ್ನ ಧರ್ಮಶಾಸ್ತ್ರ I ಸಮಯ ಬಂದೊದಗಿದೆ, ಆಗು ನೀನು ಕಾರ್ಯತತ್ಪರ II
- Verse 127: ಚಿನ್ನ, ಅಪರಂಜಿಗಿಂತಲೂ ಪ್ರಿಯ I ನಿನ್ನ ಆಜ್ಞೆಗಳು ನನಗೆ ಸುಪ್ರಿಯ II
- Verse 128: ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ I ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ II
- Verse 129: ಅಪೂರ್ವವಾದ ನಿನ್ನ ಕಟ್ಟಳೆಗಳನು I ಹೃತ್ಪೂರ್ವಕವಾಗಿ ನಾ ಪಾಲಿಪೆನು II
- Verse 130: ತರುವುದು ನಿನ್ನ ವಾಕ್ಯೋಪದೇಶ I ಸರಳ ಜನರಿಗೆ ಜ್ಞಾನ ಪ್ರಕಾಶ II
- Verse 131: ಬಾಯ್ದೆರೆದು ಹಾತೊರೆಯುತಿರುವೆ I ನಿನ್ನ ಆಜ್ಞೆಗಳನು ಅರಸುತಿರುವೆ II
- Verse 132: ನಿನ್ನ ನಾಮಪ್ರಿಯರಿಗೆ ಮಾಡುವಂತೆ I ನನಗಭಿಮುಖನಾಗಿ ತೋರು ನೀ ಮಮತೆ II
- Verse 133: ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು I ಕೆಡುಕೊಂದೂ ಅಧೀನಪಡಿಸದಿರಲಿ ನನ್ನನು II
- Verse 134: ಜನಶೋಷಣೆಯಿಂದ ಮುಕ್ತಗೊಳಿಸೆನ್ನನು I ಕೈಗೊಳ್ಳುವೆನು ಆಗ ನಿನ್ನ ನಿಯಮಗಳನು II
- Verse 135: ತೋರು ನಿನ್ನ ಮುಖದರ್ಶನ ಈ ದಾಸನಿಗೆ I ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ II
- Verse 136: ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ I ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಕಣ II
- Verse 137: ಹೇ ಪ್ರಭೂ, ನೀನು ಸತ್ಯವಂತ I ನಿನ್ನ ವಿಧಿಯು ನ್ಯಾಯಸಮ್ಮತ II
- Verse 138: ಸತ್ಯವಾದುವು ನೀನಿತ್ತ ಕಟ್ಟಳೆಗಳು I ಪೂರ್ಣವಿಶ್ವಾಸನೀಯವಾದುವು ಅವುಗಳು II
- Verse 139: ಮರೆತುಬಿಟ್ಟರು ವಿರೋಧಿಗಳು ನಿನ್ನ ವಾಕ್ಯವನು I ಎಂತಲೆ ದಹಿಸುತಿದೆ ಧರ್ಮಾಸಕ್ತಿ ಎನ್ನನು II
- Verse 140: ನಿನ್ನ ನುಡಿಯೊಂದೊಂದೂ ಪರಮ ಪರಿಶೋಧಿತ I ಅದರ ಮೇಲಿದೆ ನಿನ್ನ ದಾಸನಿಗೆ ಬಹುಮೋದ II
- Verse 141: ನಾನಲ್ಪನು, ತಿರಸ್ಕಾರ ಹೊಂದಿದವನು I ಆದರೂ ಮರೆತಿಲ್ಲ ನಿನ್ನ ನೇಮಗಳನು II
- Verse 142: ನಿನ್ನ ನೀತಿ ನಿತ್ಯ I ನಿನ್ನ ಶಾಸ್ತ್ರ ಸತ್ಯ II
- Verse 143: ಎರಗಿವೆಯಾದರೂ ಕಷ್ಟ ಸಂಕಟಗಳು I ನನಗಾನಂದಾಯಕ ನಿನ್ನ ಆಜ್ಞೆಗಳು II
- Verse 144: ನೀತಿಯುತ ಹಾಗೂ ಶಾಶ್ವತ ನಿನ್ನಾ ಶಾಸನ I ನಾ ಜೀವಿಸುವಂತೆ ದಯಪಾಲಿಸೆನಗೆ ಸುಜ್ಞಾನ II
- Verse 145: ಸದುತ್ತರಿಸು ಮನಪೂರ್ವಕವಾಗಿ ಮೊರೆಯಿಡುವೆ I ನಿನ್ನ ನಿಬಂಧನೆಗಳನು ಪ್ರಭು, ಅನುಸರಿಸುವೆ II
- Verse 146: ಉದ್ಧರಿಸೆನ್ನನು, ನಿನಗೆ ಮೊರೆಯಿಡುವೆ I ನಿನ್ನ ಕಟ್ಟಳೆಗಳನು ಕೈಗೊಳ್ಳುವೆ II
- Verse 147: ಅರುಣೋದಯದಲೆದ್ದು ಮೊರೆಯಿಟ್ಟೆನು I ನಿನ್ನ ವಾಕ್ಯದಲೆ ನಂಬಿಕೆಯಿಟ್ಟೆನು II
- Verse 148: ನಿನ್ನ ನುಡಿಯನು ಧ್ಯಾನಿಸಬೇಕೆಂದೇ I ಎಚ್ಚರಗೊಳ್ಳುವೆ ಇರುಳಿನ ಜಾವಕೆ ಮುಂದೆ II
- Verse 149: ಪ್ರೀತಿಯಿಂದ ಹೇ ಪ್ರಭೂ, ಕೇಳೆನ್ನ ಮೊರೆಯನು I ನಿನ್ನ ವಿಧಿಗನುಸಾರ ಚೇತನಗೊಳಿಸೆನ್ನನು II
- Verse 150: ದುಷ್ಕರ್ಮಿಗಳು ಬಂದಿಹರೆನ್ನ ಸಮೀಪಕ್ಕೆ I ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕೆ II
- Verse 151: ಹೇ ಪ್ರಭೂ, ನೀನಿರುವೆ ಹತ್ತಿರ I ನಿನ್ನ ಆಜ್ಞೆಗಳೆಲ್ಲ ಸುಸ್ಥಿರ II
- Verse 152: ಸ್ಥಾಪಿಸಿರುವೆ ನಿನ್ನ ಕಟ್ಟಳೆಗಳನು ಶಾಶ್ವತವಾಗಿ I ಮೊದಲಿಂದಲೇ ಇದನರಿತೆ ನಾನವುಗಳ ಮೂಲಕವಾಗಿ II
- Verse 153: ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು I ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು II
- Verse 154: ನನ್ನ ಪರ ವಾದಿಸಿ, ಬಿಡುಗಡೆ ಮಾಡು ಎನ್ನನು I ನಿನ್ನ ನುಡಿಗನುಸಾರ ಚೇತನಗೊಳಿಸು ನನ್ನನು II
- Verse 155: ದೂರವಿದೆ ದುರುಳರಿಗೆ ಆ ಜೀವೋದ್ಧಾರ I ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ II
- Verse 156: ನಿನ್ನ ಕೃಪಾಕಾರ್ಯಗಳು, ಹೇ ಪ್ರಭೂ, ಅಪಾರ I ಚೇತನಗೊಳಿಸೆನ್ನನು, ನಿನ್ನ ವಿಧಿಗಳಿಗನುಸಾರ II
- Verse 157: ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು I ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು II
- Verse 158: ಆ ದ್ರೋಹಿಗಳನು ಕಂಡಾಗ ಆಗುತಿದೆ ಅಸಹ್ಯ I ಏಕೆನೆ ನಿನ್ನ ನುಡಿಯಂತೆ ಅವರು ನಡೆಯರಯ್ಯಾ II
- Verse 159: ನಿನ್ನ ನೇಮನಿಯಮಗಳು ಪ್ರಭು, ಎನಿತೋ ಪ್ರಿಯ I ಕಾಪಾಡೆನ್ನನು ನಿನ್ನ ಪ್ರೀತಿಗನುಸಾರ II
- Verse 160: ಸತ್ಯವೇ ನಿನ್ನ ವಾಕ್ಯದ ಸಾರಾಂಶ I ನಿನ್ನಯ ನೀತಿವಿಧಿಗಳೆಲ್ಲವೂ ಅನಿಶ II
- Verse 161: ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು I ನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು II
- Verse 162: ಜನರಿಗಾನಂದ ಅನಿರೀಕ್ಷಿತ ಆಸ್ತಿಯಲಿ I ನನಗಾದರೋ ಪರಮಾನಂದ ನಿನ್ನ ನುಡಿಯಲಿ II
- Verse 163: ಹಿಡಿಸದು ಎನಗೆ ಮಿಥ್ಯವಾದುದು, ಅದು ಎನಗೆ ಅಸಹ್ಯ I ನಿನ್ನ ಧರ್ಮಶಾಸ್ತ್ರವಾದರೋ ನನಗೆ ಸುಪ್ರಿಯ II
- Verse 164: ನೀತಿಯುತ ನಿನ್ನ ವಿಧಿಗಳ ನಿಮಿತ್ತ I ಸ್ತುತಿಪೆ ನಿನ್ನ ದಿನಕ್ಕೆ ಏಳುಕಿತ್ತಾ II
- Verse 165: ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ I ವಿಘ್ನಕರವಾದುದೇನೂ ಇರದು ಅಂಥವರಿಗೆ II
- Verse 166: ರಕ್ಷಣೆಯನು ಪ್ರಭು, ನಿರೀಕ್ಷಿಸುತ್ತಿರುವೆ I ನಿನ್ನ ಆಜ್ಞೆಗಳನು ನಾನು ಕೈಗೊಂಡಿರುವೆ II
- Verse 167: ನಿನ್ನ ಕಟ್ಟಳೆಗಳು ನನಗೆ ಅಧಿಕ ಪ್ರಿಯ I ನನ್ನ ಅಂತರಂಗ ಅವುಗಳಿಗೆ ವಿಧೇಯ I
- Verse 168: ಅನುಸರಿಸಿದೆ ನಿನ್ನ ನೇಮನಿಯಮಗಳನೆಲ್ಲ I ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ II
- Verse 169: ನನ್ನ ಮೊರೆ ಸೇರಲಿ ಪ್ರಭು, ನಿನ್ನ ಸನ್ನಿಧಿಯ I ನಿನ್ನ ವಾಕ್ಯಾನುಸಾರ ನೀಡು ಜ್ಞಾನೋದಯ II
- Verse 170: ನನ್ನ ವಿಜ್ಞಾಪನೆ ಸೇರಲಿ ನಿನ್ನ ಸನ್ನಿಧಿಗೆ I ಉದ್ಧರಿಸೆನ್ನನು ನಿನ್ನ ನುಡಿಗೆ ತಕ್ಕಹಾಗೆ II
- Verse 171: ನನಗೆ ಕಲಿಸಿರುವೆ ನಿನ್ನ ನಿಬಂಧನೆಗಳನು I ನನ್ನ ಬಾಯಿ ಉಸುರಲಿ ನಿನ್ನ ಗುಣಗಾನವನು II
- Verse 172: ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು I ನಿನ್ನ ಕೈ ನೀಡಲಿ ನನಗೆ ನೆರವನು II
- Verse 173: ಆರಿಸಿಕೊಂಡೆ ನಿನ್ನ ನಿಯಮಗಳನು I ನಿನ್ನ ಕೈ ನೀಡಲಿ ನನಗೆ ನೆರವನು II
- Verse 174: ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ I ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ II
- Verse 175: ಉಳಿಸೆನ್ನ ಪ್ರಾಣವನು, ಭಜಿಪೆ ನಿನ್ನನು I ನೀಡಲಿ ಎನಗೆ ನಿನ್ನ ವಿಧಿಗಳು ನೆರವನು II
- Verse 176: ಪ್ರಭು, ದಾರಿತಪ್ಪಿದ ಕುರಿ ನಾನು I ಪರಾಂಬರಿಸು ನಿನ್ನ ದಾಸನನು I ಮರೆಯೆನು ನಿನ್ನಾಜ್ಞೆಗಳನು II