పరిశుద్ధ గ్రంథము
ಹಳೆಯ ಒಡಂಬಡಿಕೆ
ಉಪದೇಶಕ
12ನೇ ಅಧ್ಯಾಯ
- Verse 1: ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು.
- Verse 2: ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು;
- Verse 3: ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು.
- Verse 4: ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿಹೋಗುವುದು;
- Verse 5: ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು.
- Verse 6: ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು.
- Verse 7: ಮಣ್ಣಿನ ದೇಹ ತನ್ನ ಭೂಮಿಗೆ ಸೇರಿಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).
- Verse 8: “ವ್ಯರ್ಥವೇ ವ್ಯರ್ಥ! ಸಮಸ್ತವೂ ವ್ಯರ್ಥ!!” ಎನ್ನುತ್ತಾನೆ ಉಪದೇಶಕ.
- Verse 9: ಉಪದೇಶಕನು ಜ್ಞಾನಿಯಾಗಿದ್ದ; ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದ. ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ, ಕ್ರಮಪಡಿಸಿದ.
- Verse 10: ಹಿತಕರವಾದ ವಚನಗಳನ್ನು ಅವನು ಹುಡುಕಿ ಆರಿಸಿದ; ಅವನಿಂದ ರಚಿತವಾದವು ಸರಿಯಾದುವು, ಸತ್ಯವಾದುವು.
- Verse 11: ಜ್ಞಾನಿಗಳ ನುಡಿಗಳು ಮೊನೆಗೋಲುಗಳು, ಅವರು ಸಂಗ್ರಹಿಸಿದ ವಚನಗಳು ಬಿಗಿಯಾಗಿ ಜಡಿದ ಮೊಳೆಗಳು. ಅವುಗಳ ಮೂಲಕರ್ತನು ಎಲ್ಲರ ಏಕೈಕ ಮೇಷಪಾಲ.
- Verse 12: ಕುಮಾರಾ, ಇವುಗಳಲ್ಲದೆ ನೀನು ಎಚ್ಚರಿಕೆಯಿಂದಿರಬೇಕಾದುವು ಇನ್ನೂ ಇವೆ. ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿಯಾದ ವ್ಯಾಸಂಗದಿಂದ ದೇಹಕ್ಕೆ ಆಯಾಸ.
- Verse 13: ವಿಷಯ ಮುಗಿಯಿತು; ಎಲ್ಲವನ್ನು ಕೇಳಿ ಆಯಿತು. ದೇವರಿಗೆ ಭಯಪಟ್ಟು ಅವರ ಆಜ್ಞೆಗಳನ್ನು ಕೈಗೊಳ್ಳು. ಇದೇ ಪ್ರತಿಯೊಬ್ಬ ಮಾನವನ ಕರ್ತವ್ಯ.
- Verse 14: ದೇವರು ಎಲ್ಲ ಕಾರ್ಯಗಳನ್ನು, ರಹಸ್ಯವಾದುವುಗಳನ್ನು ಕೂಡ, ಅವು ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ, ನ್ಯಾಯವಿಚಾರಣೆಗೆ ಗುರಿಮಾಡುವರು.