ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
26ನೇ ಅಧ್ಯಾಯ
- Verse 1: ದೇವಾಲಯದ ಕಾವಲುಗಾರರಾಗಿ ಸೇವೆಮಾಡಲು ನೇಮಕಗೊಂಡ ಲೇವಿಯರ ಹೆಸರುಗಳು: ಕೋರಹೀಯನಾದ ಮೆಷೆಲೆಮ್ಯ; ಇವನು ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ;
- Verse 2: ಮೆಷಲೆಮ್ಯನ ಮಕ್ಕಳಲ್ಲಿ ಜೆಕರ್ಯನು ಚೊಚ್ಚಲನು; ಎದೀಯಯೇಲನು ಮರಚಲನು; ಜೆಬದ್ಯನು ಮೂರನೆಯವನು; ಯೆತ್ನಿಯೇಲನು ನಾಲ್ಕನೆಯವನು.
- Verse 3: ಏಲಾಮನು ಐದನೆಯವನು. ಯೆಹೋಹಾನಾನನು ಆರನೆಯವನು; ಎಲ್ಯೆಹೋಯೇನೈ ಏಳನೆಯವನು.
- Verse 4: ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು; ಯೆಹೋಜಾಬಾದನು ಮರಚಲನು; ಯೋವಾಹನು ಮೂರನೆಯವನು; ಸಾಕಾರನು ನಾಲ್ಕನೆಯವನು; ನೆತನೇಲನು ಐದನೆಯವನು;
- Verse 5: ಅಮ್ಮೀಯೇಲನು ಆರನೆಯವನು; ಇಸ್ಸಾಕಾರನು ಏಳನೆಯವನು; ಪೆಯುಲ್ಲಿತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
- Verse 6: ಅವನ ಮಗ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
- Verse 7: ಇವರು ಯಾರೆಂದರೆ, ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್ ಇವರು ಹಾಗೂ ಬಹು ಸಮರ್ಥರಾದ, ಎಲೀಹು, ಸೆಮಕ್ಯ ಎಂಬ ಇವರ ಸಹೋದರರು.
- Verse 8: ಇವರೆಲ್ಲರೂ ಓಬೇದೆದೋಮನ ಸಂತಾನದವರು. ಸಮರ್ಥರೂ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಮಕ್ಕಳೂ ಸಹೋದರರೂ ಕೂಡಿ ಅರವತ್ತೆರಡು ಮಂದಿ ಇದ್ದರು.
- Verse 9: ಮೆಷೆಲಿಮ್ಯನ ಮಕ್ಕಳೂ ಸಹೋದರರೂ ಹದಿನೆಂಟು ಮಂದಿ; ಇವರೂ ಸಮರ್ಥರಾಗಿದ್ದರು.
- Verse 10: ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬವನು ಮುಖ್ಯಸ್ಥನಾಗಿದ್ದನು. ಇವನು ಚೊಚ್ಚಲನಲ್ಲದಿದ್ದರೂ ತಂದೆ ಅವನನ್ನೇ ಮುಖ್ಯಸ್ಥನನ್ನಾಗಿ ನೇಮಿಸಿದನು.
- Verse 11: ಹಿಲ್ಕೀಯನು ಎರಡನೆಯವನು; ಟೋಬಲ್ಯನು ಮೂರನೆಯವನು; ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳೂ ಸಹೋದರರೂ ಒಟ್ಟಿಗೆ ಹದಿಮೂರು ಮಂದಿ.
- Verse 12: ಈ ದ್ವಾರಪಾಲಕ ವರ್ಗಗಳ ಪ್ರಧಾನ ಪುರುಷರು ತಮ್ಮ ಕುಲಬಂಧುಗಳಂತೆ ಸರ್ವೇಶ್ವರನ ಆಲಯದಲ್ಲಿ ಸೇವೆಮಾಡುತ್ತಿದ್ದರು.
- Verse 13: ಅವರು, ಕನಿಷ್ಠ ಕುಟುಂಬವೆಂದಾಗಲಿ ಶ್ರೇಷ್ಠ ಕುಟುಂಬವೆಂದಾಗಲಿ ವ್ಯತ್ಯಾಸಮಾಡದೆ, ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಳ್ಳುತ್ತಿದ್ದರು.
- Verse 14: ಪೂರ್ವದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತ್ತು. ಬಹು ವಿವೇಕವುಳ್ಳ ಪಂಚಾಯತಗಾರನಾಗಿರುವ ಅವನ ಮಗ ಜೆಕರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತ್ತು.
- Verse 15: ಓಬೇದೆದೋಮನಿಗೆ ದಕ್ಷಿಣ ಬಾಗಿಲೂ ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ
- Verse 16: ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮ ಬಾಗಿಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಿಲೂ ಚೀಟಿನಿಂದ ನೇಮಕವಾಗಿದ್ದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
- Verse 17: ಲೇವಿಯರಲ್ಲಿ ಪ್ರತಿದಿನವೂ ಪೂರ್ವ ಬಾಗಿಲನ್ನು ಆರು ಮಂದಿ, ಪಶ್ಚಿಮ ಬಾಗಿಲನ್ನು ನಾಲ್ಕು ಮಂದಿ, ದಕ್ಷಿಣ ಬಾಗಿಲನ್ನು ನಾಲ್ಕು ಮಂದಿ, ಉಗ್ರಾಣ ಮಂದಿರದ ಎರಡು ಬಾಗಿಲುಗಳನ್ನು ಇಬ್ಬಿಬ್ಬರು,
- Verse 18: ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿಯ ಬಾಗಿಲನ್ನು ನಾಲ್ಕು ಮಂದಿ, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
- Verse 19: ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕ ವರ್ಗಗಳು ಇವೇ.
- Verse 20: ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:
- Verse 21: ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಮುಖ್ಯಸ್ಥರಲ್ಲಿ ಯೆಹೀಯೇಲೀ;
- Verse 22: ಮತ್ತು ಯೆಹೀಯೇಲ್ಯರಾದ ಜೇತಾಮನು ಹಾಗೂ ಯೋವೇಲನೆಂಬ ಅವನ ತಮ್ಮನು ಸರ್ವೇಶ್ವರನ ಆಲಯದ ಭಂಡಾರಗಳನ್ನು ಕಾಯುತ್ತಿದ್ದರು.
- Verse 23: ಅಮ್ರಾಮ್, ಇಚ್ಚಾರ್, ಹೆಬ್ರೋನ್, ಉಜ್ಜೀಯೇಲ್
- Verse 24: ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನು.
- Verse 25: ಎಲೀಯೆಜೆರನ ಮಗ ರೆಹಬ್ಯನಿಗೆ ಹುಟ್ಟಿದ ಯೆಶಾಯನ ಮರಿಮಗನೂ ಯೋರಾಮನ ಮೊಮ್ಮಗನೂ
- Verse 26: ಜಿಕ್ರೀಯ ಮಗನೂ ಆಗಿರುವ ಶೆಕೋಮೋತನೂ ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರ ಬಂಧುಗಳು.
- Verse 27: ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.
- Verse 28: ಇವರಲ್ಲದೆ ದರ್ಶಿಯಾದ ಸಮುವೇಲನೂ ಕೀಷನ ಮಗ ಸೌಲನೂ ನೇರನ ಮಗ ಅಬ್ನೇರನೂ ಜೆರೂಯಳ ಮಗ ಯೋವಾಬನೂ ಹಾಗೆಯೇ ಮಾಡಿದ್ದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
- Verse 29: ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳೂ ಲೌಕಿಕೋದ್ಯೋಗದಲ್ಲಿದ್ದರು. ಅವರು ಇಸ್ರಯೇಲರ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಆಗಿದ್ದರು.
- Verse 30: ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಯೇಲರೊಳಗೆ ಸರ್ವೇಶ್ವರನ ಸೇವಾಕಾರ್ಯಗಳನ್ನೂ ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಮಂದಿ ಇದ್ದರು.
- Verse 31: ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಲ್ಲಿ ಅನೇಕರು ಅವರ ಗೋತ್ರದವರು ಯಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೇರೀಯನು ಮುಖ್ಯಸ್ಥನು;
- Verse 32: ಶ್ರೀಮಂತರೂ ಕುಟುಂಬಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಮಂದಿ ಇದ್ದರು. ಅರಸ ದಾವೀದನು ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲೂ ರಾಜಕೀಯ ಕಾರ್ಯಗಳಲ್ಲೂ ಅಧಿಕಾರಿಗಳನ್ನಾಗಿ ನೇಮಿಸಿದನು.