P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
21ನೇ ಅಧ್ಯಾಯ
- Verse 1: ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.
- Verse 2: ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ.
- Verse 3: ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ.
- Verse 4: ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.
- Verse 5: ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ.
- Verse 6: ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.
- Verse 7: ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ, ಅವರನ್ನೇ ಎಳೆದೊಯ್ಯುವುದು ಅವರ ಹಿಂಸಾಚಾರ.
- Verse 8: ದೋಷಿಯ ದಾರಿ ಸೊಟ್ಟಗೆ; ದೋಷರಹಿತನ ನಡತೆ ನೆಟ್ಟಗೆ.
- Verse 9: ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
- Verse 10: ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.
- Verse 11: ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ.
- Verse 12: ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ.
- Verse 13: ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?
- Verse 14: ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ.
- Verse 15: ನ್ಯಾಯವಾದ ತೀರ್ಪಿನಿಂದ ಸಜ್ಜನರಿಗೆ ಸಂತಸ; ದುರ್ಜನರಿಗಾದರೊ ಅದು ತರುತ್ತದೆ ಸಂಕಟ.
- Verse 16: ಬುದ್ಧಿಮಾರ್ಗ ಬಿಟ್ಟು ನಡೆದವನು ಪ್ರೇತಗಳ ನಡುವೆ ವಿಶ್ರಾಂತಿ ಪಡೆಯುವನು.
- Verse 17: ಭೋಗಾಸಕ್ತನು ಬಡವನಾಗುವನು, ಮಧ್ಯಸುಗಂಧಗಳನ್ನು ಬಯಸುವವನು ಧನವಂತನಾಗನು.
- Verse 18: ದುರ್ಜನರು ಸಜ್ಜನರಿಗೆ ದ್ರೋಹಿಗಳು; ನೀತಿವಂತರಿಗೆ ಮಾಡಲಾಶಿಸುವ ಕೇಡಿಗೆ ತಾವೇ ಈಡಾಗುವರು.
- Verse 19: ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲು ಕಾಡಿನಲ್ಲಿ ಒಂಟಿಯಾಗಿ ವಾಸಿಸುವುದೇ ಲೇಸು.
- Verse 20: ಬುದ್ಧಿವಂತನ ಮನೆಯ ಸಿರಿ, ಎಣ್ಣೆ ಬೆಣ್ಣೆ; ಬುದ್ಧಿಹೀನನು ನುಂಗಿಬಿಡುವನು ಸರ್ವಸ್ವವನ್ನೆ.
- Verse 21: ನೀತಿ ಪ್ರೀತಿ ಪಾಲಿಸುವವನಿಗೆ ಲಭಿಸುವುದು ಆಯುಸ್ಸು, ಕೀರ್ತಿ, ದೊಡ್ಡಸ್ತಿಕೆ.
- Verse 22: ಜ್ಞಾನಿ ಹಿಡಿಯಬಲ್ಲನು ಬಲಿಷ್ಠರ ಪಟ್ಟಣವನ್ನು ಕೆಡವಬಲ್ಲನು ಅವರ ಬಲವಾದ ಕೋಟೆಯನ್ನು.
- Verse 23: ಬಾಯನ್ನೂ ನಾಲಿಗೆಯನ್ನೂ ಕಾಯಬಲ್ಲವನು ಜಯಿಸುವನು ತೊಂದರೆ ತಾಪತ್ರಯಗಳನ್ನು.
- Verse 24: ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.
- Verse 25: ಮೈಗಳ್ಳನನ್ನು ಕೊಲ್ಲುವುದು ಅವನ ಇಚ್ಛೆಯೆ; ಬಗ್ಗದು ಅವನ ಕೈ ದುಡಿಮೆಗೆ.
- Verse 26: ಇಲ್ಲವೆನ್ನದೆ ಕೊಡುವವರು ಸಜ್ಜನರು; ದಾನವೆಲ್ಲ ಬೇಕೆನ್ನುತ್ತಿರುವವನು ಜಿಪುಣನು.
- Verse 27: ದುಷ್ಟರು ಅರ್ಪಿಸುವ ಬಲಿಯಜ್ಞ ಅಸಹ್ಯ; ದುರಾಲೋಚನೆಯಿಂದ ಅರ್ಪಿಸುವುದು ಮತ್ತೂ ಅಸಹ್ಯ.
- Verse 28: ಸುಳ್ಳು ಸಾಕ್ಷಿ ಹೇಳುವವನೇ ಅಳಿದುಹೋಗುವನು; ಕೇಳಿದ್ದನ್ನೆ ಹೇಳುವವನ ಸಾಕ್ಷಿ ಅಳಿಯದೆ ಉಳಿಯುವುದು.
- Verse 29: ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.
- Verse 30: ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.
- Verse 31: ಯುದ್ಧಕ್ಕಾಗಿ ಸನ್ನದ್ಧವಾಗಿರಬಹುದು ಅಶ್ವಬಲ; ಜಯಸಿಗುವುದಾದರೋ ಸರ್ವೇಶ್ವರನಿಂದ.