P. O. C ബൈബിള്
ಹಳೆಯ ಒಡಂಬಡಿಕೆ
ಯೆಶಾಯ
22ನೇ ಅಧ್ಯಾಯ
- Verse 1: ‘ದಿವ್ಯದರ್ಶನದ ಕಣಿವೆ’ಯ ಕುರಿತ ದೈವೋಕ್ತಿ : ಏನಾಯಿತು? ಜನರೆಲ್ಲರೂ ಮನೆಮಾಳಿಗೆಗಳನ್ನು ಏರಿ ಸಡಗರದಿಂದ ಇರುವುದೇಕೆ?
- Verse 2: ಊರಿಗೆ ಊರೇ ಆರ್ಭಟಿಸುತ್ತಿರುವಂತಿದೆ ! ಯುದ್ಧದಲ್ಲಿ ಸತ್ತ ನಿಮ್ಮ ಯೋಧರೆಲ್ಲ ಕಾದಾಟದಿಂದ ಮಡಿದವರಲ್ಲ.
- Verse 3: ನಿಮ್ಮ ಮುಖಂಡರೆಲ್ಲ ಒಟ್ಟಿಗೆ ಪಲಾಯನಗೈದರು; ಒಂದೇ ಒಂದು ಬಾಣವನ್ನು ಬಿಡುವುದಕ್ಕೆ ಮುಂಚೆ ಸೆರೆಹೋದರು. ದೂರಕ್ಕೆ ಪಲಾಯನಗೈದಿದ್ದರೂ ಅವರೆಲ್ಲರೂ ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
- Verse 4: “ಆದ್ದರಿಂದ ನನ್ನ ಕಡೆ ನೋಡಬೇಡಿ. ನನ್ನನ್ನು ಸಂತೈಸಲು ಪ್ರಯತ್ನಿಸಬೇಡಿ. ಸತ್ತುಹೋದ ನನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಿರುವೆನು” ಎಂದೆ ನಾನು.
- Verse 5: ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಕಳುಹಿಸಿರುವ ದಿನವಿದು - ದಿವ್ಯದರ್ಶನದ ಕಣಿವೆಯ ದಿನ, ಗಲಿಬಿಲಿಯ ದಿನ, ತುಳಿದಾಟದ ದಿನ, ಭಯಭ್ರಾಂತಿಯ ದಿನ, ಕೋಟೆಕೊತ್ತಲಗಳನ್ನು ಹೊಡೆದುರುಳಿಸುವ ದಿನ. ಕೂಗಾಟವು ಬೆಟ್ಟದಲ್ಲಿ ಮಾರ್ದನಿಸುವ ದಿನ !
- Verse 6: ಏಲಾಮಿನ ಸೈನಿಕರು ಬಿಲ್ಲುಬಾಣಗಳನ್ನೂ, ರಥಾಶ್ವಗಳನ್ನೂ ಸಜ್ಜುಗೊಳಿಸಿರುವರು. ಕೀರಿನವರು ಗುರಾಣಿಗಳನ್ನು ಅಣಿಗೊಳಿಸಿರುವರು.
- Verse 7: ನಿಮ್ಮ ಫಲವತ್ತಾದ ತಗ್ಗುಪ್ರದೇಶಗಳು ರಥಗಳಿಂದ ತುಂಬಿರುವುವು. ಅಶ್ವದಳಗಳು ಪುರದ್ವಾರದ ಬಳಿ ಕಾವಲು ನಿಂತಿರುವುವು.
- Verse 8: ಜುದೇಯದ ಕೋಟೆ ನೆಲಸಮವಾಯಿತು. ಆಗ ಲೆಬನೋನಿನ ವನಮಂದಿರದ ಕಡೆಗೆ ಕೈಚಾಚಿದಿರಿ.
- Verse 9: ದಾವೀದನ ಕೋಟೆಯ ಬಿರುಕುಗಳು ಬಹಳವೆಂಬುದನ್ನು ಗಮನಿಸಿದಿರಿ. ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.
- Verse 10: ಜೆರುಸಲೇಮಿನ ಮನೆಗಳನ್ನು ಪರೀಕ್ಷಿಸಿದಿರಿ. ಕೋಟೆಯ ಗೋಡೆಗಳನ್ನು ಭದ್ರಪಡಿಸಲು ಆ ಮನೆಗಳನ್ನು ಕೆಡವಿಬಿಟ್ಟಿರಿ.
- Verse 11: ಎರಡು ಗೋಡೆಗಳ ನಡುವೆ ಹಳೆಯ ಕೊಳದಿಂದ ಹರಿಯುವ ನೀರಿಗಾಗಿ ಜಲಾಶಯವನ್ನು ಕಟ್ಟಿದಿರಿ. ಆದರೆ ಪುರಾತನ ಕಾಲದಿಂದ ನಿಯೋಜಿಸಿ ಇದನ್ನೆಲ್ಲಾ ನಡೆಸಿದಾತನ ಕಡೆಗೆ ಗಮನ ಕೊಡದೆಹೋದಿರಿ.
- Verse 12: ಎಂದೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ : “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು,” ಎಂದು ಹೇಳಿದರು.
- Verse 13: ಆದರೆ ನೀವು ಹರ್ಷಾನಂದಗೊಂಡಿರಿ. ದನಕರುಗಳನ್ನು ಕೊಯ್ದಿರಿ, ಮಾಂಸವನ್ನು ಭುಜಿಸಿ ಮದ್ಯಪಾನ ಮಾಡಿದಿರಿ. “ಇಂದೇ ತಿಂದು ಕುಡಿಯೋಣ, ನಾಳೆ ಬರುತ್ತದೆ ಮರಣ,” ಎಂದು ಹೇಳಿಕೊಂಡಿರಿ.
- Verse 14: ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನ್ನ ಕಿವಿಯಲ್ಲಿ ಉಸುರಿದ್ದೇನೆಂದರೆ : “ಇವರು ಸಾಯುವತನಕ ಇವರಿಗೆ ಪಾಪಕ್ಷಮೆ ದೊರಕುವುದಿಲ್ಲ. ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
- Verse 15: ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೀಗೆ ನುಡಿದಿದ್ದಾರೆ : “ಹೋಗು, ಅರಮನೆಯ ಮೇಲ್ವಿಚಾರಕ ಶೆಬ್ನ ಎಂಬ ಅಧ್ಯಕ್ಷನಿಗೆ ಹೀಗೆಂದು ಹೇಳು :
- Verse 16: ನಿನಗೇನು ಕೆಲಸವಿಲ್ಲಿ? ನಿನಗಾರಿಹರಿಲ್ಲಿ? ತೋಡಿಸಿಕೊಂಡಿರುವೆಯಾ ಗೂಡನ್ನಿಲ್ಲಿ? ಗೋರಿಯನ್ನು ಕೊರೆಯಿಸಿಕೊಂಡಿರುವೆಯಾ ಎತ್ತರದ ಬಂಡೆಯಲ್ಲಿ? ಕೆತ್ತಿಸಿಕೊಂಡಿರುವೆಯಾ ನಿನಗೊಂದು ನಿವಾಸವನಿಲ್ಲಿ?
- Verse 17: ಎಲೈ ಬಲಾಢ್ಯನೇ, ಸರ್ವೇಶ್ವರ ನಿನ್ನನ್ನು ಬಿಗಿಹಿಡಿದು ದೂರಕ್ಕೆಸೆಯುವರು,
- Verse 18: ಚೆಂಡಿನಂತೆ ಉಂಡೆ ಮಾಡಿ ನಿನ್ನನ್ನು ಗಿರ್ರನೆ ಸುತ್ತಿಸಿ ವಿಸ್ತಾರವಾದ ಬಯಲಿಗೆ ಬಿಸಾಡುವರು. ದಣಿಯ ಮನೆಗೆ ಅಪಮಾನ ತಂದವನೇ, ನೀನು ಸಾಯುವುದು ಅಲ್ಲೇ.
- Verse 19: ನಿನ್ನನ್ನು ಕೆಲಸದಿಂದ ತೆಗೆದುಬಿಡುವರು, ನಿನ್ನ ಪದವಿಯಿಂದ ತೆಗೆದುಹಾಕುವರು.
- Verse 20: “ಆ ದಿನದಂದು, ನನ್ನ ದಾಸನೂ ಹಿಲ್ಕಿಯನ ಮಗನೂ ಆದ ಎಲ್ಯಾಕೀಮನನ್ನು ಬರಮಾಡುವೆನು.
- Verse 21: ನಿನ್ನ ವಸ್ತ್ರವನ್ನು ಅವನಿಗೆ ತೊಡಿಸುವೆನು. ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟುವೆನು. ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಜೆರುಸಲೇಮಿನ ನಿವಾಸಿಗಳಿಗೂ ಜುದೇಯದ ಮನೆತನಕ್ಕೂ ತಂದೆಯಾಗಿರುವನು.
- Verse 22: ದಾವೀದ ಮನೆತನದ ಅಧಿಕಾರವನ್ನು ಅವನ ಹೆಗಲ ಮೇಲೆ ಹೊರಿಸುವೆನು. ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚರು; ಅವನು ಮುಚ್ಚಿದ ಬಾಗಿಲನ್ನು ಯಾರೂ ತೆರೆಯರು.
- Verse 23: ವಸ್ತುಗಳನ್ನು ತಗುಲಿಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು.”
- Verse 24: “ಬಟ್ಟಲು, ಬಿಂದಿಗೆ ಮುಂತಾದ ಪಾತ್ರೆಗಳನ್ನು ಮೊಳೆಗೆ ತಗಲುಹಾಕುವಂತೆ, ತಂದೆಯ ಮಕ್ಕಳು, ಮೊಮ್ಮಕ್ಕಳೆಲ್ಲರು ಅವನಿಗೆ ನೇತುಬೀಳುವರು.
- Verse 25: ಇದರಿಂದ ಬಿಗಿಯಾಗಿ ಹೊಡೆಯಲಾಗಿದ್ದ ಆ ಮೊಳೆ ಸಡಿಲವಾಗಿ ಕುಸಿದುಬೀಳುವುದು. ಅದಕ್ಕೆ ತಗಲುಹಾಕಿದ್ದ ವಸ್ತುಗಳೆಲ್ಲ ಕಳಚಿಬೀಳುವುವು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೇಳಿರುವರು.