P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
51ನೇ ಅಧ್ಯಾಯ
- Verse 1: ಕೃಪಾಳು, ದೇವಾ, ಕರುಣಿಸೆನ್ನನು I ಕರುಣಾನಿಧಿ, ಅಳಿಸೆನ್ನ ದೋಷವನು II
- Verse 2: ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು I ದೋಷಪರಿಹರಿಸಿ ಶುದ್ಧಗೊಳಿಸೆನ್ನನು II
- Verse 3: ಒಪ್ಪಿಕೊಂಡೆನಿದೋ, ನಾನೇ ಅಪರಾಧಿ I ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ II
- Verse 4: ಹೌದು ದೇವಾ, ನಿನಗೆ ದ್ರೋಹವೆಸಗಿದೆ I ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ II ನಿನ್ನ ನಿರ್ಣಯವು ನ್ಯಾಯಯುತ I ನೀ ನೀಡುವ ತೀರ್ಪು ನಿರ್ಲಿಪ್ತ II
- Verse 5: ನಾ ಜನಿಸಿದೆ ಪಾಪಪಂಕದಲೆ I ದ್ರೋಹಿ ನಾ ಮಾತೃಗರ್ಭದಿಂದಲೆ II
- Verse 6: ಅಂತರಂಗ ಶುದ್ಧಿಯನು ನೀ ಬಯಸುತಿ I ಅಂತರ್ಯ ಜ್ಞಾನವನು ಉದಯಗೊಳಿಸುತಿ II
- Verse 7: ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ ಶುದ್ಧನಾಗುವೆ I ನೀ ತೊಳೆದೆಯಾದರೆ, ಹಿಮಕ್ಕಿಂತ ನಾ ಬೆಳ್ಳಗಾಗುವೆ II
- Verse 8: ಹರ್ಷಾನಂದವನು ಮೊಳಗಿಸೆನ್ನೊಳು I ಪುಳಕಗೊಳ್ಳುವುವು ನೀ ಮುರಿದೆಲುಬುಗಳು II
- Verse 9: ನನ್ನ ಪಾಪದೋಷಕೆ ವಿಮುಖನಾಗು I ಸರ್ವದ್ರೋಹಗಳನು ಅಳಿಸಿಹಾಕು II
- Verse 10: ಶುದ್ಧ ಹೃದಯವನು ದೇವಾ, ನಿರ್ಮಿಸು I ಅಂತರಂಗವನು ಚೇತನಗೊಳಿಸು II
- Verse 11: ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ I ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ II
- Verse 12: ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು I ವಿಧೇಯನಾಗಿ ನಡೆವ ಸಿದ್ಧಮನಸ್ಸನು ನೀಡು II
- Verse 13: ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ I ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ II
- Verse 14: ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ I ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ II
- Verse 15: ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು I ಸಾರುವುದೆನ್ನ ಬಾಯಿ ನಿನ್ನ ನುಡಿಗಳನು II
- Verse 16: ಬಲಿಯರ್ಪಣೆಯಲಿ ನಿನಗೊಲವಿಲ್ಲ I ದಹನ ಬಲಿಯಿತ್ತರು ನಿನಗೆ ಬೇಕಿಲ್ಲ II
- Verse 17: ಮುರಿದ ಮನವೇ ದೇವನೊಲಿವ ಯಜ್ಞವು I ನೊಂದು ಬೆಂದ ಮನವನಾತ ಒಲ್ಲೆಯೆನನು II
- Verse 18: ಸಿಯೋನಿಗೆ ದೇವಾ, ಶುಭವನು ಕರುಣಿಸು I ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II
- Verse 19: ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II