ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯೊವಾನ್ನ
18ನೇ ಅಧ್ಯಾಯ
- Verse 1: ಯೇಸು ಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು.
- Verse 2: ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು.
- Verse 3: ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು.
- Verse 4: ಯೇಸು ಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು. ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು.
- Verse 5: ಅವರು, “ನಜರೇತಿನ ಯೇಸುವನ್ನು,” ಎಂದರು. ಯೇಸು, “ನಾನೇ ಆತ,” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು.
- Verse 6: “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು.
- Verse 7: ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು,” ಎಂದು ಉತ್ತರಬಂದಿತು.
- Verse 8: ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು.
- Verse 9: (’ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು).
- Verse 10: ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು.
- Verse 11: ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು, ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆಹೋದರೆ ಹೇಗೆ?” ಎಂದು ನುಡಿದರು.
- Verse 12: ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು.
- Verse 13: ಅನ್ನನು, ಆ ವರ್ಷ ಪ್ರಧಾನಯಾಜಕನಾಗಿದ್ದ ಕಾಯಫನ ಮಾವ.
- Verse 14: ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆಕೊಟ್ಟವನು ಈ ಕಾಯಫನೇ.
- Verse 15: ಸಿಮೋನ್ ಪೇತ್ರನು ಮತ್ತು ಪ್ರಧಾನಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸು ಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು.ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನಯಾಜಕನ ಮನೆಯ ಅಂಗಳವನ್ನು ಹೊಕ್ಕನು.
- Verse 16: ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡುಹೋದನು.
- Verse 17: ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು.
- Verse 18: ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು.
- Verse 19: ಅಷ್ಟರಲ್ಲಿ ಪ್ರಧಾನಯಾಜಕನು ಯೇಸು ಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.
- Verse 20: ಆಗ ಯೇಸು ಸ್ವಾಮಿ, “ನಾನು ಬಹಿರಂಗವಾಗಿಯೇ ಜನರೆಲ್ಲರೂ ಕೇಳುವಂತೆ ಮಾತನಾಡಿದ್ದೇನೆ; ಯೆಹೂದ್ಯರೆಲ್ಲರು ಸಭೆಸೇರುವ ಪ್ರಾರ್ಥನಾಮಂದಿರಗಳಲ್ಲಿಯೂ ಮಹಾದೇವಾಲಯದಲ್ಲಿಯೂ ನಾನು ಯಾವಾಗಲೂ ಬೋಧನೆಮಾಡಿಕೊಂಡು ಬಂದಿದ್ದೇನೆ. ಮುಚ್ಚುಮರೆಯಾಗಿ ಏನನ್ನೂ ಹೇಳಿಲ್ಲ.
- Verse 21: ನನ್ನನ್ನು ವಿಚಾರಿಸುವುದೇಕೆ? ನಾನು ಹೇಳಿದ್ದನ್ನು ಯಾರು ಕೇಳಿದ್ದಾರೋ ಅವರನ್ನೇ ವಿಚಾರಿಸಿರಿ. ನಾನು ಬೋಧನೆಮಾಡಿದ್ದು ಏನೆಂದು ಅವರು ಬಲ್ಲರು,” ಎಂದು ಉತ್ತರಕೊಟ್ಟರು.
- Verse 22: ಯೇಸು ಹೀಗೆ ಹೇಳಲು ಬಳಿಯಲ್ಲೇ ನಿಂತಿದ್ದ ಕಾವಲಾಳೊಬ್ಬನು, “ಪ್ರಧಾನ ಯಾಜಕರಿಗೆ ಉತ್ತರಕೊಡುವುದು ಹೀಗೆಯೇ?” ಎಂದು ಕೆನ್ನೆಗೆ ಹೊಡೆದನು.
- Verse 23: ಆಗ ಯೇಸು, “ನಾನು ಆಡಿದ್ದು ತಪ್ಪಾಗಿದ್ದರೆ, ತಪ್ಪನ್ನು ತೋರಿಸಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದರು.
- Verse 24: ಆಗ ಅನ್ನನು ಯೇಸುವನ್ನು ಬಂಧಿಸಿ ಕಾಯಫನ ಬಳಿಗೆ ಕಳುಹಿಸಿದನು.
- Verse 25: ಇತ್ತ ಪೇತ್ರನು ನಿಂತು ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಅಲ್ಲಿದ್ದವರು, “ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?’ ಎಂದು ಕೇಳಿದರು. ಪೇತ್ರನು, “ಇಲ್ಲ, ನಾನು ಶಿಷ್ಯನಲ್ಲ,” ಎಂದು ನಿರಾಕರಿಸಿದನು.
- Verse 26: ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು, (ಇವನು ಪೇತ್ರನು ಕಿವಿ ಕತ್ತರಿಸಿದವನ ನೆಂಟ) “ನಿನ್ನನ್ನು ಆತನೊಡನೆ ತೋಟದಲ್ಲಿ ನಾನು ನೋಡಲಿಲ್ಲವೇ?” ಎಂದು ಕೇಳಿದನು.
- Verse 27: ಪೇತ್ರನು ಪುನಃ ಅಲ್ಲಗಳೆದನು. ಕೂಡಲೇ ಕೋಳಿ ಕೂಗಿತು.
- Verse 28: ಆಮೇಲೆ ಅವರು ಯೇಸುವನ್ನು ಕಾಯಫನ ಮನೆಯಿಂದ ರಾಜ್ಯಪಾಲನ ನಿವಾಸಕ್ಕೆ ಕೊಂಡೊಯ್ದರು. ಆಗ ಮುಂಜಾನೆ, ಅರಮನೆಯೊಳಗೆ ಹೋದರೆ ಮಡಿಗೆಟ್ಟು ಹಬ್ಬದೂಟಕ್ಕೆ ಅಡ್ಡಿಯಾದೀತೆಂದು ಅವರೆಲ್ಲರು ಹೊರಗೇ ನಿಂತರು.
- Verse 29: ಆದುದರಿಂದ ಪಿಲಾತನೇ ಅವರ ಬಳಿಗೆ ಬಂದು, “ಈತನ ಮೇಲೆ ನಿಮ್ಮ ದೂರು ಏನು?” ಎಂದು ಕೇಳಿದನು.
- Verse 30: ಅವರು, “ಇವನು ಅಪರಾಧಿಯಲ್ಲದಿದ್ದರೆ, ಇವನನ್ನು ನಿಮಗೆ ತಂದೊಪ್ಪಿಸುತ್ತಿರಲಿಲ್ಲ,” ಎಂದರು.
- Verse 31: ಅದಕ್ಕೆ ಪಿಲಾತನು, “ಹಾಗಾದರೆ ನೀವೇ ಕರೆದುಕೊಂಡುಹೋಗಿ, ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಈತನಿಗೆ ತೀರ್ಪುಕೊಡಿ,” ಎಂದನು. ಯೆಹೂದ್ಯರು, “ಮರಣದಂಡನೆ ವಿಧಿಸುವ ಅಧಿಕಾರ ನಮಗಿಲ್ಲವಲ್ಲಾ,” ಎಂದು ಉತ್ತರಿಸಿದರು.
- Verse 32: ಯೇಸು ತಮಗೆ ಯಾವ ಬಗೆಯ ಮರಣ ಕಾದಿರುವುದೆಂದು ಸೂಚಿಸಿ ಹೇಳಿದ ಮಾತು ಹೀಗೆ ನೆರವೇರುವಂತಾಯಿತು.
- Verse 33: ಆಗ ಪಿಲಾತನು ಅರಮನೆಯೊಳಗೆ ಹೋಗಿ ಯೇಸು ಸ್ವಾಮಿಯನ್ನು ಕರೆಯಿಸಿ, “ನೀನು ಯೆಹೂದ್ಯರ ಅರಸನೋ?’ ಎಂದು ಕೇಳಿದನು.
- Verse 34: ಅದಕ್ಕೆ ಯೇಸು, “ನೀವಾಗಿಯೇ ಇದನ್ನು ಹೇಳುತ್ತಿರುವಿರೋ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೋ?” ಎನ್ನಲು
- Verse 35: ಪಿಲಾತನು, “ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನರು ಮತ್ತು ಮುಖ್ಯ ಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದನು.
- Verse 36: ಅದಕ್ಕೆ ಯೇಸು, “ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ, ನನ್ನ ಸಾಮ್ರಾಜ್ಯ ಈ ಲೋಕದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,” ಎಂದರು.
- Verse 37: ಪಿಲಾತನು, “ಹಾಗಾದರೆ ನೀನೊಬ್ಬ ಅರಸನೋ?’ ಎಂದು ಕೇಳಲು ಯೇಸು, “ ‘ಅರಸ’ ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದುದು. ಅದಕ್ಕಾಗಿಯೇ ನಾನು ಜಗತ್ತಿಗೆ ಬಂದುದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ,” ಎಂದು ಹೇಳಿದರು.
- Verse 38: ಆಗ ಪಿಲಾತನು, “ಸತ್ಯ, ಸತ್ಯ ಎಂದರೆ ಏನು?” ಎಂದು ಪ್ರಶ್ನಿಸಿ ಅಲ್ಲಿ ನಿಲ್ಲದೆ ಹೊರಗೆಬಂದನು.
- Verse 39: ಹೀಗೆ ಪಿಲಾತನು ಹೊರಗೆ ಯೆಹೂದ್ಯರ ಬಳಿಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುವುದಿಲ್ಲ. ಪಾಸ್ಕಹಬ್ಬದ ಸಂದರ್ಭದಲ್ಲಿ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವ ಪದ್ಧತಿಯಿದೆಯಷ್ಟೆ? ಆದ್ದರಿಂದ ನೀವು ಬಯಸಿದರೆ ಯೆಹೂದ್ಯರ ಅರಸನನ್ನು ನಾನು ಬಿಡುಗಡೆ ಮಾಡುತ್ತೇನೆ,” ಎಂದು ಹೇಳಿದನು.
- Verse 40: ಅದಕ್ಕೆ ಅವರು, “ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡಿ,” ಎಂದು ಬೊಬ್ಬೆಹಾಕಿದರು. ಬರಬ್ಬನೋ ಒಬ್ಬ ದರೋಡೆಕೋರನಾಗಿದ್ದನು.