ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
32ನೇ ಅಧ್ಯಾಯ
- Verse 1: ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಾಗಿದ್ದವು. ಯಗ್ಜೇರ್ ಹಾಗು ಗಿಲ್ಯಾದ್ ಪ್ರದೇಶಗಳನ್ನು ದನಕುರಿಗಳ ಮೇವಿಗೆ ತಕ್ಕ ಸ್ಥಳ ಎಂದು ಅವರು ನೋಡಿ ತಿಳಿದುಕೊಂಡರು.
- Verse 2: ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರ್ ಇವರ ಬಳಿಗೂ ಸಮಾಜದ ಮುಖಂಡರ ಬಳಿಗೂ ಅವರು ಬಂದು,
- Verse 3: ಸರ್ವೇಶ್ವರ ಸ್ವಾಮಿ ಇಸ್ರಯೇಲರಿಗೆ ಅಧೀನಪಡಿಸಿರುವ ಈ ಪ್ರದೇಶ, ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬಿಯೋನ್ ಎಂಬ ಪಟ್ಟಣಗಳನ್ನು ಒಳಗೊಂಡ ಈ ಪ್ರದೇಶ ದನಕುರಿಗಳ ಮೇವಿಗೆ ಹುಲುಸಾದ ಪ್ರದೇಶ.
- Verse 4: ನಿಮ್ಮ ದಾಸರಾದ ನಮಗೆ ಬಹಳ ದನಕುರಿಗಳಿವೆ.
- Verse 5: ಆದಕಾರಣ ದಾಸರಾದ ನಮ್ಮ ಮೇಲೆ ದಯವಿಟ್ಟು ನಮ್ಮನ್ನು ಜೋರ್ಡನ್ ನದಿಯ ಆಚೆಗೆ ಬರಮಾಡಬೇಡಿ. ಈ ಪ್ರದೇಶವನ್ನೇ ಸೊತ್ತಾಗಿ ಕೊಡಿ,” ಎಂದು ಕೇಳಿಕೊಂಡರು.
- Verse 6: ಅವರಿಗೆ ಮೋಶೆ, “ನಿಮ್ಮ ಬಂಧುಬಳಗದವರು ಯುದ್ಧಕ್ಕೆ ಹೊರಡುವಾಗ ನೀವು ಇಲ್ಲೇ ಕೂತಿರಬೇಕೆನ್ನುತ್ತೀರೋ?
- Verse 7: ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ನಾಡಿಗೆ ಅವರು ಹೋಗದಂತೆ ನೀವೇಕೆ ಅಧೈರ್ಯವನ್ನು ಹುಟ್ಟಿಸುತ್ತೀರಿ?
- Verse 8: ಆ ನಾಡನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಜರನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರು.
- Verse 9: ಅವರು ಎಷ್ಕೋಲ್ ಕಣಿವೆಗೆ ಬಂದು ಆ ನಾಡನ್ನು ನೋಡಿ ಇಸ್ರಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದರು. ಆದ್ದರಿಂದ ಇಸ್ರಯೇಲರು ತಮಗೆ ಸರ್ವೇಶ್ವರ ವಾಗ್ದಾನಮಾಡಿದ ನಾಡಿಗೆ ಹೋಗಲೇ ಇಲ್ಲ.
- Verse 10: ಆಗ ಸರ್ವೇಶ್ವರ ಕೋಪಗೊಂಡರು.
- Verse 11: ‘ಈಜಿಪ್ಟ್ ದೇಶದಿಂದ ಹೊರಬಂದ ಈ ಜನರಲ್ಲಿ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಮತ್ತು ನೂನನ ಮಗ ಯೆಹೋಶುವನು ಇವರಿಬ್ಬರೇ ಹೊರತಾಗಿ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದರು.
- Verse 12: ಆದ್ದರಿಂದ ಈ ಜನರಲ್ಲಿ ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸಿನವರಲ್ಲಿ ಅವರಿಬ್ಬರೇ ಹೊರತಾಗಿ ಬೇರಾರೂ ಅಬ್ರಹಾಮ್, ಇಸಾಕ್ ಮತ್ತು ಯಕೋಬರಿಗೆ ನಾನು ಪ್ರಮಾಣಪೂರ್ವಕವಾಗಿ ಕೊಟ್ಟ ನಾಡನ್ನು ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದರು.
- Verse 13: ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ತಮ್ಮ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳವರಾಗಿದ್ದ ಆ ಪೀಳಿಗೆಯವರೆಲ್ಲರು ನಾಶವಾಗುವ ತನಕ, ಅಂದರೆ ನಾಲ್ವತ್ತುವರ್ಷ ಕಾಲ, ಇಸ್ರಯೇಲರನ್ನು ಮರುಭೂಮಿಯಲ್ಲೆ ಅಲೆಯುವಂತೆ ಮಾಡಿದರು.
- Verse 14: ಈಗ ಈ ದುಷ್ಟ ಪೀಳಿಗೆಗೆ ಸೇರಿದವರಾದ ನೀವು ನಿಮ್ಮ ಪೂರ್ವಜರಿಗೆ ಬದಲಾಗಿ ಬಂದು ಇಸ್ರಯೇಲರ ಮೇಲಿದ್ದ ಸರ್ವೇಶ್ವರನ ಕೋಪಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೀರಿ.
- Verse 15: ನೀವು ವಿಧೇಯರಾಗಿ ನಡೆಯದೆ ಹೋದರೆ ಸರ್ವೇಶ್ವರ ಈ ಜನರನ್ನು ಇನ್ನೂ ಮರುಭೂಮಿಯಲ್ಲೇ ಇರಿಸುವರು; ಈ ಸಮಸ್ತ ಜನಾಂಗದ ನಾಶಕ್ಕೆ ನೀವೇ ಕಾರಣರು ಆಗುವಿರಿ,” ಎಂದನು.
- Verse 16: ಆಗ ಅವರು ಮೋಶೆಯ ಬಳಿಗೆ ಬಂದು, “ಇಲ್ಲಿ ನಮ್ಮ ದನಕುರಿಗಳಿಗೆ ದೊಡ್ಡಿಗಳನ್ನೂ ನಮ್ಮ ಕುಟುಂಬಗಳಿಗೆ ಊರುಗಳನ್ನೂ ಕಟ್ಟಿಕೊಳ್ಳುತ್ತೇವೆ.
- Verse 17: ಆದರೆ ನಾವು ಇಸ್ರಯೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವ ತನಕ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆಯೇ ನಡೆಯುತ್ತೇವೆ. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಕೋಟೆ ಕಟ್ಟಿದ ಊರುಗಳಲ್ಲಿ ವಾಸಿಸಲಿ. ಏಕೆಂದರೆ ಈ ನಾಡಿನ ನಿವಾಸಿಗಳ ಭಯವಿದೆ.
- Verse 18: ಇಸ್ರಯೇಲರು ಎಲ್ಲರು ತಮ್ಮ ತಮ್ಮ ಸೊತ್ತುಗಳನ್ನು ಸ್ವತಂತ್ರಿಸಿಕೊಳ್ಳುವ ಪರ್ಯಂತರ ನಾವು ನಮ್ಮ ಮನೆಗಳಿಗೆ ಹಿಂದಿರುಗುವುದಿಲ್ಲ.
- Verse 19: ನಮಗೆ ಜೋರ್ಡನ್ ನದಿಯ ಈಚೆ ಪೂರ್ವ ದಿಕ್ಕಿನಲ್ಲಿ ಸೊತ್ತು ದೊರಕಿದ್ದುದರಿಂದ ನಾವು ನದಿಯ ಆಚೆ ಎಲ್ಲಿಯೂ ಅವರೊಂದಿಗೆ ಸೊತ್ತನ್ನು ಅಪೇಕ್ಷಿಸುವುದಿಲ್ಲ,” ಎಂದರು.
- Verse 20: ಅದಕ್ಕೆ ಮೋಶೆ, “ನೀವು ಈ ಮಾತಿನಂತೆ ನಡೆಯುವುದಾದರೆ ನಿಮ್ಮಲ್ಲಿರುವ ಯೋಧರೆಲ್ಲರು ಯುದ್ಧಸನ್ನದ್ಧರಾಗಲಿ.
- Verse 21: ಜೋರ್ಡನ್ ನದಿಯ ಆಚೆಗೆ ಹೋಗಿ ಸರ್ವೇಶ್ವರ ತಮ್ಮ ವೈರಿಗಳನ್ನು ಹೊರಡಿಸಿಬಿಟ್ಟು ಆ ನಾಡನ್ನು ಸ್ವಾಧೀನಮಾಡಿಕೊಳ್ಳುವ ತನಕ ಅವರ ಮುಂದೆ ಯುದ್ಧಮಾಡಲಿ.
- Verse 22: ತರುವಾಯ ನೀವು ಹಿಂದಿರುಗಿ ಬರಬಹುದು. ಆಗ ಸರ್ವೇಶ್ವರನ ಮುಂದೆ, ಇಸ್ರಯೇಲರ ಮುಂದೆ ನಿರ್ದೋಷಿಗಳಾಗುವಿರಿ, ಮಾತ್ರವಲ್ಲ ಈ ಪ್ರದೇಶ ಸರ್ವೇಶ್ವರನ ಸನ್ನಿಧಿಯಲ್ಲೇ ನಿಮಗೆ ಸೇರಿದ ಸೊತ್ತಾಗುವುದು.
- Verse 23: ನೀವು ಹಾಗೇನಾದರೂ ಮಾಡದೆ ಹೋದರೆ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದವರಾಗುವಿರಿ. ನಿಮ್ಮನ್ನು ದಂಡಿಸುವ ತನಕ ನಿಮ್ಮ ಪಾಪ ನಿಮ್ಮ ಬೆನ್ನತ್ತಿಬರುವುದೆಂದು ತಿಳಿದಿರಿ.
- Verse 24: ನಿಮ್ಮ ಕುಟುಂಬಗಳಿಗಾಗಿ ಊರುಗಳನ್ನೂ ನಿಮ್ಮ ದನಕುರಿಗಳಿಗಾಗಿ ದೊಡ್ಡಿಗಳನ್ನೂ ಕಟ್ಟಿಕೊಂಡು ನಿಮ್ಮ ಮಾತಿನಂತೆ ನಡೆದುಕೊಳ್ಳಿ,” ಎಂದನು.
- Verse 25: ಅದಕ್ಕೆ ಗಾದ್ಯರು ಹಾಗು ರೂಬೇನ್ಯರು, “ಒಡೆಯಾ, ನಿಮ್ಮ ಅಪ್ಪಣೆಯಂತೆಯೇ ದಾಸರಾದ ನಾವು ಮಾಡುತ್ತೇವೆ.
- Verse 26: ನಮ್ಮ ಮಡದಿ ಮಕ್ಕಳೂ ದನಕುರಿಗಳೂ ಇಲ್ಲೇ ಗಿಲ್ಯಾದ್ ನಾಡಿನ ಊರುಗಳಲ್ಲಿರಲಿ.
- Verse 27: ನಿಮ್ಮ ದಾಸರಾದ ನಮ್ಮಲ್ಲಿ ಯುದ್ಧಸನ್ನದ್ಧರೆಲ್ಲರು ತಮ್ಮ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಸಮ್ಮುಖದಲ್ಲೇ ಮುನ್ನಡೆದು, ನದಿಯನ್ನು ದಾಟಿ ಯುದ್ಧಮಾಡುತ್ತೇವೆ,” ಎಂದು ಉತ್ತರಕೊಟ್ಟರು.
- Verse 28: ಮೋಶೆ ಅವರ ಬಗ್ಗೆ ಮಹಾಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಹಾಗು ಇಸ್ರಯೇಲರ ಕುಲನಾಯಕರಿಗೂ ಹೀಗೆಂದು ಆಜ್ಞೆಮಾಡಿದನು:
- Verse 29: “ಗಾದ್ಯರಲ್ಲೂ ರೂಬೇನ್ಯರಲ್ಲೂ ಯುದ್ಧಸನ್ನದ್ಧರಾದವರೆಲ್ಲರು ನಿಮ್ಮೊಡನೆ ಜೋರ್ಡನ್ ನದಿಯನ್ನು ದಾಟಿ ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧಮಾಡಿದ್ದೇ ಆದರೆ ಕಾನಾನ್ ನಾಡು ನಿಮ್ಮ ಸ್ವಾಧೀನಕ್ಕೆ ಬಂದಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸೊತ್ತಾಗಿ ಕೊಡಿ.
- Verse 30: ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ನಾಡಿನಲ್ಲೇ ಅವರಿಗೆ ಸೊತ್ತು ಸಿಗಲಿ.”
- Verse 31: ಅದಕ್ಕೆ ಗಾದ್ಯರು ಮತ್ತು ರೂಬೇನ್ಯರು ಒಪ್ಪಿಕೊಂಡರು. “ನಿಮ್ಮ ದಾಸರಾದ ನಮಗೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುತ್ತೇವೆ.
- Verse 32: ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧ ಸನ್ನದ್ಧರಾಗಿ ಕಾನಾನ್ ನಾಡಿಗೆ ಹೊರಡುತ್ತೇವೆ. ಜೋರ್ಡನ್ ನದಿಯ ಈಚೆಯೇ ನಮಗೆ ಆಸ್ತಿ ದೊರಕಬೇಕು,” ಎಂದು ಹೇಳಿದರು.
- Verse 33: ಹೀಗೆ ಮೋಶೆ ಗಾದ್ಯರಿಗು, ರೂಬೇನ್ಯರಿಗು, ಹಾಗು ಜೋಸೆಫನ ಮಗನಾದ ಮನಸ್ಸೆಯ ಕುಲದ ಅರ್ಧ ಜನರಿಗು ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನು, ಬಾಷಾನಿನ ಅರಸನಾದ ಓಗನ ರಾಜ್ಯವನ್ನು, ಅವುಗಳ ಎಲ್ಲ ಊರುಗಳನ್ನು ಮತ್ತು ಆ ಊರುಗಳಿಗೆ ಸೇರಿದ ಎಲ್ಲ ಭೂಮಿಗಳನ್ನು ಕೊಟ್ಟನು.
- Verse 34: ಗಾದ್ಯರು ದೀಬೋನ್, ಅಟಾರೋತ್, ಅರೋಯೇರ್,
- Verse 35: ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮಾ,
- Verse 36: ಬೇತ್ ಹಾರನ್ ಎಂಬ ಸುತ್ತು ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು. ತಮ್ಮ ಆಡುಕುರಿಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.
- Verse 37: ರೂಬೇನ್ಯರು ಹೆಷ್ಬೋನ್, ಎಲೆಯಾಲೆ, ಕಿರ್ಯತಯಿಮ್, ಸಿಬ್ಮಾ ಎಂಬ ಊರುಗಳನ್ನು ಹಾಗು
- Verse 38: ಬೇರೆ ಹೆಸರಿನಿಂದ ಉಚ್ಚರಿಸತಕ್ಕ ನೆಬೋ, ಬಾಳ್ಮೆಯೋನ್ ಊರುಗಳನ್ನು ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
- Verse 39: ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದ್ಗೆ ಹೋಗಿ ಅದನ್ನು ಸ್ವಾಧೀನ ಮಾಡಿಕೊಂಡರು. ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
- Verse 40: ಮೋಶೆ ಗಿಲ್ಯಾದ್ ಪ್ರಾಂತ್ಯವನ್ನು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಕೊಟ್ಟನು. ಅವರು ಅಲ್ಲೇ ವಾಸಮಾಡಿಕೊಂಡರು.
- Verse 41: ಮನಸ್ಸೆಯ ವಂಶದವನಾದ ಯಾಯಿರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಪಡಿಸಿಕೊಂಡನು. ಅವುಗಳಿಗೆ ಯಾಯಿರನ ಗ್ರಾಮಗಳೆಂದು ಹೆಸರು ಇಟ್ಟನು.
- Verse 42: ನೋಬಹನು ಯುದ್ಧಮಾಡಿ ಕೆನಾತ್ ಎಂಬ ಪಟ್ಟಣವನ್ನೂ ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿದನು. ಆ ಪಟ್ಟಣಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.