P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
4ನೇ ಅಧ್ಯಾಯ
- Verse 1: ಸತ್ಯಸ್ವರೂಪನಾದ ದೇವಾ, ಭಕ್ತನ ಮೊರೆಗೆ ಸದುತ್ತರ ಪಾಲಿಸೊ I ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ ಪ್ರಾರ್ಥನೆಯ ಆಲಿಸೊ II
- Verse 2: ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? I ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? II
- Verse 3: ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ I ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ II
- Verse 4: ಕೋಪಗೊಂಡರೂ ದೂರವಿರು ಪಾಪದಿಂದ I ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II
- Verse 5: ಅರ್ಪಿಸಿರಿ ಯೋಗ್ಯ ಬಲಿಗಳನೆ I ಇಡಿರಿ ಭರವಸೆ ಪ್ರಭುವಿನಲೆ II
- Verse 6: “ಒಳಿತು ಮಾಳ್ಪರೆಲ್ಲಿ!” ಎಂದು ಕೇಳುತಿಹರು ಜನತೆ I ಬೆಳಗಿಸಲಿ ನಮ್ಮನು, ಓ ಪ್ರಭು, ನಿನ್ನ ಮೊಗದ ಘನತೆ II
- Verse 7: ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II
- Verse 8: ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II