ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
107ನೇ ಅಧ್ಯಾಯ
- Verse 1: ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು I ಆತನ ಪ್ರೀತಿ ಶಾಶ್ವತ, ಆತನು ಒಳ್ಳೆಯವನು II
- Verse 2: ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು I ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು II
- Verse 3: ಅಂತೆಯೇ ವಂದಿಸಲಿ ಬಂದವರು ಚತುರ್ದಿಕ್ಕುಗಳಿಂದ I ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ ದೇಶಗಳಿಂದ II
- Verse 4: ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II
- Verse 5: ನರಳಿದರು ಹಸಿವೆ ಬಾಯಾರಿಕೆಯಿಂದ I ಸೊರಗಿದರು ಮನೋಯಾತನೆಯಿಂದ II
- Verse 6: ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
- Verse 7: ಸರಿಯಾದ ದಾರಿಯಲಿ ನಡೆಸಿದನವರನು I ಸೇರಮಾಡಿದನು ಜನವಾಸಿಸುವ ಊರನು II
- Verse 8: ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗೆ ಆತನೆಸಗಿದ ಅತಿಶಯಗಳನು II
- Verse 9: ಬಾಯಾರಿದವರ ಆಸೆಯನ್ನಾತ ಪೂರೈಸಿದನು I ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು II
- Verse 10: ದೇವರಾಜ್ಞೆಯನು ವಿರೋಧಿಸಿದ ಕಾರಣ I ಪರಾತ್ಪರನಾಜ್ಞೆಯನು ಹೀಗಳೆದ ಕಾರಣ II
- Verse 11: ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ I ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ II
- Verse 12: ಕರಗಿತ್ತವರ ಹೃದಯ ಕಡುಕಷ್ಟದಿಂದ I ಎಡವಿ ಬಿದ್ದಿದ್ದರು ಅಸಹಾಯತೆಯಿಂದ II
- Verse 13: ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
- Verse 14: ಕತ್ತಲು, ಕಗ್ಗತ್ತಲಿಂದವರನು ಹೊರತಂದನು I ಅವರ ಬೇಡಿಬಂಧನಗಳನು ಮುರಿದುಹಾಕಿದನು II
- Verse 15: ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
- Verse 16: ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II
- Verse 17: ರೋಗಿಗಳಾದರವರು ಅನಾಚಾರದ ನಿಮಿತ್ತ I ಬಾಧೆಗೊಳಗಾದರವರು ಪಾಪಕಾರ್ಯಗಳ ನಿಮಿತ್ತ II
- Verse 18: ಅಸಹ್ಯಪಟ್ಟರು ಅನ್ನ ಆಹಾರಗಳಿಗೆ I ಹತ್ತಿರವಾದರವರು ಮೃತ್ಯುದ್ವಾರಕೆ II
- Verse 19: ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
- Verse 20: ಗುಣಪಡಿಸಿದನವರನು ತನ್ನ ವಾಣಿಯಿಂದ I ತಪ್ಪಿಸಿದನು ಅವರನು ವಿನಾಶಕೂಪದಿಂದ II
- Verse 21: ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
- Verse 22: ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು I ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು II
- Verse 23: ಹಡಗನು ಹತ್ತಿ ಕಡಲನು ದಾಟಿದರು I ಸಾಗರ ಹಾಯ್ದುವ್ಯಾಪಾರ ಗೈದರು II
- Verse 24: ಕಂಡರು ಪ್ರಭುವಿನ ಪವಾಡಗಳನು I ಸಮುದ್ರದೊಳಾತನ ಅದ್ಭುತಗಳನು II
- Verse 25: ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I ತರಂಗಗಳು ಭೊರ್ಗರೆದವು ಅದರೊಂದಿಗೆ II
- Verse 26: ಗಗನಕ್ಕೇರಿದರು, ಅಗಾಧಕ್ಕಿಳಿದರು I ಗಂಡಾಂತರಕೆ ಸಿಲುಕಿ ಕರಗಿಹೋದರು II
- Verse 27: ಅಡ್ಡಾಡಿದರು, ಹೊಯ್ದಾಡಿದರು ಕುಡುಕರಂತೆ I ದಿಕ್ಕುತೋರದವರಾದರು ದಕ್ಷತೆ ಸಾಲದೆ II
- Verse 28: ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
- Verse 29: ಆ ಬಿರುಗಾಳಿಯನಾತ ಶಾಂತಪಡಿಸಿದ I ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II
- Verse 30: ತಂದಿತು ಪ್ರಶಾಂತತೆ ಸಂತಸವನವರಿಗೆ I ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II
- Verse 31: ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
- Verse 32: ಕೀರ್ತಿಸಲಿ ಆತನನು ನೆರೆದ ಸಭೆಯಲಿ I ಹಾಡಿಹೊಗಳಲಿ ಹಿರಿಯರಾ ಕೂಟದಲಿ II
- Verse 33: ನೀಚ ನಿವಾಸಿಗಳ ಕಾರಣದಿಂದ I ನದಿಗಳನೂ ಮರುಭೂಮಿಯಾಗಿಸಿದ II
- Verse 34: ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II
- Verse 35: ಕೆರೆಯಾಗಿಸಿದಾ ಮರುಭೂಮಿಯನು I ಊಟೆಯಾಗಿಸಿದ ಆ ಒಣನೆಲವನು II
- Verse 36: ಹಸಿದವರನು ನೆಲೆಗೊಳಿಸಿದನಲ್ಲಿ I ವಾಸಿಸಲು ನಗರವನು ಕಟ್ಟಿದರಲ್ಲಿ II
- Verse 37: ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು I ಕೂಡಿಸಿಕೊಂಡರು ಅಧಿಕವಾದ ಆದಾಯವನು II
- Verse 38: ಅಭಿವೃದ್ಧಿಯಾದರು ಆತನಾಶೀರ್ವಾದದಿಂದಲೆ I ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ II
- Verse 39: ತದನಂತರ ಕುಗ್ಗಿತವರ ಅಂಕೆ ಸಂಖ್ಯೆ I ಕಷ್ಟಸಂಕಟ, ತಾಪತ್ರಯಗಳ ಮಧ್ಯೆ II
- Verse 40: ತೃಣೀಕರಿಸಿದನು ಪ್ರಭು ಅವರಧಿಪತಿಗಳನು I ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು II
- Verse 41: ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ I ಹೆಚ್ಚಿಸಿದನವರ ಸಂತತಿಯನು ಕುರಿಮಂದೆ ಹಾಗೆ II
- Verse 42: ಇದಕಂಡು ಹಿಗ್ಗುವರು ಸಜ್ಜನರೆಲ್ಲರು I ಬಾಯಿ ಮುಚ್ಚಿಕೊಳ್ಳುವರು ದುರ್ಜನರು II
- Verse 43: ಪರ್ಯಾಲೋಚಿಸಲಿವುಗಳನು ಬುದ್ಧಿವಂತರು I ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು II