ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
132ನೇ ಅಧ್ಯಾಯ
- Verse 1: ನೆನಸಿಕೋ ಹೇ ಪ್ರಭೂ, ದಾವೀದನನು I ಆತ ಸಹಿಸಿದ ಕಷ್ಟದುಃಖಗಳನು II
- Verse 2: ಸ್ಮರಿಸಿಕೊ ಪ್ರಭೂ, ಆತನು ಮಾಡಿದ ಶಪಥವನು I ಯಕೋಬ್ಯ ಘನದೇವನಿಗಾತ ಕೊಟ್ಟ ಈ ಮಾತನು II
- Verse 3: “ಪ್ರಭುವಿಗೆ ಆಲಯವೊಂದನು ನಿರ್ಮಿಸುವ ತನಕ I ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ ತನಕ II
- Verse 4: ನಾ ಸೇರೆನು ನನ್ನರಮನೆಯನು I ನಾ ಏರೆನು ನನ್ನ ಶಯ್ಯೆಯನು II
- Verse 5: ಮುಚ್ಚೆನು ನಾನು ಕಣ್ಣುಗಳನು I ಕೂಡಿಸೆನು ನಾನು ರೆಪ್ಪೆಗಳನು” II
- Verse 6: ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ I ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ II
- Verse 7: ಹೋಗೋಣ ಬನ್ನಿರಿ ಆತನ ಮಂದಿರಕೆ I ಅಡ್ಡಬೀಳೋಣ ಆತನ ಪಾದಪೀಠಕೆ II
- Verse 8: ಆಗಮಿಸು ಪ್ರಭು, ನಿನ್ನ ತೇಜೋ ಮಂಜೂಷದೊಡನೆ I ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ II
- Verse 9: ನೀತಿಭೂಷಿತರಾಗಲಿ ನಿನ್ನ ಯಾಜಕರು I ಆನಂದ ಘೋಷಮಾಡಲಿ ನಿನ್ನ ಭಕ್ತಜನರು II
- Verse 10: ನಿನ್ನ ದಾಸ ದಾವೀದನ ಪ್ರಯುಕ್ತ I ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ II
- Verse 11: ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: I ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: I “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು” II
- Verse 12: “ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ I ಕೂರುವರು ಸದಾಕಾಲ ಅವರ ಮಕ್ಕಳ ನಿನ್ನಾ ಸಿಂಹಾಸನದ ಮೇಲೆ” II
- Verse 13: ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು I ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು II
- Verse 14: “ಎಂದೆಂದಿಗು ಇದೇ ನನ್ನ ನಿವಾಸ I ಇರುವೆನಿಲ್ಲೇ, ಇದು ನನ್ನ ಅಭಿಲಾಶ II
- Verse 15: ಇದಕ್ಕೊದಗಿಸುವೆನು ಧಾರಾಳ ಸಿರಿಸಂಪತ್ತನು I ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ ದಲಿತರನು II
- Verse 16: ಹೊದಿಸುವೆನಿದರ ಯಾಜಕರಿಗೆ ರಕ್ಷಣಾವಸ್ತ್ರವನು I ಸಾಧುಸಂತರು ಮಾಡುವರಿದರ ಹರ್ಷೋದ್ಗಾರವನು II
- Verse 17: ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ I ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ II
- Verse 18: ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು I ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” II