पवित्र बाइबिल
ಹಳೆಯ ಒಡಂಬಡಿಕೆ
ಯೆಶಾಯ
53ನೇ ಅಧ್ಯಾಯ
- Verse 1: ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು?
- Verse 2: ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ.
- Verse 3: ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು.
- Verse 4: ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು!
- Verse 5: ಗಾಯಗೊಂಡನಾತ ನಮ್ಮ ಪಾಪಗಳ ನಿಮಿತ್ತ ಜಜ್ಜರಿತನಾದ ನಮ್ಮ ದ್ರೋಹಗಳ ದೆಸೆಯಿಂದ. ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ ಪೆಟ್ಟುತಿಂದ ನಮ್ಮ ಸ್ವಸ್ಥತೆಗಾಗಿ.
- Verse 6: ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ.
- Verse 7: ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ.
- Verse 8: ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ.
- Verse 9: ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ.
- Verse 10: ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು.
- Verse 11: ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹುಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.
- Verse 12: ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.