ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹೋಶೇಯ
11ನೇ ಅಧ್ಯಾಯ
- Verse 1: ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ.
- Verse 2: ದೂರ ಸರಿದರು ಆ ಇಸ್ರಯೇಲರು ನಾ ಕರೆದರೂ ನನ್ನ ಬಳಿಗೆ ಅರ್ಪಿಸುತ್ತಾ ಬಂದರು ಯಜ್ಞವನ್ನು ಬಾಳ್ ದೇವತೆಗಳಿಗೆ ಧೂಪಾರತಿ ಬೆಳಗುತ್ತಾ ಬಂದರು ಆ ವಿಗ್ರಹಗಳಿಗೆ.
- Verse 3: ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆಹೋದರು ಈ ವಿಷಯವನೇ.
- Verse 4: ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ.
- Verse 5: “ಅವರು ನನ್ನ ಬಳಿಗೆ ಬಾರದ ಕಾರಣ, ಇಸ್ರಯೇಲ್ ಈಜಿಪ್ಟಿಗೆ ಹಿಂದಿರುಗುವುದು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವುದು.
- Verse 6: ತಮ್ಮ ಇಚ್ಛಾನುಸಾರ ಅವರು ನಡೆದ ಕಾರಣ, ಅವರ ಪಟ್ಟಣಗಳಲ್ಲಿ ಕತ್ತಿಯ ಕಾಳಗ ನಡೆಯುವುದು. ಅವರ ಪುರದ್ವಾರದ ಕತ್ತಿಯ ಕಬ್ಬಿಣದ ಅಗುಳಿಗಳನ್ನು ಮುರಿದು ಕೋಟೆಯಲ್ಲೇ ಅವರನ್ನು ಕಡಿದುಹಾಕುವರು.
- Verse 7: ಅವರು ನನ್ನ ಕಡೆಯಿಂದ ದೂರಹೋಗುವ ಹಠಹಿಡಿದಿದ್ದಾರೆ; ಅವರು ನೊಗದ ಭಾರವನ್ನು ತಾಳದೆ ಕೂಗಿಕೊಂಡರೂ ಅದನ್ನು ಬಿಚ್ಚುವವರು ಯಾರೂ ಇಲ್ಲ.
- Verse 8: “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ?
- Verse 9: ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.
- Verse 10: “ಶತ್ರುಗಳ ಕಡೆಗೆ ಸಿಂಹದಂತೆ ಗರ್ಜಿಸುವ ಸ್ವಾಮಿಯನ್ನು ಆ ಜನರು ಹಿಂಬಾಲಿಸುತ್ತಾರೆ. ಆತ ಆರ್ಭಟಿಸಲು ಅವರ ಮಕ್ಕಳು ನಡುನಡುಗುತ್ತಾ ಬರುತ್ತಾರೆ.
- Verse 11: ಗುಬ್ಬಿಗಳಂತೆ ಈಜಿಪ್ಟಿನಿಂದಲೂ ಪಾರಿವಾಳಗಳಂತೆ ಅಸ್ಸೀರಿಯದಿಂದಲೂ ಅವರು ಬೆದರುತ್ತಾ ಓಡಿಬರುತ್ತಾರೆ. ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮಾಡುವೆನು.
- Verse 12: “ಎಫ್ರಯಿಮಿನ ಸುಳ್ಳುತನ, ಇಸ್ರಯೇಲಿನ ಕಪಟತನ ನನ್ನನ್ನು ಮುತ್ತಿಕೊಂಡಿವೆ. ಸತ್ಯಸ್ವರೂಪಿಯೂ ಪರಮಪಾವನರೂ ಆದ ದೇವರಿಂದ ದೂರವಾಗಿ ಜುದೇಯವು ಅಲೆಯುತ್ತಿದೆ.