வேதாகமம்
ಹಳೆಯ ಒಡಂಬಡಿಕೆ
ಯಾಜಕಕಾಂಡ
4ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:
- Verse 2: “ನೀನು ಇಸ್ರಯೇಲರ ಸಂಗಡ ಮಾತಾಡಿ ಹೇಳಬೇಕಾದುದು ಏನೆಂದರೆ ಯಾರೇ ಆಗಲಿ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ತಿಳಿಯದೆ ಮಾಡಿ ದೋಷಿಯಾದರೆ ಅದು ಆ ದೋಷಪರಿಹಾರಕ್ಕಾಗಿ ಈ ಕ್ರಮಗಳನ್ನು ಅನುಸರಿಸಬೇಕು:
- Verse 3: “ಅಭಿಷಿಕ್ತನಾದ ಯಾಜಕನೇ ಅಂಥ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಕಳಂಕರಹಿತವಾದ ಪ್ರಾಯದ ಹೋರಿಯೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 4: ಅವನು ಆ ಹೋರಿಯನ್ನು ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ, ತಂದು ಅದರ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
- Verse 5: ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು;
- Verse 6: ಆ ರಕ್ತದಲ್ಲಿ ಬೆರಳನ್ನು ಅದ್ದಿ ಮಹಾಪವಿತ್ರ ಸ್ಥಾನದ ಮುಂದಿನ ತೆರೆಯ ಎದುರಿಗೆ, ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು.
- Verse 7: ಬಳಿಕ ಯಾಜಕನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಪರಿಮಳ ಧೂಪವೇದಿಕೆಯ ಕೊಂಬುಗಳಿಗೆ ಆ ರಕ್ತವನ್ನು ಹೆಚ್ಚಿ ಹೋರಿಯ ಮಿಕ್ಕ ರಕ್ತವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ದಹನಬಲಿ ಕೊಡುವ ಬಲಿಪೀಠದ ಬುಡದಲ್ಲಿ ಸುರಿಯಬೇಕು.
- Verse 8: ಆ ದೋಷಪರಿಹಾರಕ ಬಲಿಹೋರಿಯ ಕೊಬ್ಬನ್ನೆಲ್ಲಾ, ಅಂದರೆ ಕರುಳ ಸುತ್ತಲಿನ ಕೊಬ್ಬನ್ನೂ
- Verse 9: ಮೂತ್ರಪಿಂಡಗಳನ್ನೂ ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮಭಾಗವನ್ನು
- Verse 10: ಶಾಂತಿಸಮಾಧಾನದ ಬಲಿಪ್ರಾಣಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲೂ ಪ್ರತ್ಯೇಕಿಸಿ, ದಹನಬಲಿಪೀಠದ ಮೇಲೆ ಹೋಮಮಾಡಬೇಕು.
- Verse 11: ಆ ಹೋರಿಯಲ್ಲಿ ಮಿಕ್ಕದ್ದನ್ನೆಲ್ಲಾ, ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು, ಕರುಳುಗಳು
- Verse 12: ಹಾಗು ಕರುಳುಗಳಲ್ಲಿರುವ ಕಲ್ಮಶ ಇವುಗಳನ್ನೆಲ್ಲ ಪಾಳೆಯದ ಹೊರಗೆ, ವೇದಿಕೆಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.
- Verse 13: “ಇಸ್ರಯೇಲರ ಸಮಾಜವೆಲ್ಲ ತಿಳಿಯದೆ ದೋಷಿಗಳಾದರೆ, ಅಂದರೆ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರು ಮಾಡಿ ದೋಷಕ್ಕೆ ಗುರಿಯಾದರೆ,
- Verse 14: ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದುಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಹೋರಿಯೊಂದನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಿದಾಗ ಸಮಾಜದ ಹಿರಿಯರು
- Verse 15: ಸರ್ವೇಶ್ವರನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
- Verse 16: ಅಭಿಷಿಕ್ತ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ತಂದು
- Verse 17: ಅದರಲ್ಲಿ ಬೆರಳನ್ನು ಅದ್ದಿ ತೆರೆಯ ಮುಂದೆ ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು.
- Verse 18: ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಧೂಪವೇದಿಕೆಯ ಕೊಂಬುಗಳಿಗೆ ಹಚ್ಚಬೇಕು.
- Verse 19: ಮಿಕ್ಕದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಬುಡದಲ್ಲಿ ಸುರಿದುಬಿಡಬೇಕು.
- Verse 20: ಅಭಿಷಿಕ್ತ ಯಾಜಕನು ದೋಷಪರಿಹಾರಕ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲಾಯಿತೋ ಹಾಗೆಯೆ ಇದರ ವಿಷಯದಲ್ಲೂ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದ ನಂತರ ಅವರಿಗೆ ಕ್ಷಮಾಪಣೆಯಾಗುವುದು.
- Verse 21: ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿಬಿಟ್ಟಂತೆಯೇ ಈ ಹೋರಿಯನ್ನೂ ಸುಡಿಸಿಬಿಡಬೇಕು. ಇದು ಜನಸಮಾಜದ ದೋಷಪರಿಹಾರಕ ಬಲಿ.
- Verse 22: “ಮುಖ್ಯಾಧಿಕಾರಿಯೊಬ್ಬನು ತನ್ನ ದೇವರಾದ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
- Verse 23: ತನ್ನ ತಪ್ಪು ತನಗೆ ತಿಳಿದು ಬಂದಾಗ ಅವನು ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.
- Verse 24: ಅವನು ಆ ಹೋತದ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ, ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಬಲಿ.
- Verse 25: ಯಾಜಕನು ಆ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಡಬೇಕು.
- Verse 26: ಶಾಂತಿಸಮಾಧಾನದ ಬಲಿಪ್ರಾಣಿಯ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲ ಕೊಬ್ಬನ್ನೂ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
- Verse 27: ನಿಮ್ಮ ನಾಡಿನವರಲ್ಲಿ ಬೇರೆ ಯಾರಾದರು ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
- Verse 28: ತನ್ನ ತಪ್ಪು ತನಗೆ ತಿಳಿದು ಬಂದಾಗ ದೋಷಪರಿಹಾರಕ್ಕಾಗಿ ಕಳಂಕರಹಿತವಾದ ಒಂದು ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.
- Verse 29: ಅವನು ಅದರ ತಲೆಯ ಮೇಲೆ ಕೈಯಿಟ್ಟು ನಂತರ ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು.
- Verse 30: ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
- Verse 31: ಶಾತಿಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟುಮಾಡಲು ಬಲಿಪೀಠದ ಮೇಲೆ ಹೋಮಮಾಡಲಿ. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
- Verse 32: ಅವನು ತನ್ನ ದೋಷಪರಿಹಾರಾರ್ಥವಾಗಿ ತರುವುದು ಒಂದು ಕುರಿಯಾದರೆ ಅದು ಕಳಂಕರಹಿತವಾದ ಹೆಣ್ಣಾಗಿರಬೇಕು.
- Verse 33: ಅವನು ಅದರ ತಲೆಯ ಮೇಲೆ ಕೈಯಿಟ್ಟನಂತರ ದಹನ ಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಾರ್ಥವಾಗಿ ವಧಿಸಬೇಕು.
- Verse 34: ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
- Verse 35: ಶಾಂತಿಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಬಲಿಪೀಠದಲ್ಲಿ ಉರಿಯುವ ಹೋಮದ್ರವ್ಯಗಳ ಮೇಲೆ ಸರ್ವೇಶ್ವರನಿಗೆ ಹೋಮಮಾಡಲಿ. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.