पवित्र बाइबिल
ಹಳೆಯ ಒಡಂಬಡಿಕೆ
ಎಜ್ರನು
4ನೇ ಅಧ್ಯಾಯ
- Verse 1: ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಮಂದಿರವನ್ನು ಕಟ್ಟುತ್ತಿದ್ದಾರೆಂಬ ಸಮಾಚಾರ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ಮುಟ್ಟಿತು.
- Verse 2: ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.
- Verse 3: ಆಗ ಜೆರುಬ್ಬಾಬೆಲ್, ಯೇಷೂವ ಹಾಗು ಬೇರೆ ಇಸ್ರಯೇಲ್ ಗೋತ್ರಪ್ರಧಾನರು ಅವರಿಗೆ, “ನಮ್ಮ ದೇವರ ಆಲಯವನ್ನು ಕಟ್ಟುವುದರಲ್ಲಿ ನೀವು ನಮ್ಮೊಡನೆ ಸೇರಲೇಕೂಡದು; ಪರ್ಷಿಯರಾಜ ಸೈರಸನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಯೇಲ್ ದೇವರಾದ ಸರ್ವೇಶ್ವರನ ಆಲಯವನ್ನು ಕಟ್ಟಬೇಕು,” ಎಂದು ಉತ್ತರಕೊಟ್ಟರು.
- Verse 4: ಆಗ ಆ ದೇಶನಿವಾಸಿಗಳು ಯೆಹೂದ್ಯರನ್ನು ನಿರಾಶೆಗೊಳಿಸಿ ಅದನ್ನು ಕಟ್ಟದ ಹಾಗೆ ಬೆದರಿಸಿದರು.
- Verse 5: ಅವರ ಉದ್ದೇಶವನ್ನು ತಡೆಗಟ್ಟಲು ಹಣಕೊಟ್ಟು ವಕೀಲರನ್ನು ಇಟ್ಟರು. ಈ ಪ್ರಕರಣ ಪರ್ಷಿಯರಾಜ ಸೈರಸನ ಕಾಲದಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯವರೆಗೂ ನಡೆಯಿತು.
- Verse 6: ಇದಲ್ಲದೆ, ಅಹಷ್ಟೇರೋಷನ ಆಳ್ವಿಕೆಯ ಆರಂಭದಲ್ಲಿ ಅವರು ಜುದೇಯ ಹಾಗು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದವರಿಗೆ ವಿರುದ್ಧ ಆಪಾದನ ಪತ್ರವನ್ನು ಬರೆದರು.
- Verse 7: ಪರ್ಷಿಯರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಈ ಮೊದಲಾದವರು ಅರ್ತಷಸ್ತನಿಗೆ ಪತ್ರ ಬರೆದರು. ಆ ಪತ್ರ ಅರಮಾಯಿಕ್ ಲಿಪಿಯಲ್ಲೂ ಅರಮಾಯಿಕ್ ಭಾಷೆಯಲ್ಲೂ ಇತ್ತು.
- Verse 8: ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಜೆರುಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.
- Verse 9: “ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರು, ಅವರ ಜೊತೆಗಾರರಾದ ದಿನಾಯರು, ಅಪರ್ಸತ್ಕಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೊಷನಿನವರು.
- Verse 10: ದೆಹಾಯರು, ಏಲಾಮ್ಯರು ಹಾಗು ಮಹಾ ಶ್ರೀಮತ್ ಆಸೆನಪ್ಪರನು ಕರೆದುತಂದು ಸಮಾರಿಯ ಪಟ್ಟಣದಲ್ಲಿ ಮತ್ತು ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:
- Verse 11: ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಾಗಿತ್ತು: ಅರ್ತಷಸ್ತರಾಜರಿಗೆ, ತಮ್ಮ ಸೇವಕರಾದ ನದಿಯ ಈಚೆಯವರು:
- Verse 12: ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಜೆರುಸಲೇಮನ್ನು ಸೇರಿ ರಾಜ ಕಂಟಕವಾದ ಆ ದುಷ್ಟಪಟ್ಟಣವನ್ನೂ ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆಮಾಡಿಕೊಳ್ಳುತ್ತೇವೆ.
- Verse 13: ಆ ಪಟ್ಟಣವನ್ನೂ ಅದರ ಪೌಳಿಗೋಡೆಗಳನ್ನೂ ಕಟ್ಟುವುದು ಮುಗಿಸಿದರೆ ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ; ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
- Verse 14: ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು; ಅರಸರಿಗೆ ಅಪಮಾನವಾಗುವುದನ್ನು ನೋಡಿ ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ.
- Verse 15: ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದಂಗೆಯೆಬ್ಬಿಸುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮವಾಯಿತೆಂದೂ ಆ ಚರಿತ್ರಗ್ರಂಥದಲ್ಲಿ ಕಂಡುಬರುತ್ತದೆ.
- Verse 16: ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ ತಮಗೆ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.”
- Verse 17: ಈ ಪತ್ರಕ್ಕೆ ಅರಸ ಅವರಿಗೆ ಕೊಟ್ಟ ಉತ್ತರ: “ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ ಸಮಾರಿಯದಲ್ಲಿರುವ ಅವರ ಜೊತೆಗಾರರಿಗೂ ನದಿಯ ಆಚೆಯಲ್ಲಿರುವ ಇತರರಿಗೂ ಕ್ಷೇಮಾಭಿಲಾಶೆಗಳು;
- Verse 18: ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಲಾಯಿತು.
- Verse 19: ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದ್ರೋಹಮಾಡುತ್ತಾ,
- Verse 20: ದಂಗೆಯೆಬ್ಬಿಸುತ್ತಾ ಬಂದಿದ್ದಾರೆ; ಇದಲ್ಲದೆ ಜೆರುಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ನದಿಯಾಚೆಯ ಎಲ್ಲ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಳುತ್ತಿದ್ದರೆಂದು ಕಂಡುಬಂದಿದೆ.
- Verse 21: ಆದುದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಿ ಬಿಡಬಾರದೆಂತಲೂ ಪ್ರಕಟಿಸಿರಿ.
- Verse 22: ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿ.”
- Verse 23: ಅರಸ ಅರ್ತಷಸ್ತನ ಈ ಪತ್ರವನ್ನು ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಇವರ ಮುಂದೆ ಮತ್ತು ಇವರ ಜೊತೆಗಾರರ ಮುಂದೆ ಓದಲಾಯಿತು. ಕೂಡಲೆ ಅವರು ಜೆರುಸಲೇಮಿಗೆ ಶೀಘ್ರವಾಗಿ ಹೋಗಿ, ಬಲಾತ್ಕಾರದಿಂದ ಹಾಗು ಅಧಿಕಾರದಿಂದ ಯೆಹೂದ್ಯರನ್ನು ತಡೆದರು.
- Verse 24: ಅಂದಿನಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಜೆರುಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಯಿತು.