ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
5ನೇ ಅಧ್ಯಾಯ
- Verse 1: ಮಗನೇ, ನನ್ನ ಜ್ಞಾನೋಪದೇಶವನ್ನು ಆಲಿಸು; ವಿವೇಕದಿಂದ ಕೂಡಿ ನನ್ನ ಬೋಧೆಗೆ ಕಿವಿಗೊಡು.
- Verse 2: ಆಗ ನೀನು ವಿವೇಕಶೀಲನಾಗುವೆ; ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಯ್ದುಕೊಳ್ಳುವುವು.
- Verse 3: ವ್ಯಭಿಚಾರಿಣಿಯ ತುಟಿಗಳು ಜೇನುಗರೆಯುತ್ತವೆ; ಎಣ್ಣೆಗಿಂತ ಮೃದು ಅವಳ ವಾಣಿ.
- Verse 4: ಕಡೆಗೆ ಅವಳು ಕಹಿ ಮಾಚಿಪತ್ರೆಯಂತೆ, ಹರಿತವಾದ ಇಬ್ಬಾಯಿ ಕತ್ತಿಯಂತೆ.
- Verse 5: ಅವಳ ಕಾಲುಗಳು ಮರಣದತ್ತ ಇಳಿಯುತ್ತವೆ, ಹೆಜ್ಜೆಗಳು ಪಾತಾಳದತ್ತ ಕೊಂಡೊಯ್ಯುತ್ತವೆ.
- Verse 6: ಜೀವಮಾರ್ಗದ ವಿವೇಚನೆ ಅವಳಿಗಿಲ್ಲ. ಅದರ ಅರಿವೂ ಅವಳಿಗಿರುವುದಿಲ್ಲ. ಅವಳ ನಡತೆಯು ಅಷ್ಟು ಚಂಚಲ.
- Verse 7: ಇಂತಿರಲು ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಬಿಟ್ಟು ಅಗಲದಿರು.
- Verse 8: ಅವಳಿಂದ ದೂರವಿರಲಿ ನಿನ್ನ ಮಾರ್ಗ, ಸುಳಿಯದಿರು ಅವಳ ಮನೆಬಾಗಿಲ ಹತ್ತಿರ.
- Verse 9: ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳ ವಶವಾದೀತು, ಜೋಕೆ!
- Verse 10: ನಿನ್ನ ಸಿರಿಸಂಪತ್ತು ಪರರ ಮನೆ ತುಂಬೀತು, ನಿನ್ನ ದುಡಿಮೆಯ ಫಲ ಅನ್ಯನ ಮನೆ ಸೇರೀತು!
- Verse 11: ಕಟ್ಟಕಡೆಗೆ ನಿನ್ನ ದೇಹವೆಲ್ಲ ಕರಗಿಹೋದೀತು; ಅಂಗಲಾಚಿ ನೀ ಕೊರಗಬೇಕಾದೀತು ಇಂತೆಂದು:
- Verse 12: “ಅಕಟಕಟಾ ಶಿಸ್ತನ್ನೇ ನಾನು ದ್ವೇಷಿಸಿದೆನಲ್ಲಾ! ನನಗೆ ಕೊಡಲಾದ ತಿದ್ದುಪಾಟನ್ನು ತಾತ್ಸಾರಮಾಡಿದೆನಲ್ಲಾ!
- Verse 13: ಗುರುಗಳ ಮಾತನ್ನು ಗಮನಿಸದೆ ಹೋದೆನಲ್ಲಾ! ಬೋಧಕರಿಗೆ ಕಿವಿಗೊಡದೆ ಹೋದೆನಲ್ಲಾ!
- Verse 14: ದೇವಜನರ ಸಭೆಕೂಟಗಳಲ್ಲಿ ಎಲ್ಲಾ ತರದ ನಿಂದೆ ಆಪಾದನೆಗಳಿಗೆ ಗುರಿಯಾದೆನಲ್ಲಾ!”
- Verse 15: ನಿನ್ನ ಸ್ವಂತ ಕೊಳದ ನೀರನ್ನೇ ಸೇವಿಸು, ನಿನ್ನ ಬಾವಿಯಿಂದ ಉಕ್ಕಿಬರುವ ಜಲವನ್ನೇ ಕುಡಿ.
- Verse 16: ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ?
- Verse 17: ಅವು ನಿನಗೊಬ್ಬನಿಗೇ ಮೀಸಲಾಗಿರಲಿ; ನಿನ್ನೊಡನೆ ಬೇರೊಬ್ಬನ ಪಾಲಾಗದಿರಲಿ.
- Verse 18: ನಿನ್ನ ಬುಗ್ಗೆ ದೇವರಿಂದ ಆಶೀರ್ವಾದಹೊಂದಲಿ, ನಿನ್ನ ಆನಂದ ನಿನ್ನ ಯೌವನಕಾಲದ ಹೆಂಡತಿಯಲ್ಲಿರಲಿ.
- Verse 19: ಆಕೆ ಮನೋಹರವಾದ ಹರಿಣಿ, ಸುಂದರವಾದ ಜಿಂಕೆಮರಿ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಒಲವಿನಲ್ಲೇ ಸದಾ ತಲ್ಲೀನನಾಗಿರು.
- Verse 20: ಮಗನೇ, ಪರಸ್ತ್ರೀಯಲ್ಲಿ ಭ್ರಮೆ ಏಕೆ? ಅನ್ಯಳ ಎದೆ ತಬ್ಬಿಕೊಳ್ಳುವುದೇಕೆ?
- Verse 21: ನರನ ಮಾರ್ಗ ಸರ್ವೇಶ್ವರನ ಕಣ್ಣಿಗೆ ಮರೆಯಲ್ಲ; ಆತ ವೀಕ್ಷಿಸುತ್ತಾನೆ ಮನುಷ್ಯನ ನಡತೆಯನ್ನೆಲ್ಲಾ.
- Verse 22: ದುರುಳನನ್ನು ಅವನ ದ್ರೋಹಗಳೆ ಆಕ್ರಮಿಸುತ್ತವೆ; ಅವನ ಪಾಪಪಾಶಗಳೇ ಅವನನ್ನು ಬಂಧಿಸುತ್ತವೆ.
- Verse 23: ಅವನು ಶಿಸ್ತುಪಾಲನೆಯಿಲ್ಲದೆ ನಾಶವಾಗುತ್ತಾನೆ; ಅತಿ ಮೂರ್ಖತನದಿಂದಲೇ ಮೋಸಹೋಗುತ್ತಾನೆ.