ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
24ನೇ ಅಧ್ಯಾಯ
- Verse 1: ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. ಅವರ ಒಡನಾಟವನ್ನು ಬಯಸಬೇಡ.
- Verse 2: ಅವರ ಮನಸ್ಸು ಯೋಚಿಸುವುದು ಹಿಂಸೆಯನ್ನು, ಅವರ ತುಟಿ ಪ್ರಸ್ತಾಪಿಸುವುದು ಹಾನಿಯನ್ನು.
- Verse 3: ಮನೆಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಗೊಳಿಸುವುದಕ್ಕೆ ವಿವೇಕವೇ ಆಧಾರ.
- Verse 4: ಮೌಲ್ಯವೂ ಸುಂದರವೂ ಆದವುಗಳಿಂದ ಅದರ ಕೋಣೆಗಳನ್ನು ತುಂಬಿಸಲು ತಿಳುವಳಿಕೆಯೇ ಉಪಕರಣ.
- Verse 5: ಬಲವಂತನಿಗಿಂತ ಬುದ್ಧಿವಂತ ಶಕ್ತಿಶಾಲಿ; ಶೂರನಿಗಿಂತ ಜ್ಞಾನಿಯೇ ಬಲಶಾಲಿ.
- Verse 6: ಬುದ್ಧಿವಂತನು ನಾಯಕನನ್ನಿಟ್ಟು ಯುದ್ಧ ನಡೆಸುವನು; ಸುಮಂತ್ರಿಗಳು ಹಲವರಿದ್ದರೆ ಸಂರಕ್ಷಣೆಯಿರುವುದು.
- Verse 7: ಜ್ಞಾನವು ಮೂರ್ಖನಿಗೆ ಎಟುಕದಷ್ಟು ಎತ್ತರ; ನ್ಯಾಯಸ್ಥಾನದಲ್ಲಿ ಅವನು ಬಾಯಿಬಿಡಲಾರ.
- Verse 8: ಕೇಡನ್ನು ಯೋಚಿಸುವವನು ತುಂಟನು ಎನಿಸಿಕೊಳ್ಳುವನು.
- Verse 9: ಮೂರ್ಖನ ಯೋಜನೆ ಪಾಪಮಯ; ಕುಚೋದ್ಯನು ಜನರಿಂದ ತಿರಸ್ಕೃತನು.
- Verse 10: ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನಿನ್ನ ಬಲವು ಅಸಮರ್ಪಕವಾದುದೆ.
- Verse 11: ಮರಣಕ್ಕೆ ಒಯ್ಯಲ್ಪಟ್ಟವನನ್ನು ಬಿಡಿಸಲು ಯತ್ನಿಸು; ಕೊಲೆಗೆ ಗುರಿಯಾದವನನ್ನು ತಪ್ಪಿಸಲು ಯತ್ನಿಸು.
- Verse 12: ಈ ಸಂಗತಿ ಗೊತ್ತಿರಲಿಲ್ಲವೆಂದು ನೆವ ಹೇಳಬೇಡ; ಅಂತರಂಗ ಪರಿಶೋಧಕನಿಗೆ ನಿನ್ನ ಯೋಜನೆ ತಿಳಿದಿಲ್ಲವೆ? ನಿನ್ನ ಮನಸ್ಸನ್ನು ಸಮೀಕ್ಷಿಸುವ ಆತನಿಗೆ ಇದು ಮರೆಯೇ? ಮಾನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನಾತ ನೀಡುವನಲ್ಲವೆ?
- Verse 13: ಮಗನೇ, ಜೇನು ತಿನ್ನು, ಅದು ಚೆನ್ನಾಗಿದೆ; ತೊಟ್ಟಿಕ್ಕುವ ಜೇನುತುಪ್ಪ ನಿನ್ನ ಬಾಯಿಗೆ ಸಿಹಿ ಅಲ್ಲವೇ?
- Verse 14: ಅಂತೆಯೇ ಜ್ಞಾನ ನಿನ್ನ ಆತ್ಮಕ್ಕೆ ಸಿಹಿಯೆಂದು ತಿಳಿ; ಅದನ್ನು ಪಡೆದೆಯಾದರೆ ನಿನ್ನ ಭವಿಷ್ಯ ಶುಭಕರ, ನಿನ್ನ ನಿರೀಕ್ಷೆ ಆಗದು ನಿರರ್ಥಕ.
- Verse 15: ದುಷ್ಟನೇ, ನೀತಿವಂತನ ಮನೆಗೆ ಕನ್ನಹಾಕಬೇಡ; ಅವನು ಕೂಡಿಸಿದ್ದನ್ನು ಕೊಳ್ಳೆಹೊಡೆಯಬೇಡ.
- Verse 16: ನೀತಿವಂತನು ಏಳುಸಾರಿ ಬಿದ್ದರೂ ಮತ್ತೆ ಏಳುವನು; ದುಷ್ಟನು ಕೇಡುಬಂದಾಗಲೆ ಕುಸಿದು ಬೀಳುವನು.
- Verse 17: ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ; ಎಡವಿದರೆ ಮನೋಲ್ಲಾಸ ಪಡಬೇಡ.
- Verse 18: ಸರ್ವೇಶ್ವರ ನಿನ್ನ ಹರ್ಷವನ್ನು ಕಂಡು ಬೇಸರಗೊಂಡಾನು; ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಿಬಿಟ್ಟಾನು.
- Verse 19: ಕೆಡುಕರನ್ನು ಕಂಡು ಉರಿಗೊಳ್ಳಬೇಡ; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ.
- Verse 20: ಕೆಟ್ಟವನಿಗೆ ಶುಭಕಾಲ ಬಾರದು, ದುಷ್ಟರ ದೀಪ ಆರಿಹೋಗುವುದು.
- Verse 21: ಮಗನೇ, ಸರ್ವೇಶ್ವರನಿಗೂ ರಾಜನಿಗೂ ಭಯಪಡು; ಅವರನ್ನು ವಿರೋಧಿಸುವವರ ಗೊಡವೆಗೆ ಹೋಗಬೇಡ.
- Verse 22: ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸೀತು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು?
- Verse 23: ಜ್ಞಾನಿಗಳ ಬೇರೆ ಕೆಲವು ಹೇಳಿಕೆಗಳು ಇವು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತ ಸರಿಯಲ್ಲ.
- Verse 24: ಅಪರಾಧಿಗೆ “ನೀನು ನಿರಪರಾಧಿ” ಎಂದು ತೀರ್ಪು ಕೊಡುವವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು.
- Verse 25: ತಪ್ಪುಮಾಡಿದವರನ್ನು ದಂಡಿಸುವವರಿಗೆ ಶುಭವಾಗುವುದು, ಸುಖಕರವಾದ ಆಶೀರ್ವಾದವು ಅವರಿಗೆ ಲಭಿಸುವುದು.
- Verse 26: ಸತ್ಯವಾದ ಉತ್ತರ ತುಟಿಗೊಂದು ಚುಂಬನ.
- Verse 27: ಕೆಲಸದ ಸಾಮಾನುಗಳನ್ನು ಆಣೆಮಾಡು, ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆ ಬಳಿಕ ಮನೆ ಕಟ್ಟಲು ತೊಡಗು.
- Verse 28: ನೆರೆಯವನಿಗೆ ವಿರುದ್ಧ ಆಧಾರವಿಲ್ಲದ ಸಾಕ್ಷಿಹೇಳಬೇಡ; ಮಾತಿನಲ್ಲಿ ಅವನಿಗೆ ಮೋಸಮಾಡಬೇಡ.
- Verse 29: “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆ, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆ” ಎನ್ನಬೇಡ.
- Verse 30: ಸೋಮಾರಿಯ ಹೊಲದ ಮೇಲೆ ನಡೆದುಹೋದೆ; ಮತಿಗೆಟ್ಟವನ ತೋಟದ ಮೇಲೆ ಹಾದುಹೋದೆ.
- Verse 31: ಅವುಗಳಲ್ಲಿ ಮುಳ್ಳುಗಿಡಗಳು ಹರಡಿಕೊಂಡಿದ್ದವು, ಕಳೆಗಳು ಮುಚ್ಚಿಕೊಂಡಿದ್ದವು, ಕಲ್ಲಿನಗೋಡೆ ಹಾಳಾಗಿತ್ತು.
- Verse 32: ಅದನ್ನು ನೋಡಿ ಚಿಂತಿಸತೊಡಗಿದೆ; ಆ ದೃಶ್ಯದಿಂದ ಈ ಪಾಠ ಕಲಿತೆ:
- Verse 33: “ಇನ್ನೂ ಸ್ವಲ್ಪ ನಿದ್ರೆ, ಇನ್ನೂ ತುಸು ತೂಕಡಿಕೆ, ಕೈ ಮುದುಡಿಕೊಂಡು ಇನ್ನೂ ಕೊಂಚ ಮಲಗಿಕೊಳ್ಳುವೆ” ಎನ್ನುವೆಯಾ?
- Verse 34: ಆಗ ಬಡತನ ಎರಗುವುದು ದಾರಿಗಳ್ಳನಂತೆ; ಕೊರತೆಯು ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.