ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಮತ್ತಾಯ
4ನೇ ಅಧ್ಯಾಯ
- Verse 1: ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು.
- Verse 2: ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು.
- Verse 3: ಆಗ ಶೋಧಕನು ಬಂದು, “ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು,” ಎಂದನು.
- Verse 4: ಅದಕ್ಕೆ ಯೇಸುಸ್ವಾಮಿ, “ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, ‘ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ’,” ಎಂದರು.
- Verse 5: ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ,
- Verse 6: “ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕೆಳಕ್ಕೆ ಧುಮುಕು. ಏಕೆಂದರೆ, ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಕೊಳ್ಳುವರು’,” ಎಂದಿತು.
- Verse 7: ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು.
- Verse 8: ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು.
- Verse 9: “ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ,” ಎಂದಿತು.
- Verse 10: ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೈತಾನನೇ, ತೊಲಗು. ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು.
- Verse 11: ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.
- Verse 12: ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು.
- Verse 13: ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸಮೀಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು.
- Verse 14: ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ.
- Verse 15: ಹೀಗೆ: “ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ,
- Verse 16: ಕಾರ್ಗತ್ತಲಲಿ ವಾಸಿಸುವವರಿಗೆ ದಿವ್ಯಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,” ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು.
- Verse 17: ಅಂದಿನಿಂದ ಯೇಸು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು,” ಎಂಬ ಸಂದೇಶವನ್ನು ಬೋಧಿಸತೊಡಗಿದರು.
- Verse 18: ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದುಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು.
- Verse 19: “ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,” ಎಂದು ಹೇಳಿ ಯೇಸು ಅವರನ್ನು ಕರೆದರು.
- Verse 20: ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
- Verse 21: ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು.
- Verse 22: ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
- Verse 23: ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.
- Verse 24: ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ನಾನಾ ತರಹದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ ರೋಗಿಗಳನ್ನೂ ಅವರ ಬಳಿಗೆ ಕರೆತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು.
- Verse 25: ಗಲಿಲೇಯ, ದೆಕಪೊಲಿ, ಜೆರುಸಲೇಮ್, ಜುದೇಯ ಎಂಬ ಸ್ಥಳಗಳಿಂದಲೂ ಜೋರ್ಡನ್ ನದಿಯ ಆಚೆಕಡೆಯಿಂದಲೂ ಜನರು ತಂಡೋಪತಂಡವಾಗಿ ಬಂದು ಯೇಸುವನ್ನು ಹಿಂಬಾಲಿಸಿದರು.