पवित्र बाइबिल
ಹೊಸ ಒಡಂಬಡಿಕೆ
ಲೂಕ
21ನೇ ಅಧ್ಯಾಯ
- Verse 1: ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು.
- Verse 2: ಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು.
- Verse 3: ಅದನ್ನು ಕಂಡ ಯೇಸು, “ಈ ಬಡ ವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
- Verse 4: ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.
- Verse 5: “ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು.
- Verse 6: ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು.
- Verse 7: “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು.
- Verse 8: ಅದಕ್ಕೆ ಯೇಸುಸ್ವಾಮಿ, “ನೀವು ಮೋಸಹೋಗದಂತೆ ಜಾಗರೂಕರಾಗಿರಿ. ‘ಅನೇಕರು ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ.
- Verse 9: ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು.
- Verse 10: ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು;
- Verse 11: ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು, ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.
- Verse 12: ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು.
- Verse 13: ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ.
- Verse 14: ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ.
- Verse 15: ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು.
- Verse 16: ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದುಹಾಕಿಸುವರು.
- Verse 17: ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು.
- Verse 18: ಆದರೂ ನಿಮ್ಮ ತಲೆಕೂದಲೊಂದೂ ನಾಶವಾಗುವುದಿಲ್ಲ.
- Verse 19: ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ.
- Verse 20: “ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ.
- Verse 21: ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ.
- Verse 22: ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು.
- Verse 23: ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು.
- Verse 24: ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.
- Verse 25: “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು.
- Verse 26: ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು.
- Verse 27: ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು.
- Verse 28: ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು.”
- Verse 29: ಬಳಿಕ ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ.
- Verse 30: ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ.
- Verse 31: ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ.
- Verse 32: ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿಹೇಳುತ್ತೇನೆ.
- Verse 33: ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.
- Verse 34: “ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗರೂಕರಾಗಿರಿ!
- Verse 35: ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು.
- Verse 36: ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆಮಾಡುತ್ತಾ ಎಚ್ಚರಿಕೆಯಿಂದಿರಿ,” ಎಂದರು.
- Verse 37: ಯೇಸುಸ್ವಾಮಿ ಹಗಲೆಲ್ಲಾ ಮಹಾದೇವಾಲಯದಲ್ಲಿ ಬೋಧಿಸುತ್ತಿದ್ದರು. ರಾತ್ರಿಯಲ್ಲಿ ಪಟ್ಟಣದಿಂದ ಹೊರಟು, ಓಲಿವ್ ತೋಪಿನ ಗುಡ್ಡದಲ್ಲಿ ತಂಗುತ್ತಿದ್ದರು.
- Verse 38: ಅವರ ಬೋಧನೆಯನ್ನು ಕೇಳಲು ಜನರೆಲ್ಲರೂ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ದೇವಾಲಯಕ್ಕೆ ಬರುತ್ತಿದ್ದರು.