ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ರೋಮನರಿಗೆ
3ನೇ ಅಧ್ಯಾಯ
- Verse 1: ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಅವರು ಸುನ್ನತಿ ಮಾಡಿಸಿಕೊಂಡುದರಿಂದ ಪಡೆದ ಪ್ರಯೋಜನವೇನು?
- Verse 2: ಹೌದು, ಎಲ್ಲಾ ವಿಧದಲ್ಲಿಯೂ ಹೆಚ್ಚು ಪ್ರಯೋಜನವಿದೆ. ಮೊದಲನೆಯದಾಗಿ, ದೇವರು ತಮ್ಮ ಸಂದೇಶವನ್ನು ವಹಿಸಿಕೊಟ್ಟದ್ದು ಯೆಹೂದ್ಯರಿಗೆ ತಾನೆ?
- Verse 3: ಅವರಲ್ಲಿ ಕೆಲವರು ಅಪ್ರಾಮಾಣಿಕರಾಗಿ ನಡೆದುಕೊಂಡಿದ್ದರೆ ಏನಾಯಿತು? ದೇವರ ಪ್ರಾಮಾಣಿಕತನಕ್ಕೆ ಭಂಗಬರಲು ಸಾಧ್ಯವೆ?
- Verse 4: ಎಂದಿಗೂ ಇಲ್ಲ. ಮಾನವರೆಲ್ಲರು ಸುಳ್ಳುಗಾರರಾದರೂ ದೇವರು ಮಾತ್ರ ಸತ್ಯವಂತರೇ ಸರಿ. ಪವಿತ್ರಗ್ರಂಥದಲ್ಲಿ ಹೀಗೆಂದು ಬರೆದಿದೆ: “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.”
- Verse 5: ನಮ್ಮ ಅಕ್ರಮ ನಡತೆ ದೇವರ ನ್ಯಾಯನೀತಿಯನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುವ ಸಾಧನವಾದರೆ ಆಗ ಏನು ಹೇಳುವುದು? ಆ ಅಕ್ರಮವಾಗಿ ದೇವರು ನಮ್ಮ ಮೇಲೆ ಕೋಪ ಕಾರಿದರೆ ಅದು ಅನ್ಯಾಯವೆಂದು ನಾವು ಹೇಳಬಹುದೆ? (ಮನುಷ್ಯನಿಗೆ ಸಹಜವಾಗಿ ಏಳುವ ಪ್ರಶ್ನೆಯಿದು)
- Verse 6: ಎಂದಿಗೂ ಇಲ್ಲ! ದೇವರು ನ್ಯಾಯವಂತರಲ್ಲದಿದ್ದರೆ ಲೋಕಕ್ಕೆ ನ್ಯಾಯತೀರ್ಪು ಕೊಡಲು ಹೇಗೆ ತಾನೆ ಸಾಧ್ಯ?
- Verse 7: ನಮ್ಮ ಅಸತ್ಯತೆಯಿಂದ ದೇವರ ಸತ್ಯತೆ ವ್ಯಕ್ತವಾಗಿ ಅವರ ಮಹಿಮೆ ಬೆಳಗುವುದಾದರೆ ನನಗೇಕೆ ಪಾಪಿಯೆಂದು ತೀರ್ಪಾಗಬೇಕು?
- Verse 8: “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” - ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
- Verse 9: ಹಾಗಾದರೆ, ಯೆಹೂದ್ಯರಾದ ನಾವು ಇತರರಿಗಿಂತಲೂ ಶ್ರೇಷ್ಠರೋ? ಎಷ್ಟುಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ, ಇತರರೇ ಆಗಲಿ, ಎಲ್ಲರೂ ಪಾಪದ ಆಳ್ವಿಕೆಗೆ ಅಧೀನರು. ಇದನ್ನು ನಾನು ಈಗಾಗಲೇ ಸ್ಪಷ್ಟೀಕರಿಸಿದ್ದೇನೆ.
- Verse 10: ಪವಿತ್ರಗ್ರಂಥದಲ್ಲಿ ಹೀಗಿದೆ:
- Verse 11: ದೇವರೊಡನೆ ಸತ್ಸಂಬಂಧಿತರಾರೂ ಇಲ್ಲ ಸನ್ಮತಿಗಳು ಒರ್ವರೂ ಇಲ್ಲ ಆತನನ್ನು ಅರಸುವವರಂತೂ ಇಲ್ಲವೇ ಇಲ್ಲ.
- Verse 12: ಸರಿದರು ದೂರ, ದೇವರಿಂದ ದೂರ ದಾರಿತಪ್ಪಿ ನಡೆದರೆಲ್ಲರೂ ಬಲುದೂರ ಒಳಿತನು ಮಾಳ್ಪರೊರ್ವನೂ ಇಲ್ಲ.
- Verse 13: ಅವರ ಗಂಟಲೇ ತೆರೆದ ಸಮಾಧಿಯಾಗಿದೆ ನಾಲಗೆಗಳಲಿ ಮರೆಮೋಸ ತುಂಬಿತುಳುಕುತಿದೆ. ತುಟಿಯ ಕಂಪನದಲಿ ಘೋರ ವಿಷವಿದೆ.
- Verse 14: ಶಾಪಕೋಪ ಅವರ ಬಾಯಲಿ ತುಂಬಿದೆ
- Verse 15: ಕಾಲುಕೆರೆದು ನಿಂತಿಹರು ರಕುತ ಪಾತಕೆ
- Verse 16: ನಾಶಪರಿವಿನಾಶ ಅವರು ಹೋದೆಡೆ.
- Verse 17: ಶಾಂತಿಪಥವನು ಅರಿಯರವರು
- Verse 18: ಅವರೆದೆಯಲಿಲ್ಲ ದೇವಭಯವು.
- Verse 19: ಧರ್ಮಶಾಸ್ತ್ರದ ನೇಮನಿಯಮಗಳು ಆ ಶಾಸ್ತ್ರಕ್ಕೆ ಅಧೀನರಾದವರಿಗೆ ಮಾತ್ರ ಅನ್ವಯಿಸುತ್ತವೆಂದು ನಾವು ಬಲ್ಲೆವು. ಆದ್ದರಿಂದ ಯಾರೂ ಯಾವ ನೆಪವನ್ನು ಹೇಳಲೂ ಬಾಯಿ ತೆರೆಯುವಂತಿಲ್ಲ. ಜಗತ್ತೆಲ್ಲವೂ ದೇವರ ನ್ಯಾಯತೀರ್ಪಿಗೆ ಗುರಿಯಾಗಿದೆ.
- Verse 20: ಏಕೆಂದರೆ, ಈ ನೇಮನಿಯಮಗಳನ್ನು ಅನುಸರಿಸಿದ ಮಾತ್ರಕ್ಕೇ ಯಾರೂ ದೇವರೊಡನೆ ಸತ್ಸಂಬಂಧವನ್ನು ಪಡೆಯುವುದಿಲ್ಲ. ಧರ್ಮಶಾಸ್ತ್ರ ಮಾನವನಿಗೆ ಪಾಪಪ್ರಜ್ಞೆಯನ್ನು ಉಂಟುಮಾಡುತ್ತದೆ, ಅಷ್ಟೆ.
- Verse 21: ಈಗಲಾದರೋ ಧರ್ಮಶಾಸ್ತ್ರದ ನೆರವಿಲ್ಲದೆಯೇ ದೇವರಿಂದ ದೊರಕುವ ಸತ್ಸಂಬಂಧವು ಪ್ರಕಟವಾಗಿದೆ. ಇದಕ್ಕೆ ಧರ್ಮಶಾಸ್ತ್ರವೂ ಪ್ರವಾದನಾಗ್ರಂಥವೂ ಸಾಕ್ಷಿಯಾಗಿವೆ.
- Verse 22: ಯೇಸುಕ್ರಿಸ್ತರಲ್ಲಿ ವಿಶ್ವಾಸವಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರನ್ನೂ ದೇವರು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
- Verse 23: ಮಾನವರೆಲ್ಲರೂ ಪಾಪಿಗಳೇ, ಎಲ್ಲರೂ ದೇವದತ್ತ ಮಹಿಮೆಯನ್ನು ಕಳೆದುಕೊಂಡವರೇ.
- Verse 24: ಆದರೆ ದೇವರು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಪಾಪವಿಮೋಚನೆಯನ್ನು ದಯಪಾಲಿಸಿ, ತಮ್ಮ ಉಚಿತಾರ್ಥ ಅನುಗ್ರಹದಿಂದ ಅವರನ್ನು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ.
- Verse 25: ಪೂರ್ವಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ವಿಶ್ವಾಸವುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತರು ರಕ್ತಧಾರೆ ಎರೆಯುವಂತೆ ಮಾಡಿದರು. ತಾವು ನೀತಿಸ್ವರೂಪರೆಂದು ತೋರಿಸುವುದಕ್ಕಾಗಿ ಹೀಗೆ ಮಾಡಿದರು.
- Verse 26: ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯೂ ತಾವು ಸತ್ಯಸ್ವರೂಪರು ಮತ್ತು ನ್ಯಾಯವಂತರು ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಈ ರೀತಿ ಮಾಡಿದರು.
- Verse 27: ಹೀಗಿರುವಲ್ಲಿ ಮಾನವನು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವಿದೆಯೆ? ಇಲ್ಲವೇ ಇಲ್ಲ. ಹಾಗಾದರೆ ಸತ್ಸಂಬಂಧಕ್ಕೆ ಆಧಾರವೇನು? ಸತ್ಕಾರ್ಯಗಳ ಸಾಧನೆಯೆ? ಇಲ್ಲ. ವಿಶ್ವಾಸವೇ? ಹೌದು.
- Verse 28: ಮಾನವನಿಗೆ ದೇವರೊಡನೆ ಸತ್ಸಂಬಂಧ ದೊರಕುವುದು ಧರ್ಮಶಾಸ್ತ್ರಗಳ ನೇಮನಿಯಮಗಳನ್ನು ಪಾಲಿಸುವುದರಿಂದ ಅಲ್ಲ, ವಿಶ್ವಾಸದಿಂದಲೇ ಎಂಬುದು ನಮ್ಮ ಸಿದ್ಧಾಂತ.
- Verse 29: ದೇವರು ಕೇವಲ ಯೆಹೂದ್ಯರಿಗೆ ಮಾತ್ರ ದೇವರೋ ಅಥವಾ ಇತರರಿಗೂ ದೇವರೋ? ಹೌದು, ಇತರರಿಗೂ ದೇವರೇ.
- Verse 30: ಯೆಹೂದ್ಯರನ್ನು ಅವರ ವಿಶ್ವಾಸದ ಆಧಾರದ ಮೇಲೂ ಇತರರನ್ನು ಅವರ ವಿಶ್ವಾಸದ ಮೂಲಕವೂ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವ ದೇವರು ಒಬ್ಬರೇ.
- Verse 31: ‘ವಿಶ್ವಾಸದ ಮೂಲಕ’ ಎಂದು ಒತ್ತಿ ಹೇಳುವಾಗ ಧರ್ಮಶಾಸ್ತ್ರವನ್ನು ನಾವು ಅಲ್ಲಗಳೆಯುತ್ತೇವೆಂದು ಅರ್ಥವೆ? ಎಂದಿಗೂ ಇಲ್ಲ. ಬದಲಿಗೆ ಧರ್ಮಶಾಸ್ತ್ರದ ನಿಲುವನ್ನು ಸಮರ್ಥಿಸುತ್ತೇವೆ.