ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ತಿಮೊಥೇಯನಿಗೆ
3ನೇ ಅಧ್ಯಾಯ
- Verse 1: ಯಾರಾದರೂ ಧರ್ಮಾಧ್ಯಕ್ಷನಾಗಲು ಅಪೇಕ್ಷಿಸಿದರೆ, ಅಂಥವನು ಉತ್ತಮ ಸೇವೆಯನ್ನೇ ಬಯಸುತ್ತಾನೆಂಬುದು ನಿಜ.
- Verse 2: ಅಂಥವನು ನಿಂದಾರಹಿತನಾಗಿರಬೇಕು. ಏಕಪತ್ನಿ ಉಳ್ಳವನು, ಸ್ವಸ್ಥಬುದ್ಧಿಯುಳ್ಳವನು, ಜಿತೇಂದ್ರಿಯನು, ಗೌರವಸ್ಥನು ಮತ್ತು ಅತಿಥಿ ಸತ್ಕಾರ ಮಾಡುವವನು ಆಗಿರಬೇಕು. ಬೋಧಿಸುವುದರಲ್ಲಿ ಪ್ರವೀಣನಾಗಿರಬೇಕು.
- Verse 3: ಅವನು ಕುಡುಕನು, ಕಲಹಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು.
- Verse 4: ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ನಡೆಸುವವನೂ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿ ಅವರಿಂದ ಗೌರವವನ್ನು ಪಡೆದುಕೊಳ್ಳುವವನೂ ಆಗಿರಬೇಕು.
- Verse 5: ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಶೀಲಿಸಿಯಾನು?
- Verse 6: ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು; ಇಲ್ಲದಿದ್ದರೆ ಅಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು.
- Verse 7: ಕ್ರೈಸ್ತರಲ್ಲದವರಿಂದಲೂ ಆತನು ಒಳ್ಳೆಯವನೆನಿಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು.
- Verse 8: ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು.
- Verse 9: ವಿಶ್ವಾಸದ ನಿಗೂಢರಹಸ್ಯಗಳನ್ನು ಶುದ್ಧ ಮನಸ್ಸಾಕ್ಷಿಯಿಂದ ಕಾಪಾಡಿಕೊಂಡು ಬರುವವರಾಗಿರಬೇಕು.
- Verse 10: ಇವರನ್ನು ಮೊದಲು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕುಂದುಕೊರತೆ ಕಂಡುಬರದಿದ್ದಲ್ಲಿ, ಇವರನ್ನು ಸಭಾಸೇವಕರನ್ನಾಗಿ ನೇಮಿಸಬಹುದು.
- Verse 11: ಅಂತೆಯೇ, ಸಭಾಸೇವಕಿಯರು ಸಜ್ಜನೆಯರಾಗಿರಬೇಕು. ಚಾಡಿಮಾತುಗಳನ್ನು ಆಡುವವರೂ ಮದ್ಯಾಸಕ್ತರೂ ಆಗಿರದೆ ಎಲ್ಲ ವಿಷಯಗಳಲ್ಲಿ ನಂಬಿಕಸ್ಥರಾಗಿರಬೇಕು.
- Verse 12: ಸಭಾಸೇವಕರು ಏಕಪತ್ನಿಯುಳ್ಳವರಾಗಿದ್ದು ತಮ್ಮ ಮಕ್ಕಳನ್ನೂ ಕುಟುಂಬವನ್ನೂ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವವರಾಗಿರಬೇಕು.
- Verse 13: ನಿಷ್ಠೆಯಿಂದ ಸೇವೆಸಲ್ಲಿಸುವ ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ: ಕ್ರಿಸ್ತಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನು ಪಡೆಯುತ್ತಾರೆ.
- Verse 14: ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.
- Verse 15: ಒಂದು ವೇಳೆ ನಾನು ಬರುವುದು ತಡವಾದರೆ, ದೇವರ ಮಂದಿರದಲ್ಲಿ ಅಂದರೆ, ಜೀವಸ್ವರೂಪಿಯಾದ ದೇವರ ಸಭೆಯಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ.
- Verse 16: ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.