ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
8ನೇ ಅಧ್ಯಾಯ
2 : “ನೀನು ಆರೋನನನ್ನೂ ಅವನ ಗಂಡು ಮಕ್ಕಳನ್ನೂ ಕರೆದುಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನು, ಅಭಿಷೇಕ ತೈಲವನ್ನು, ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನು, ಎರಡು ಟಗರುಗಳನ್ನು ಹಾಗು ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನು ತೆಗೆದುಕೊಂಡು ಬಾ;
3 : ಜನಸಮೂಹವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಕರೆಯಿಸು,” ಎಂದು ಆಜ್ಞೆ ಮಾಡಿದರು.
4 : ಸರ್ವೇಶ್ವರ ಹೇಳಿದಂತೆಯೇ ಮೋಶೆ ಮಾಡಿದನು. ಜನರೆಲ್ಲರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು.
5 : ಮೋಶೆ ಅವರಿಗೆ, “ನಾನು ಈಗ ಮಾಡುವ ಕಾರ್ಯ ಸರ್ವೇಶ್ವರ ಸ್ವಾಮಿಯೇ ಆಜ್ಞಾಪಿಸಿದ ಕಾರ್ಯ,” ಎಂದು ಹೇಳಿದನು.
6 : ಬಳಿಕ ಮೋಶೆ ಆರೋನನನ್ನೂ ಅವನ ಪುತ್ರರನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನ ಮಾಡಿಸಿದನು.
7 : ಆಮೇಲೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿಸಿ, ಅದರಿಂದ ಅವನ ಕವಚವನ್ನು ಕಟ್ಟಿ,
8 : ವಕ್ಷಪದಕವನ್ನು ಅವನಿಗೆ ಬಿಗಿಸಿ, ಅದರ ಚೀಲದೊಳಗೆ ಊರೀಮ್ ಹಾಗು ತುಮ್ಮೀಮ್ ಎಂಬ ದಾಳಗಳನ್ನು ಹಾಕಿ
9 : ಅವನ ತಲೆಗೆ ಸಿರಿಪೇಟವನ್ನು ತೊಡಿಸಿ, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದು ಅವನಿಗೆ ಪವಿತ್ರ ಕಿರೀಟದಂತಿತ್ತು.
10 : ಅನಂತರ ಮೋಶೆ ಅಭಿಷೇಕದ ಎಣ್ಣೆಯನ್ನು ತೆಗೆದುಕೊಂಡು ದೇವದರ್ಶನದ ಗುಡಾರವನ್ನು ಹಾಗು ಅದರಲ್ಲಿದ್ದ ಎಲ್ಲವನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.
11 : ಬಲಿಪೀಠದ ಮೇಲೆ ಏಳು ಸಾರಿ ಆ ಎಣ್ಣೆಯನ್ನು ಚಿಮುಕಿಸಿ ಬಲಿಪೀಠವನ್ನು, ಅದರ ಎಲ್ಲ ಉಪಕರಣಗಳನ್ನು ಹಾಗು ನೀರಿನ ತೊಟ್ಟಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
12 : ಆ ಎಣ್ಣೆಯಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
13 : ಅನಂತರ ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ಪೇಟಗಳನ್ನು ತೊಡಿಸಿದನು.
14 : ಅನಂತರ ಅವನು ದೋಷಪರಿಹಾರಾರ್ಥವಾದ ಹೋರಿಯನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಚಾಚಿದರು.
15 : ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಿ ಬಲಿಪೀಠವನ್ನು ಪ್ರತಿಷ್ಠಿಸಿದನು. ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಬಲಿಪೀಠದ ಬಗ್ಗೆ ದೋಷಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪವಿತ್ರೀಕರಿಸಿ ಪ್ರತಿಷ್ಠಾಪಿಸಿದನು.
16 : ಆ ಹೋರಿಯ ಕರುಳುಗಳ ಸುತ್ತಲಿರುವ ಎಲ್ಲ ಕೊಬ್ಬನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಮೂತ್ರಪಿಂಡಗಳನ್ನು ಹಾಗು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಿದನು.
17 : ಸರ್ವೇಶ್ವರನ ಆಜ್ಞಾನುಸಾರ ಆ ಪ್ರಾಣಿಯ ಮಿಕ್ಕ ಭಾಗಗಳನ್ನು, ಅಂದರೆ ಅದರ ಚರ್ಮ, ಮಾಂಸ ಹಾಗು ಕಲ್ಮಷಗಳನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.
18 : ತರುವಾಯ ಅವನು ದಹನ ಬಲಿಗಾಗಿ ಟಗರನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು.
19 : ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.
20 : ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನೂ ಮಾಂಸಖಂಡಗಳನ್ನೂ ಕೊಬ್ಬನ್ನೂ ಹೋಮಮಾಡಿದನು.
21 : ಅದರ ಕರುಳುಗಳನ್ನೂ, ಕಾಲುಗಳನ್ನೂ ನೀರಿನಿಂದ ತೊಳೆಯಿಸಿ ಆ ಟಗರನ್ನು ಬಲಿಪೀಠದ ಮೇಲೆ ಪೂರ್ತಿಯಾಗಿ ಹೋಮಮಾಡಿಬಿಟ್ಟನು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿಯಾಯಿತು.
22 : ಇದಾದ ಮೇಲೆ ಯಾಜಕಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ಮೋಶೆ ತರಿಸಿದನು. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು.
23 : ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
24 : ಬಳಿಕ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು ಆ ರಕ್ತದಲ್ಲಿ ಕಿಂಚಿತ್ತನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗು ಹಾಗು ಬಲಗಾಲಿನ ಹೆಬ್ಬೆಟ್ಟಿಗು ಹಚ್ಚಿದನು. ಉಳಿದ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು.
25 : ಹಾಗೆಯೆ ಮೋಶೆ ಆ ಟಗರಿನ ಕೊಬ್ಬನ್ನು, ಅಂದರೆ ಬಾಲದ ಕೊಬ್ಬು, ಕರುಳುಗಳ ಸುತ್ತಲಿನ ಕೊಬ್ಬು, ಕಾಳಿಜದ ಹತ್ತಿರವಿರುವ ಕೊಬ್ಬು, ಮೂತ್ರಪಿಂಡಗಳು ಅವುಗಳ ಮೇಲಿರುವ ಕೊಬ್ಬು, ಇವುಗಳನ್ನು ಮತ್ತು ಬಲದೊಡೆಯನ್ನು ತೆಗೆದುಕೊಂಡನು.
26 : ಸರ್ವೇಶ್ವರನ ಸನ್ನಿಧಿಯಲ್ಲಿ ಬುಟ್ಟಿಯಲ್ಲಿಟ್ಟಿದ್ದ ಹುಳಿಯಿಲ್ಲದ ತಿಂಡಿಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು.
27 : ಇವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿಸಿದನು.
28 : ಆಮೇಲೆ ಮೋಶೆ ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಬಲಿಪೀಠದಲ್ಲಿ ದಹನಬಲಿ ದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನಬಲಿ, ಯಾಜಕಾಭಿಷೇಕ ಬಲಿಯಾಗಿತ್ತು.
29 : ಮೋಶೆ ಬಲಿಪ್ರಾಣಿಯ ಎದೇಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು. ಸರ್ವೇಶ್ವರನ ಆಜ್ಞಾನುಸಾರ ಆ ಯಾಜಕಾಭಿಷೇಕ ಬಲಿಯ ಟಗರಿನ ಎದೆಯ ಭಾಗ ಮೋಶೆಗೆ ಸಲ್ಲತಕ್ಕದಾಗಿತ್ತು.
30 : ಬಳಿಕ ಮೋಶೆ ಅಭಿಷೇಕ ಎಣ್ಣೆಯಿಂದಲೂ ಬಲಿಪೀಠದ ಮೇಲಿದ್ದ ರಕ್ತದಿಂದಲೂ ಸ್ವಲ್ಪ ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೂ ಚಿಮುಕಿಸಿದನು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಪ್ರತಿಷ್ಠಿಸಿದನು.
31 : ಆರೋನನಿಗೂ ಅವನ ಮಕ್ಕಳಿಗೂ ಮೋಶೆ ಹೀಗೆಂದನು: “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಬೇಕು. ಅದನ್ನೂ ಯಾಜಕಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ರೊಟ್ಟಿಗಳನ್ನೂ ನೀವು ಅಲ್ಲೆ ಊಟಮಾಡಬೇಕು. ಇದು ಸರ್ವೇಶ್ವರನು ನನಗಿತ್ತ ಆಜ್ಞೆ.
32 : ಆ ಮಾಂಸದಲ್ಲಿ ಹಾಗು ರೊಟ್ಟಿಗಳಲ್ಲಿ ಮಿಕ್ಕದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು.
33 : ಇದಲ್ಲದೆ, ಈ ನಿಮ್ಮ ಯಾಜಕ ಸೇವಾವೃತ್ತಿಯ ದೀಕ್ಷೆಯನ್ನು ಪೂರೈಸುವುದಕ್ಕೆ ಏಳು ದಿವಸ ಹಿಡಿಯುವುದರಿಂದ ಆವರೆಗೂ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು.
34 : ನಿಮ್ಮ ದೋಷಪರಿಹಾರಕ್ಕಾಗಿ ಈ ದಿನ ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂಬುದು ಸರ್ವೇಶ್ವರನ ಆಜ್ಞೆ.
35 : ಆದುದರಿಂದ ನೀವು ಆ ಆಜ್ಞೆಯ ಮೇರೆಗೆ ಏಳು ದಿನಗಳೂ ಹಗಲಿರುಳು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ. ಇದು ಸರ್ವೇಶ್ವರನ ಆಜ್ಞೆ.
36 : ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ್ದನ್ನೆಲ್ಲಾ ಆರೋನ ಮತ್ತು ಅವನ ಮಕ್ಕಳು ಮಾಡಿದರು.