ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
12ನೇ ಅಧ್ಯಾಯ
1 : ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು.
2 : “ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?’ ಎಂದು ಹೇಳತೊಡಗಿದರು.
3 : ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧುಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು.
4 : ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, “ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು,” ಎಂದು ಆಜ್ಞಾಪಿಸಿದರು.
5 : ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು.
6 : ಅವರು ಸಮೀಪಿಸಿದಾಗ, “ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ.
7 : ನನ್ನ ದಾಸನಾದ ಮೋಶೆ ಅಂಥವನಲ್ಲ ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ.
8 : ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ, ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ ಸರ್ವೇಶ್ವರನ ಸ್ವರೂಪವನ್ನೆ ಕಂಡವನಾತ! ಇಂತಿರಲು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? ಎಂದು ಹೇಳಿ ಕೋಪದಿಂದ ಹೊರಟುಹೋದರು.
9 : ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡನು.
10 : ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡನು.
11 : ಆಗ ಆರೋನನು ಮೋಶೆಗೆ, “ಅಯ್ಯಾ, ನಾವು ಮೂರ್ಖರಾಗಿ ನಡೆದು ಪಾಪಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ,” ಇದು ನನ್ನ ವಿನಂತಿ.
12 : ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ,” ಎಂದು ಕೇಳಿಕೊಂಡನು.
13 : ಆಗ ಮೋಶೆ ಸರ್ವೇಶ್ವರನಿಗೆ, “ಹೇ ದೇವಾ, ಆಕೆಯನ್ನು ಗುಣಪಡಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಮೊರೆಯಿಟ್ಟನು.
14 : ಅದಕ್ಕೆ ಸರ್ವೇಶ್ವರ, “ಅವಳ ತಂದೆ ಅವಳ ಮುಖದ ಮೇಲೆ ಉಗುಳಿದ್ದರೆ ಏಳು ದಿವಸ ಅವಳು ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೆ? ಅಂತೆಯೇ ಅವಳು ಏಳು ದಿವಸ ಪಾಳೆಯದಿಂದ ಹೊರಗಿರಲಿ. ಅನಂತರ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟರು.
15 : ಹೀಗೆ ಮಿರ್ಯಾಮಳು ಏಳು ದಿವಸ ಪಾಳೆಯದ ಹೊರಗೆ ಇರಬೇಕಾಯಿತು. ಅವಳನ್ನು ಮರಳಿ ಸೇರಿಸಿಕೊಳ್ಳುವವರೆಗೆ ಇಸ್ರಯೇಲರು ಪ್ರಯಾಣ ಮಾಡಲಿಲ್ಲ.
16 : ಅನಂತರ ಅವರು ಹಚೆರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.